Advertisement

ಸಿದ್ಧಗಂಗೆ ಜನರೇ ಬೆಳೆಸಿದ ಮಠ: ಸಿದ್ಧಲಿಂಗ ಶ್ರೀ

11:49 AM Mar 08, 2020 | Naveen |

ಕಲಬುರಗಿ: ಸಿದ್ಧಗಂಗಾ ಮಠ ಶ್ರೀಮಂತಿಕೆಯಿಂದ ಬೆಳೆದ ಮಠವಲ್ಲ. ಲಿಂ. ಡಾ| ಶಿವಕುಮಾರ ಸ್ವಾಮೀಜಿ ಜೋಳಿಗೆ ಹಿಡಿದು ಹೊರಟಾಗ ಜನರೇ ಕಾಣಿಕೆ ನೀಡಿ ಬೆಳೆಸಿದ ಮಠವಾಗಿದೆ ಎಂದು ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಮಹಾಸ್ವಾಮೀಜಿ ನುಡಿದರು.

Advertisement

ನಗರದ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ಎಂಜಿನಿಯರಿಂಗ್‌ ಕಾಲೇಜು ಆವರಣದಲ್ಲಿ ಪೂಜ್ಯ ಡಾ| ಶಿವಕುಮಾರ ಸ್ವಾಮೀಜಿ ಸ್ಕೂಲ್‌ ಆಫ್‌ ಆರ್ಕಿಟೆಕ್ಚರ್‌ನ ಉದ್ಘಾಟನೆ, ಡಾ| ಶಿವಕುಮಾರ ಸ್ವಾಮೀಜಿಗಳ ಪುತ್ಥಳಿ ಅನಾವರಣಗೊಳಿಸಿ ಅವರು ಆಶೀರ್ವಚನ ನೀಡಿದರು.

ಡಾ| ಶಿವಕುಮಾರ ಸ್ವಾಮೀಜಿ ಜಾತಿ ನೋಡಲಿಲ್ಲ. ಯಾವುದೇ ಬೇಧ-ಭಾವ ಮಾಡಲಿಲ್ಲ. ಎಲ್ಲ ಜಾತಿ, ಧರ್ಮದ ಮಕ್ಕಳು ಊಟ ಮಾಡಬೇಕು. ಚೆನ್ನಾಗಿ ಓದಬೇಕು ಎನ್ನುವ ಒಂದೇ ಉದ್ದೇಶದಿಂದ ಮಠ ಬೆಳೆಸಿದರು. ಪಟ್ಟಣದ ಮಕ್ಕಳನ್ನು ಯಾರಾದರೂ ನೋಡಿಕೊಳ್ಳುತ್ತಾರೆ. ಆದರೆ, ಹಳ್ಳಿಗರ ಮಕ್ಕಳನ್ನು ಯಾರು ನೋಡುತ್ತಾರೆ ಎಂದು ತುಡಿತದಿಂದ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಆರಂಭಿಸಿದರು. ಶ್ರೀ ಮಠದ ಶೇ.99ರಷ್ಟು ಶಿಕ್ಷಣ ಸಂಸ್ಥೆಗಳು ಗ್ರಾಮೀಣ ಪ್ರದೇಶದಲ್ಲೇ ಇವೆ ಎಂದರು.

ಕಾಯಕ, ದಾಸೋಹ, ಶಿವಯೋಗ ಮತ್ತು ಸೇವೆ ಎನ್ನುವ ನಾಲ್ಕು ತತ್ವಗಳನ್ನೇ ಡಾ| ಶಿವಕುಮಾರ ಸ್ವಾಮೀಜಿ ಜೀವನದುದ್ದಕ್ಕೂ ಅನುಸರಿಸಿಕೊಂಡು ಬಂದರು. ಮಕ್ಕಳಲ್ಲಿಯೇ ದೇವರನ್ನು ಕಂಡ ದೇವತಾ ಮನುಷ್ಯರು ಅವರು. ಈ ಕಾರಣದಿಂದಲೇ ನೂರಾರು ಕಿ.ಮೀ ದೂರದ ಕಲಬುರಗಿಯಲ್ಲೂ ಅವರ ಬಗ್ಗೆ ಅಭಿಮಾನ, ಗೌರವ ಇದೆ. ಇಲ್ಲಿನ ಅನೇಕಾನೇಕ ಮಕ್ಕಳು ಶ್ರೀಮಠದಲ್ಲಿ ಓದಿ ಬೆಳೆದಿದ್ದಾರೆ ಎಂದರು.

ಬಸವಾದಿ ಶರಣರು 12ನೇ ಶತಮಾನದಲ್ಲೇ “ಜೀವನ ಸಂವಿಧಾನ’ ಬರೆದಿದ್ದಾರೆ. ಶರಣರ
ಸಂಪ್ರದಾಯವನ್ನು ಕಲಬುರಗಿಯ ಪೂಜ್ಯ ದೊಡ್ಡಪ್ಪ ಅಪ್ಪ ಮತ್ತು ತುಮಕೂರಿನ ಪೂಜ್ಯ ಶಿವಕುಮಾರ ಸ್ವಾಮೀಜಿ ಮುಂದುವರಿಸಿಕೊಂಡು ಬಂದರು. ಈ ಭಾಗದ ಹೃದಯದಲ್ಲಿ ಪೂಜ್ಯ ದೊಡ್ಡಪ್ಪ ಅಪ್ಪ ಅವರಂತೆ ಶಿವಕುಮಾರ ಸ್ವಾಮೀಜಿ ಇದ್ದಾರೆ. ಇಬ್ಬರನ್ನು ಜನತೆ ಎರಡು ಕಣ್ಣುಗಳೆಂದು ಭಾವಿಸಿದ್ದಾರೆ ಎಂದು ಬಣ್ಣಿಸಿದರು.

Advertisement

ಅಧ್ಯಕ್ಷತೆ ವಹಿಸಿದ್ದ ಎಚ್‌ಕೆಇ ಸಂಸ್ಥೆ ಅಧ್ಯಕ್ಷ ಡಾ| ಭೀಮಾಶಂಕರ ಬಿಲಗುಂದಿ ಮಾತನಾಡಿದರು. ವಿಧಾನ ಪರಿಷತ್‌ ಸದಸ್ಯ ಬಿ.ಜಿ. ಪಾಟೀಲ, ಎಚ್‌ಕೆಇ ಸಂಸ್ಥೆಯ ಉಪಾಧ್ಯಕ್ಷ ಶಿವಾನಂದ ದೇವರಮನಿ, ಕಾರ್ಯದರ್ಶಿ ಡಾ| ನಾಗೇಂದ್ರ ಮಂಠಾಳೆ, ಜಂಟಿ ಕಾರ್ಯದರ್ಶಿ ಗಂಗಾಧರ ಡಿ.ಎಲಿ, ಸದಸ್ಯರಾದ ಡಾ| ಬಸವರಾಜ ಪಾಟೀಲ, ಡಾ| ಸಂಪತ್‌ಕುಮಾರ ಲೋಯಾ, ವಿಜಯಕುಮಾರ ದೇಶಮುಖ, ನಿತಿನ್‌ ಜವಳಿ, ಅರುಣಕುಮಾರ ಪಾಟೀಲ, ಉದಯಕುಮಾರ ಚಿಂಚೋಳಿ, ಅನಿಲಕುಮಾರ ಮರಗೋಳ, ಡಾ| ಶರಣಬಸವಪ್ಪ ಕಾಮರೆಡ್ಡಿ, ಸತೀಶ್ಚಂದ್ರ ಹಡಗಲಿಮಠ, ಡಾ| ವೀರಭದ್ರ ನಂದ್ಯಾಳ, ಸ್ಕೂಲ್‌ ಆಫ್‌ ಆರ್ಕಿಟೆಕ್ಚರ್‌ ಪ್ರಾಂಶುಪಾಲ ವಜ್ರಕುಮಾರ ಮೆಹ್ತಾ, ಎಂಜಿನಿಯರಿಂಗ್‌ ಕಾಲೇಜಿನ ಪ್ರಭಾರಿ ಪ್ರಾಚಾರ್ಯ ಪ್ರೊ| ಶಶಿಧರ ಕಲಶೆಟ್ಟಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next