Advertisement

ಶಿಕ್ಷಕರ ಬಡ್ತಿ: ಅಧಿಕಾರಿಗಳ ಎಡವಟ್ಟು

11:10 AM Oct 04, 2019 | Naveen |

ಕಲಬುರಗಿ: ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿ ಆಯುಕ್ತಾಲಯ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ಹುದ್ದೆ ಬಡ್ತಿ ವಿಷಯದಲ್ಲಿ ಅಧಿಕಾರಿಗಳ ಎಡವಟ್ಟು ಬಯಲಾಗಿದೆ.

Advertisement

ಸಿಇಟಿ ರ್‍ಯಾಂಕಿಂಗ್‌ನಲ್ಲಿ ಪಡೆದಿದ್ದಕ್ಕಿಂತ ಹೆಚ್ಚಿನ ಅಂಕವನ್ನು ಅಧಿಕಾರಿಗಳೇ ನೀಡಿದ್ದಾರೆ. ಕಲಬುರಗಿ, ರಾಯಚೂರು, ಬೀದರ, ಯಾದಗಿರಿ, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳ ಒಟ್ಟು 357 ಮುಖ್ಯ ಶಿಕ್ಷಕರು ಮತ್ತು ತತ್ಸಮಾನ ವೃಂದದ ಹುದ್ದೆಗಳಿಗೆ ಮುಂಬಡ್ತಿಗೆ ಅರ್ಹತೆ ಹೊಂದಿರುವ ಶಿಕ್ಷಕರಿಗೆ ಸ್ಥಳ ನಿಯುಕ್ತಿ ಕೌನ್ಸೆಲಿಂಗ್‌ ಪ್ರಕ್ರಿಯೆ ಗುರುವಾರ ನಡೆಯಿತು. ಆದರೆ, ಮೆರಿಟ್‌ ಅಂಕಗಳಲ್ಲಿ ಲೋಪ-ದೋಷಗಳಾಗಿವೆ. ಕಡಿಮೆ ಮೆರಿಟ್‌ ಹೊಂದಿದವರಿಗೆ ಹೆಚ್ಚಿನ ಅಂಕ ತೋರಿಸಿ ಮುಂಬಡ್ತಿ ನೀಡಲಾಗುತ್ತಿದೆ. ಇದನ್ನು ಸರಿಪಡಿಸಬೇಕೆಂದು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಕೆಲ ಶಿಕ್ಷಕರು ಕೌನ್ಸೆಲಿಂಗ್‌ ಪ್ರಕ್ರಿಯೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಮುಂಬಡ್ತಿ ಪಟ್ಟಿಯಲ್ಲಿರುವ ಒಂಭತ್ತು ಜನ ಶಿಕ್ಷಕರ 2003-04ರ ಸಿಇಟಿ ರ್‍ಯಾಂಕಿಂಗ್‌ ಅಂಕಕ್ಕೂ ಮತ್ತು ಬಡ್ತಿ ಮೆರಿಟ್‌ಗೂ ತಾಳೆ ಆಗುತ್ತಿಲ್ಲ. ಸಿಇಟಿ ರ್‍ಯಾಂಕಿಂಗ್‌ನಲ್ಲಿ 57.79ರಷ್ಟು ಅಂಕ ಪಡೆದಿದ್ದರೆ, ಮೆರಿಟ್‌ ಪಟ್ಟಿಯಲ್ಲಿ ಶೇ.80 ಎಂದು ತೋರಿಸಲಾಗಿದೆ.

ಅದೇ ರೀತಿ ಉಳಿದ ಶಿಕ್ಷಕರ ರ್‍ಯಾಂಕಿಂಗ್‌ ಅಂಕಗಳು ತಪ್ಪಾಗಿವೆ. ಇದರಿಂದ ನೈಜವಾಗಿ ಬಡ್ತಿಗೆ ಅರ್ಹತೆ ಹೊಂದಿರುವ ಶಿಕ್ಷಕರಿಗೆ ಮೋಸವಾಗಿದೆ ಎಂದು ನೊಂದ ಶಿಕ್ಷಕರು ದೂರಿದರು. ಎರಡು ತಿಂಗಳ ಹಿಂದೆಯೇ ಬಡ್ತಿ ಪಟ್ಟಿಯಲ್ಲಿನ ಲೋಪಗಳನ್ನು ಗಮನಿಸಿ ಸರಿ ಪಡಿಸಬೇಕು. ಅರ್ಹ ಶಿಕ್ಷಕರ ಹೆಸರನ್ನು ಪಟ್ಟಿಯಲ್ಲಿ ಸೇರಿಸಬೇಕೆಂದು ಡಿಡಿಪಿಐ ಅವರಿಗೆ ಒತ್ತಾಯಿಸಲಾಗಿತ್ತು.

ಸರಿಪಡಿಸದೆ ಅದೇ ಪಟ್ಟಿ ಮುಂದಿಟ್ಟುಕೊಂಡು ಬಡ್ತಿಗೆ ಕೌನ್ಸೆಲಿಂಗ್‌ ನಡೆಸುತ್ತಿರುವುದು ಸರಿಯಲ್ಲ. ಇದಕ್ಕೆಲ್ಲ ಸ್ಥಳೀಯ ಡಿಡಿಪಿಐಗಳ ನಿರ್ಲಕ್ಷ್ಯವೇ ಕಾರಣವಾಗಿದೆ. ಕೆಲ ಶಿಕ್ಷಕರ ಸಿಇಟಿ ರ್‍ಯಾಂಕಿಂಗ್‌ ಅಂಕಗಳು ನಮಗೆ ಗೊತ್ತಿರುವುದರಿಂದ ಮುಂಬಡ್ತಿಯ ಲೋಪ-ದೋಷಗಳು ಬೆಳಕಿಗೆ ಬಂದಿವೆ ಎಂದು ರಾಯಚೂರಿನ ಶಿಕ್ಷಕರು ತಮ್ಮ ಆಳಲು ತೋಡಿಕೊಂಡರು.

Advertisement

ಹೆಚ್ಚಿನ ಅಂಕ ಕೊಟ್ರಾ!: ಆಶ್ಚರ್ಯವೆಂದರೆ ಶಿಕ್ಷಕರ ಜೇಷ್ಠತಾ ಪಟ್ಟಿಯಲ್ಲಿ ಶಿಕ್ಷಕರೊಬ್ಬರಿಗೆ ಸಿಇಟಿ ರ್‍ಯಾಂಕಿಂಗ್‌ನ ಮೂಲ ಅಂಕಕ್ಕಿಂತ ಹೆಚ್ಚಿನ ಅಂಕ ಕೊಟ್ಟಿರುವುದು ಅಧಿಕಾರಿಗಳ ಎಡವಟ್ಟಿಗೆ ಹಿಡಿದ ಕೈಗನ್ನಡಿಯಾಗಿದೆ. ಸಿಇಟಿ ರ್‍ಯಾಂಕಿಂಗ್‌ನಲ್ಲಿ 61.39 ಅಂಕಗಳಿವೆ. ಆದರೆ, ಜೇಷ್ಠತಾ ಪಟ್ಟಿಯಲ್ಲಿ 65 ಅಂಕಗಳನ್ನು ತೋರಿಸಲಾಗಿದೆ. ನನಗೆ ಹೆಚ್ಚಿನ ಅಂಕ ಬೇಡ. ನಾನು ಪಡೆದ ಅಂಕ ಕೊಡಿ ಸಾಕು ಎಂದು ಆ ಶಿಕ್ಷಕ ಐದು ತಿಂಗಳ ಹಿಂದೆ ಬಿಇಒಗೆ ಮನವಿ ಸಲ್ಲಿಸಿದ್ದರೂ, ಅದು ಸರಿಯಾಗಿಲ್ಲ. ವಿಷಯವನ್ನು ಗುರುವಾರ ಆಯುಕ್ತರ ಗಮನಕ್ಕೆ ತರಲಾಗಿದ್ದು, ಅಧಿಕಾರಿಗಳ ಚಮತ್ಕಾರ ಕಂಡು ಆಯುಕ್ತರು ನಕ್ಕು ಸುಮ್ಮನಾದರು. ಅಧಿಕಾರಿಗಳು ಮಾಡಿದ ತಪ್ಪು ನನ್ನ ಕೆಲಸಕ್ಕೆ ತೊಂದರೆಯಾಗಲಿದೆ ಎಂದಾಗ, ಲೋಪ ಸರಿಪಡಿಸಲಾಗುವುದು ಎಂದು ಆಯುಕ್ತರು ಭರವಸೆ ನೀಡಿದ್ದಾರೆ ಎಂದು ಶಿಕ್ಷಕರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next