ಕಲಬುರಗಿ: ಎಲ್ಲರಿಗೂ ಸಮಾನ ಹಕ್ಕು ಒದಗಿಸುವಂತ ಸಂವಿಧಾನ ರಚಿಸುವ ಮೂಲಕ ದೇಶಕ್ಕೆ ಹೊಸ ದಿಕ್ಕು ನೀಡಿದ ಡಾ| ಬಿ.ಆರ್. ಅಂಬೇಡ್ಕರ್ ಭಾರತೀಯರ ಸೂರ್ಯ ಎಂದು ಸುಲಫಲ ಮಠದ ಜಗದ್ಗುರು ಡಾ| ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ನಗರದ ಸಿದ್ಧಾರ್ಥ ನಗರ ಸ್ಮಶಾನದಲ್ಲಿ ಶುಕ್ರವಾರ ಡಾ| ಬಿ.ಆರ್. ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನದ ಅಂಗವಾಗಿ ವಿದ್ಯಾರ್ಥಿ ಬಂಧುತ್ವ ವೇದಿಕೆ ಆಯೋಜಿಸಿದ್ದ ಮೌಡ್ಯ ವಿರೋಧಿ ಸಂಕಲ್ಪ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜ ಸುಧಾರಕರಾದ ಬುದ್ಧ, ಬಸವ ಮತ್ತು ಅಂಬೇಡ್ಕರ್ ದೇಶಕ್ಕೆ ಬೆಳಕು ನೀಡಿದ ರತ್ನಗಳು. ಸಂವಿಧಾನದ ಮೂಲಕ ದೇಶದ ಜನಮಾನಸದಲ್ಲಿ ಅಂಬೇಡ್ಕರ್ ಇನ್ನೂ ಜೀವಂತವಾಗಿದ್ದಾರೆ. ಜ್ಞಾನದ ಕಣಜವಾಗಿದ್ದ ಅವರು ಶೋಷಿತರ ಜನರನ್ನು ಮೇಲೆತ್ತುವುದಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು ಎಂದರು.
ದೆವ್ವ, ಭೂತ, ಪಿಶಾಚಿಗಳು ಮಾನಸಿಕ ದೌರ್ಬಲ್ಯಗಳಾಗಿವೆ. ಜ್ಯೋತಿಷ್ಯ ಹೇಳುವವರು, ತಾಯತ ಕಟ್ಟುವವರನ್ನೇ ಸ್ವಾಮಿಗಳೆಂದು ನಂಬಿರುವ ಮೌಡ್ಯವನ್ನು ಸಮಾಜದಲ್ಲಿ ಬಿತ್ತಲಾಗಿದೆ. ಜನರಲ್ಲಿ ಕಂದಾಚಾರ, ಮೂಢನಂಬಿಕೆ ಕೊನೆಗಾಣಿಸಿ ವೈಚಾರಿಕ ಪ್ರಜ್ಞೆ ಮೂಡಿಸುವ ಕೆಲಸ ಮಾಡಬೇಕಿದೆ ಎಂದರು.
ಬೀದರನ ಲಿಂಗಾಯತ ಮಹಾಮಠದ ಪೀಠಾಧ್ಯಕ್ಷೆ ಅಕ್ಕ ಅನ್ನಪೂರ್ಣತಾಯಿ ಮಾತನಾಡಿ, ಅಂಬೇಡ್ಕರ್ ಬರೆದ ಸಂವಿಧಾನ ಭಾರತದ ನಿಜವಾದ ಗ್ರಂಥವಾಗಿದೆ. ದಲಿತರು ಕೆರೆ ನೀರು ಬಳಕೆ ಮಾಡುವಂತಿರಲಿಲ್ಲ. ಮೇಲ್ಜಾತಿಯವರನ್ನು ಸ್ಪರ್ಶಿಸುವಂತಿರಲಿಲ್ಲ. ದಲಿತರ ಸ್ಥಿತಿಯನ್ನು ಸ್ಮರಿಸಿ ಅಂಬೇಡ್ಕರ್ ಹಲವು ಬಾರಿ ಕಣ್ಣೀರು ಹಾಕಿದ್ದರು. ಮಹಿಳಾ ಸಮಾನತೆಗಾಗಿ ಸಚಿವ ಸ್ಥಾನವನ್ನು ತ್ಯಾಗ ಮಾಡಿದ್ದರು. ಆದರೀಗ ಮೀಸಲಾತಿ ಮೂಲಕ ಸಮಾನತೆ ಹಕ್ಕು ಪಡೆಯಲು ಸಾಧ್ಯವಾಗಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ಜಗದೀಶ ಚೌರ ಮಾತನಾಡಿ, ಶಿಕ್ಷಣವೇ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಪ್ರಬಲ ಅಸ್ತ್ರ. ಇದನ್ನು ಡಾ| ಅಂಬೇಡ್ಕರ್ ಜೀನದುದ್ದಕ್ಕೂ ಪ್ರತಿಪಾದಿಸಿದ್ದರು. ಶಿಕ್ಷಣ ಪಡೆದು ಸುಶಿಕ್ಷಿತರಾಗಬೇಕು. ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಸಿದ್ಧಾರ್ಥ ಬುದ್ಧ ವಿಹಾರದ ಭಂತೆ ಸಂಘಾನಂದ ಸಾನ್ನಿಧ್ಯ ವಹಿಸಿದ್ದರು. ಹಿರಿಯ ದಲಿತ ನಾಯಕ ಡಾ|
ವಿಠ್ಠಲ ದೊಡ್ಡಮನಿ, ಜಿ.ಪಂ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ, ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಯಂಕಂಚಿ, ವಿಶ್ವಜ್ಯೋತಿಷ್ಠಾನದ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ವಿದ್ಯಾರ್ಥಿ ಬಂಧುತ್ವ ವೇದಿಕೆ ವಿಭಾಗೀಯ ಸಂಚಾಲಕ ದಿನೇಶ ದೊಡ್ಡಮನಿ, ಮುಖಂಡರಾದ ಪ್ರಭು ಖಾನಪುರೆ, ಶ್ಯಾಮ ನಾಟೀಕರ, ಸಂತೋಷ ಮೇಲ್ಮನಿ, ಸಿದ್ಧಾರ್ಥ ಚಿಮ್ಮಾ ಇದಲಾಯಿ ಮತ್ತಿತರರು ಇದ್ದರು.