Advertisement

ಮೊದಲ ದಿನವೇ ಸಾರಿಗೆ ನಿರೀಕ್ಷೆ ಹುಸಿ

12:19 PM May 20, 2020 | Naveen |

ಕಲಬುರಗಿ: ಸಾರಿಗೆ ಬಸ್‌ ಸಂಚಾರ ಆರಂಭವಾದ ಮೊದಲ ದಿನವೇ ಪ್ರಯಾಣಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಪ್ರಯಾಣಿಸಲು ಸಾರ್ವಜನಿಕರು ಆಸಕ್ತಿ ತೋರದ ಕಾರಣ ನಿಲ್ದಾಣಗಳಲ್ಲೇ ಅನೇಕ ಬಸ್‌ಗಳು ನಿಂತವು. ಮಂಗಳವಾರ 1,200 ಬಸ್‌ ಗಳ ಓಡಾಟ ನಿರೀಕ್ಷೆ ಹೊಂದಿದ್ದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇವಲ 281 ಬಸ್‌ಗಳ ಕಾರ್ಯಾಚರಣೆ ನಡೆಸಿದವು.

Advertisement

ಈಶಾನ್ಯ ಸಾರಿಗೆ ವ್ಯಾಪ್ತಿಯ ಕಲಬುರಗಿ, ಬೀದರ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯಪುರ ಜಿಲ್ಲೆಗಳಲ್ಲೇ ಬಹುತೇಕ ಬಸ್‌ಗಳು ಸಂಚರಿಸಿದ್ದು, ಬಳ್ಳಾರಿಯಿಂದ ಮಾತ್ರ ಬೆಂಗಳೂರಿಗೆ 5 ಬಸ್‌ಗಳು ಪ್ರಯಾಣಿಸಿದವು. ಉಳಿದಂತೆ ಅಕ್ಕ-ಪಕ್ಕದ ಜಿಲ್ಲೆಗಳಿಗೆ ಮಾತ್ರ ಬಸ್‌ ಸೀಮಿತವಾಗಿದ್ದವು.

ಬೆಳಿಗ್ಗೆ 7ಗಂಟೆಗೆ ಆರಂಭವಾದ ಬಸ್‌ ಸಂಚಾರ, ಸಂಜೆ 7ಗಂಟೆಗೆ ಅಂತ್ಯವಾಯಿತು. ಯಾವುದೇ ನಿಲ್ದಾಣದಿಂದ ಬಸ್‌ ಹೋದರೂ ಸಂಜೆ 7ಗಂಟೆ ತಲುಪುವ ಹಾಗೂ ಮರಳಿ ಬರುವ ಮಾರ್ಗಗಳಿಗೆ ಮಾತ್ರ ಬಿಡಲಾಯಿತು. ಹೀಗಾಗಿ ಸಮಯ ನಿಗದಿಯಿಂದ ಕಲಬುರಗಿಯಂತಹ ಕೇಂದ್ರ ಬಸ್‌ ನಿಲ್ದಾಣದಲ್ಲೂ 6 ಗಂಟೆ ವೇಳೆಗೆ ಸಂಚಾರ ನಿಲ್ಲಿಸುವ ಅನಿರ್ವಾಯತೆ ಎದುರಾಯಿತು. ಇಲ್ಲಿನ ಬಸ್‌ ನಿಲ್ದಾಣದಿಂದ ವಿವಿಧೆಡೆ ಸಂಚಾರಕ್ಕೆ 50 ಬಸ್‌ಗಳು ಸಿದ್ಧವಾಗಿದ್ದವು. ಆದರೆ, 31 ಬಸ್‌ಗಳು ಮಾತ್ರ ಸಂಚರಿಸಿದವು. ಬೀದರ-6, ವಿಜಯಪುರ-5, ಸುರಪುರ-4, ಯಾದಗಿರಿ-ಆಳಂದ ತಲಾ 2 ಹಾಗೂ ರಾಯಚೂರು, ಲಿಂಗಸೂಗುರು, ಅಫಜಲಪುರ, ಚಿತ್ತಾಪುರ, ಜೇವರ್ಗಿ, ಶಹಾಬಾದ್‌ಗೆ ಕೇವಲ 1
ಬಸ್‌ ಕಾರ್ಯಾಚರಣೆ ನಡೆಸಿತು. ಚಿಂಚೋಳಿ, ಸೇಡಂಗೆ ಬಸ್‌ಗಳು ಇದ್ದರೂ ಪ್ರಯಾಣಿಕರು ಇರಲಿಲ್ಲ. ಬಸ್‌ ನಿಲ್ದಾಣದಲ್ಲಿ ತುಂಬಾ ಪ್ರಯಾಣಿಕರಿಗಿಂತ ಹೆಚ್ಚು ಸಿಬ್ಬಂದಿಯೇ ಕಂಡು ಬಂದರು. ಆದ್ದರಿಂದ 25ರಿಂದ 30 ಜನ ತುಂಬಿದರೆ ಮಾತ್ರ ಬಸ್‌ ಓಡಿಸಲಾಯಿತು.

ಮಾರ್ಗ ಮಧ್ಯೆ ನಿಲ್ಲಲ್ಲ: ನಿಲ್ದಾಣದಿಂದ ನಿಲ್ದಾಣಕ್ಕೆ ನೇರವಾಗಿ ಬಸ್‌ಗಳ ಕಾರ್ಯಾಚರಣೆ ನಡೆಸಿದವು. ಮಾರ್ಗ ಮಧ್ಯೆಯಲ್ಲಿ ಬಸ್‌ನಿಂದ ಇಳಿಯಲು ಅವಕಾಶ ನೀಡಿದರೂ, ಪ್ರಯಾಣಿಕರನ್ನು ಹತ್ತುವಾಗಿರಲಿಲ್ಲ. ಈ ಬಗ್ಗೆ ಪ್ರಯಾಣಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು. ಕಾಲೇಜಿನ ಕೆಲಸ ನಿಮಿತ್ತ ಚೌಡಾಪುರಕ್ಕೆ ತೆರಳ ಬೇಕಿತ್ತು. ಹೀಗಾಗಿ ಅಫಜಲಪುರ ಬಸ್‌ ಹತ್ತಲು ಹೋಗಿದ್ದೆ. ಹೋಗಬೇಕಾದರೆ ಚೌಡಾಪುರದಲ್ಲಿ ಇಳಿಸುತ್ತೇವೆ. ಆದರೆ, ಬರಬೇಕಾದರೆ ಬಸ್‌ ನಿಲ್ಲಿಸಲ್ಲ ಎಂದು ಹೇಳುತ್ತಾರೆ. ನಾವು ಮರಳಿ ಮನೆಗೆ ಬರುವುದು ಹೇಗೆ ಎಂದು ಖಾಸಗಿ ಕಾಲೇಜಿನ ಪ್ರಾಂಶುಪಾಲ ಶರಣಯ್ಯ ಹಿರೇಮಠ ಖಾರವಾಗಿ ಪ್ರಶ್ನಿಸಿದರು.

ಸಾಮಾಜಿಕ ಅಂತರಕ್ಕೆ ಒತ್ತು: ಬಸ್‌ ನಿಲ್ದಾಣ ಮತ್ತು ಬಸ್‌ಗಳಲ್ಲಿ ಪ್ರಯಾಣಿಸುವಾಗ ಸಾಮಾಜಿಕ ಅಂತರಕ್ಕೆ ಹೆಚ್ಚಿನ ಒತ್ತು ನೀಡಲಾಯಿತು. ಬಸ್‌ನೊಳಗೆ ಮೂರು ಆಸನಗಳ ವ್ಯವಸ್ಥೆ ಇರುವ ಕಡೆ ಇಬ್ಬರು ಮತ್ತು ಎರಡು ಆಸನದಲ್ಲಿ ಒಬ್ಬರೇ ಪ್ರಯಾಣಿಕರು ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಯಿತು. ಅದೇ ರೀತಿ ಬಸ್‌ ನಿಲ್ದಾಣದ ಕುಳಿತುಕೊಳ್ಳುವಲ್ಲೂ ಸಾಮಾಜಿಕ ಅಂತರ ಕಾಪಾಡಲು ಒಂದು ಬಿಟ್ಟು ಮತ್ತೊಂದು ಆಸನದಲ್ಲಿ ಗಟ್ಟಿ ಕಟ್ಟಲಾಗಿತ್ತು. ಬಸ್‌ ನಿಲ್ದಾಣದ ಆಗಮನ ಮತ್ತು ನಿರ್ಗಮನಕ್ಕೆ ಒಂದೇ ಪ್ರವೇಶ ದ್ವಾರದ ಮಾಡಲಾಯಿತು. ಸೋಂಕು ನಿವಾರಕ ಔಷಧಿ ಸಿಂಪಡಣೆ ಸುರಂಗ ಸ್ಥಾಪಿಸಿ, ಅದರ ಮುಖಾಂತರವೇ ಪ್ರಯಾಣಿಕರು ಪ್ರವೇಶಿಸಲು ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ ಥರ್ಮಲ್‌ ಸ್ಕ್ಯಾನಿಂಗ್‌ ಮಾಡಿ, ಪ್ರತಿ ಪ್ರಯಾಣಿಕರು ಹೆಸರು, ಮೊಬೈಲ್‌ ನಂಬರ್‌ ದಾಖಲಿಸಿಕೊಳ್ಳಲಾಯಿತು.

Advertisement

ಇಂದು ಬೆಂಗಳೂರಿಗೆ ಬಸ್‌
ಮಂಗಳವಾರ ಬೆಂಗಳೂರಿಗೆ ತೆರಳಲು ಪ್ರಯಾಣಿಕರಿದ್ದರೂ ಬಸ್‌ಗಳ ವ್ಯವಸ್ಥೆ ಇರಲಿಲ್ಲ. ಬೆಂಗಳೂರಿನ ವ್ಯವಸ್ಥೆ ಮಾಹಿತಿ ಪಡೆಯಲು ನೌಕರರು, ವರ್ತಕರು ಬಸ್‌ ನಿಲ್ದಾಣಕ್ಕೆ ಬಂದಿದ್ದರು. ಹೀಗಾಗಿ ಬುಧವಾರದಿಂದ ಕಲಬುರಗಿ ಸೇರಿದಂತೆ ವಿವಿಧ ಬಸ್‌ ನಿಲ್ದಾಣಗಳಿಂದ ಬೆಂಗಳೂರಿಗೆ ಬಸ್‌ಗಳಿಗೆ ಕಾರ್ಯಾಚರಣೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹುಬ್ಬಳ್ಳಿ, ಬೆಳಗಾವಿ, ದಾವಣಗೆರೆ, ಶಿವಮೊಗ್ಗ, ಬಾಗಲಕೋಟೆ, ಮೈಸೂರಿಗೂ ಬಸ್‌ ಸಂಚರಿಸಲಿವೆ ಎಂದು ಎನ್‌ಇಕೆಆರ್‌ಟಿಸಿಯ ಮುಖ್ಯ ಸಂಚಾರ ವ್ಯವಸ್ಥಾಪಕ ಡಿ.ಕೊಟ್ರಪ್ಪ ತಿಳಿಸಿದ್ದಾರೆ.

ಮೊದಲ ದಿನ ನಿರೀಕ್ಷೆಯಿಂದ ಕಡಿಮೆ ಪ್ರಮಾಣದಲ್ಲಿ ಬಸ್‌ಗಳು ಕಾರ್ಯಾಚರಣೆ ನಡೆಸಿವೆ. ಮಂಗಳವಾರ ಸಹ ಹಲವು ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳು ಕಂಡು ಬಂದಿದ್ದರಿಂದ ಸಾರ್ವಜನಿಕರು ಪ್ರಯಾಣಿಸಲು ಮುಂದೆ ಬಂದಿಲ್ಲ ಎಂದೆನಿಸುತ್ತದೆ.
ಜಹೀರಾ ನಸೀಂ,
ವ್ಯವಸ್ಥಾಪಕ ನಿರ್ದೇಶಕಿ, ಎನ್‌ಇಕೆಆರ್‌ಟಿಸಿ

Advertisement

Udayavani is now on Telegram. Click here to join our channel and stay updated with the latest news.

Next