ಕಲಬುರಗಿ: ರಾಜ್ಯದ ಕರಾವಳಿ ಭಾಗದಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಆದರೆ, ಹೈದ್ರಾಬಾದ್-ಕರ್ನಾಟಕ ಭಾಗದಲ್ಲಿ ವಾಡಿಕೆಗಿಂತಲೂ ಕಡಿಮೆ ಮಳೆಯಾಗಿದ್ದು, ಕುಡಿಯುವ ನೀರಿಗೂ ಪರದಾಟ ಮುಂದುವರಿದಿದೆ. ವಿಭಾಗೀಯ ಕೇಂದ್ರ ಸ್ಥಾನ ಕಲಬುರಗಿ ಜಿಲ್ಲೆಯಲ್ಲಿ 229 ಗ್ರಾಮಗಳಿಗೆ ಟ್ಯಾಂಕರ್ ನೀರೇ ಗತಿಯಾಗಿದೆ.
ಕಳೆದ ಮೂರು ವರ್ಷಗಳಿಂದ ಸತತ ಹಿಂಗಾರು ಮತ್ತು ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದು, ಪ್ರಸಕ್ತ ವರ್ಷ ಮುಂಗಾರು ಆರಂಭವಾಗಿ ಎರಡು ತಿಂಗಳು ಕಳೆದರೂ ನಿರೀಕ್ಷಿತ ಮಳೆ ಸುರಿಯುತ್ತಿಲ್ಲ. ಆದ್ದರಿಂದ ಕಳೆದ ಬೇಸಿಗೆಯಲ್ಲಿ ಆರಂಭವಾದ ಟ್ಯಾಂಕರ್ ನೀರು ಪೂರೈಕೆ ಇನ್ನೂ ಮುಂದುವರಿದಿದೆ. ಜಿಲ್ಲೆಯಲ್ಲಿ ಹಳ್ಳ, ಕೊಳ್ಳ, ಕೊಳವೆ ಬಾವಿಗಳು ಬತ್ತಿ ಹೋಗಿ ನೀರಿನ ಸಮಸ್ಯೆ ತಾರಕಕ್ಕೇರಿದ್ದರಿಂದ ಕಳೆದ ಏಪ್ರಿಲ್ನಲ್ಲಿ ಜಿಲ್ಲಾಡಳಿತ 750ಕ್ಕೂ ಅಧಿಕ ಗ್ರಾಮಗಳನ್ನು ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಿದೆ.
750 ಗ್ರಾಮಗಳ ಪೈಕಿ 200ಕ್ಕೂ ಹೆಚ್ಚು ಗ್ರಾಮಗಳು ಜಲ ಮೂಲಗಳನ್ನೇ ಕಳೆದುಕೊಂಡಿವೆ. ಪರಿಣಾಮ ಮಳೆಗಾಲದಲ್ಲೂ ಜೀವ ಜಲಕ್ಕಾಗಿ ಗ್ರಾಮೀಣ ಭಾಗದ ಜನತೆ ಪರಿತಪಿಸುವಂತಾಗಿದ್ದು, ಜನ ಜೀವನ ಹೀನಾಯ ಸ್ಥಿತಿಗೆ ತಲುಪುವಂತೆ ಮಾಡಿದೆ. ಅಫಜಲಪುರ, ಆಳಂದ, ಜೇವರ್ಗಿ, ಚಿತ್ತಾಪುರ ಮತ್ತು ಚಿಂಚೋಳಿ ತಾಲೂಕಿನಲ್ಲಿ ನೀರಿನ ಬವಣೆ ಹೆಚ್ಚಾಗಿದ್ದು, ಖಾಲಿ ಕೊಡಗಳನ್ನು ಹಿಡಿದು ಮಕ್ಕಳು, ಮಹಿಳೆಯರು, ವೃದ್ಧರು ಅಲೆಯುವ ದೃಶ್ಯ ಸಾಮಾನ್ಯವಾಗಿದೆ.
ಪ್ರತಿ ದಿನ 527 ಟ್ರಿಪ್: ಸರಿಯಾಗಿ ಮಳೆಯಾಗದ ಕಾರಣ ನೀರಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ. ಇಂದಿಗೂ 229 ಗ್ರಾಮಗಳ ಗ್ರಾಮಸ್ಥರು ಟ್ಯಾಂಕರ್ ನೀರನ್ನು ಅವಲಂಬಿತರಾಗಿದ್ದಾರೆ. ಜಿಪಂ ವತಿಯಿಂದ ಗ್ರಾಮಗಳಿಗೆ ವಿವಿಧ ಜಲ ಮೂಲಗಳಿಂದ ನೀರು ಪೂರೈಸುವ ಕಾರ್ಯವಾಗುತ್ತಿದೆ.
ಜಿಲ್ಲಾದ್ಯಂತ 229 ಗ್ರಾಮಗಳಿಗೆ ವಿವಿಧ ಜಲ ಮೂಲಗಳಿಂದ ಪ್ರತಿದಿನ 527 ಟ್ರಿಪ್ ನೀರು ಸರಬರಾಜು ಮಾಡಲಾಗುತ್ತಿದೆ. ಇದಕ್ಕಾಗಿ 179 ಟ್ಯಾಂಕರ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ಜತೆಗೆ ನೀರು ಪೂರೈಸಲೆಂದು 136 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಪಡೆಯಲಾಗಿದೆ. ಕೆಲ ಗ್ರಾಮಗಳಲ್ಲಿ ಟ್ಯಾಂಕರ್ ನೀರು ಎರಡು ದಿನಕ್ಕೊಮೆ ಬರುತ್ತಿದ್ದು, ಟ್ಯಾಂಕರ್ ಬರುವುದನ್ನು ಗ್ರಾಮಸ್ಥರು ಕಾಯುವಂತಾಗಿದೆ.
ಮಳೆ ಇಲ್ಲದೇ ಭೀಮಾ, ಅಮರ್ಜಾ, ಬೆಣ್ಣೆತೊರಾ, ಕಾಗಿಣಾ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕುಸಿದಿದೆ. ಮಹಾರಾಷ್ಟ್ರದಲ್ಲಿ ಮಳೆ ಆಗಿದ್ದರಿಂದ ಕೃಷ್ಣಾ ದಿನ ಮೂಲಕ ನಾರಾಯಣಪುರ ಜಲಾಶಯಕ್ಕೆ ನೀರು ಹರಿಸಲಾಗಿದೆ. ಇದರಿಂದ ಭೀಮಾ ನದಿಗೆ ಸ್ವಲ್ಪ ನೀರು ಬಂದಿದ್ದು, ಕಲಬುರಗಿ ಮಹಾನಗರಕ್ಕೆ ಕುಡಿಯಲು ಸ್ವಲ್ಪ ನೀರು ಸಿಕ್ಕಂತಾಗಿದೆ.ಅಫಜಲಪುರ ಪುರಸಭೆ ವ್ಯಾಪ್ತಿ ನೀರಿನ ಅಭಾವ ನೀಗಿಸಲು ಸೊನ್ನ ಬ್ಯಾರೇಜ್‌ನಿಂದ ಭೀಮಾ ನದಿಗೆ 0.01 ಟಿಎಂಸಿ ಅಡಿ ನೀರನ್ನು ಜು.23ರಿಂದ ಆ.21ರವರೆಗೆ ಹರಿಸಲಾಗುತ್ತಿದೆ. ಅಫಜಲಪುರದ ಜನತೆ ನಿಟ್ಟುಸಿರು ಬಿಡುವಂತಾಗಿದೆ.