ಹಣಮಂತರಾವ ಭೈರಾಮಡಗಿ
ಕಲಬುರಗಿ: ಕಳೆದ 2018-19ನೇ ಸಾಲಿನಲ್ಲಿ ಬರಗಾಲದಿಂದ ಹಾನಿಗೀಡಾದ ಹಿಂಗಾರು ಹಂಗಾಮಿನ ಬೆಳೆಗಳಿಗೆ ಕೊನೆಗೂ (ಇನ್‌ಫುಟ್ ಸಬ್ಸಿಡಿ) ಪರಿಹಾರ ಮಂಜೂರಾಗಿದ್ದು, ರೈತರ ಹೆಸರುಗಳನ್ನು ಪರಿಹಾರ ವಿತರಣೆ ತಂತ್ರಾಂಶದಲ್ಲಿ ದಾಖಲಿಸುವಂತೆ ಕೃಷಿ ಇಲಾಖೆಗೆ ನಿರ್ದೇಶನ ನೀಡಲಾಗಿದೆ.
ಬಲ್ಲ ಮೂಲಗಳ ಪ್ರಕಾರ 15 ದಿನದೊಳಗೆ ಎಲ್ಲ ರೈತರ ಖಾತೆಗೆ ಪರಿಹಾರ ಮೊತ್ತ ಜಮಾ ಆಗಲಿದೆ. ಕಳೆದ ವರ್ಷ ಬರಗಾಲದಿಂದ ಎಲ್ಲ ಬೆಳೆಗಳು ಕೈ ಕೊಟ್ಟಿದ್ದವು. ಈ ಹಿನ್ನೆಲೆಯಲ್ಲಿ ಎನ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರ 169 ಕೋಟಿ ರೂ. ಪರಿಹಾರ ಬಿಡುಗಡೆಯಾಗಿದೆ.
ಕಳೆದ ವರ್ಷ ಮಳೆ ಬಾರದೇ ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಎಲ್ಲ ಬೆಳೆಗಳು ಸಂಪೂರ್ಣ ನಾಶವಾಗಿದ್ದಕ್ಕೆ ರಾಜ್ಯದ ಹಲವಾರು ಜಿಲ್ಲೆಗಳಿಗೆ ನೂರಾರು ಕೋಟಿ ರೂ. ಪರಿಹಾರ ಬಿಡುಗಡೆಯಾಗಿತ್ತು. ಆದರೆ ಬಿಸಿಲು ನಾಡು ಕಲಬುರಗಿಗೆ ಮಾತ್ರ ನಯಾಪೈಸೆ ಪರಿಹಾರ ಬಿಡುಗಡೆಯಾಗಿರಲಿಲ್ಲ. ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಸಮರ್ಪಕ ವರದಿ ರೂಪಿಸದ ಹಿನ್ನೆಲೆಯಲ್ಲಿ ಜತೆಗೆ ಸರ್ಕಾರ ಕೂಡಾ ನಿರ್ಲಕ್ಷ್ಯ ವಹಿಸಿದ ಪರಿಣಾಮ ಕಲಬುರಗಿಯಲ್ಲಿ ತೊಗರಿ ಬೆಳೆದ ರೈತ ಪರಿಹಾರದಿಂದ ವಂಚಿತವಾಗಿದ್ದ.
ಈ ಹಿನ್ನೆಲೆಯಲ್ಲಿ ಕಳೆದ ವರ್ಷದ ಮುಂಗಾರು ಹಾಗೂ ಹಿಂಗಾರು ಬೆಳೆ ಹಾನಿಗೆ ಪರಿಹಾರ ಬಿಡುಗಡೆ ಮಾಡಲು ಮೀನಾ ಮೇಷ ಎಂಬುದಾಗಿ “ಉದಯವಾಣಿ’ಯಲ್ಲಿ ಮೂರು ವಿಶೇಷ ವರದಿಗಳನ್ನು ಪ್ರಕಟಿಸಲಾಗಿತ್ತು. ಅಲ್ಲದೇ ಈ ಕುರಿತು ಸಂಸದರನ್ನು ಪ್ರಶ್ನಿಸಲಾಗಿತ್ತು. ವರದಿಗಳಿಂದ ಕೊನೆಗೂ ಎಚ್ಚೆತ್ತುಕೊಂಡ ಸರ್ಕಾರ ಹಿಂಗಾರು ಬೆಳೆಹಾನಿಗೆ ಮಾತ್ರ ಪರಿಹಾರ ಬಿಡುಗಡೆ ಮಾಡಿ ಕೈ ತೊಳೆದುಕೊಳ್ಳಲು ಮುಂದಾಗಿದೆ.
ಕಳೆದ ವರ್ಷದ ಮುಂಗಾರು ಹಂಗಾಮಿನಲ್ಲೇ ಮಳೆ ಕೊರತೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಮುಂಗಾರಿನಲ್ಲಿ ಎನ್ ಡಿಆರ್‌ಎಫ್ ನಿಯಮಾವಳಿ ಪ್ರಕಾರ ಕಲಬುರಗಿ ಜಿಲ್ಲೆಗೆ 290 ಕೋಟಿ ರೂ. ಬೆಳೆ ಹಾನಿ ಪರಿಹಾರ ಬಿಡುಗಡೆಯಾಗಬೇಕಿದೆ. ಆದರೆ ಸರ್ಕಾರ ಹಿಂಗಾರು ಬೆಳೆ ಹಾನಿಗೆ (ಇನ್‌ಪುಟ್ ಸಬ್ಸಿಡಿ) ಮಾತ್ರ ಪರಿಹಾರ ಮಂಜೂರು ಮಾಡಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.
ಕಳೆದ ವರ್ಷ ಮುಂಗಾರು ಹಂಗಾಮಿನ ವಾಣಿಜ್ಯ ತೊಗರಿ ಬೆಳೆಯೇ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ. ಶೇ. 70ರಷ್ಟು ಬೆಳೆ ಮಳೆ ಕೊರತೆಯಿಂದ ಹಾನಿಯಾಗಿದೆ. ಆದರೆ ಹಿಂಗಾರು ಹಂಗಾಮಿನ ಪ್ರಮುಖ ಜೋಳ ಸ್ವಲ್ಪ ಪ್ರಮಾಣದಲ್ಲಿ ಇಳುವರಿ ಬಂದಿದೆ. ಆದರೆ ಮುಂಗಾರು ಕೈ ಬಿಟ್ಟು ಹಿಂಗಾರಿಗೆ ಮಾತ್ರ ಪರಿಹಾರ ಮಂಜೂರು ಮಾಡಿರುವುದು ಆತ್ಮಾವಲೋಕನಕ್ಕೆ ಎಡೆ ಮಾಡಿಕೊಟ್ಟಿದೆ.