ಕಲಬುರಗಿ: ಒಂದೂವರೆ ತಿಂಗಳು ತಡವಾಗಿ ಆರಂಭಿಸಲಾಗಿದ್ದ ಬೆಂಬಲ ಬೆಲೆಯಲ್ಲಿನ ತೊಗರಿ ಖರೀದಿ ಪ್ರಕ್ರಿಯೆ ಬಹುತೇಕ ಮುಕ್ತಾಯವಾಗಿದ್ದು, ತೊಗರಿ ಖರೀದಿ ದಿನಾಂಕ ವಿಸ್ತರಿಸುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರ ನಾಮಕೆವಾಸ್ತೆ ಪತ್ರ ಬರೆದಿದೆ.
ಆಶ್ಚರ್ಯವೆಂದರೆ ಖರೀದಿ ಪ್ರಮಾಣ ಹೆಚ್ಚಿಸುವಂತೆ ಒತ್ತಾಯಿಸಿಲ್ಲ. ಮಾ.15ಕ್ಕೆ ಖರೀದಿ ದಿನಾಂಕ ಮುಕ್ತಾಯವಾಗಿದೆ. ಆದರೆ ರಾಜ್ಯ ಸಹಕಾರ ಮಹಾಮಂಡಳಿ ಮಾರಾಟಕ್ಕಾಗಿ ಹೆಸರು ನೋಂದಣಿ ಮಾಡಿರುವ ರೈತರ ತೊಗರಿ ಖರೀದಿ ಮಾಡಿ, ಈ ಕುರಿತು ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿದೆ ಎಂದು ಆದೇಶ ಹೊರಡಿಸಿದೆ. ಹೀಗಾಗಿ ಹೆಸರು ನೋಂದಣಿ ಮಾಡಿಸಿರುವ ರೈತರ 10 ಕ್ವಿಂಟಲ್ ಖರೀದಿಗೆ ಯಾವುದೇ ನಿರ್ಬಂಧವಿಲ್ಲ. ಆದರೆ ಸಿಎಂ ಯಡಿಯೂರಪ್ಪ ಕಳೆದ ಫೆ.7ರಂದು ಬೀದರ್‌ನಲ್ಲಿ ಬೆಂಬಲ ಬೆಲೆಯಲ್ಲಿ 20 ಕ್ವಿಂಟಲ್ ತೊಗರಿ ಖರೀದಿ ಮಾಡಲಾಗುವುದು ಎಂದು ಪ್ರಕಟಿಸಿರುವುದು ಕೇವಲ ಹೇಳಿಕೆಯಾಗಿ ಉಳಿಯಿತು ಎನ್ನುವುದು ರೈತರ ಕೊರಗಾಗಿದೆ.
ಮುಖ್ಯಮಂತ್ರಿಗಳು ಹೇಳಿದ್ದಾರಲ್ಲ. ಇಂದಲ್ಲ ನಾಳೆ 20 ಕ್ವಿಂಟಲ್ ಖರೀದಿ ಆರಂಭವಾಗುತ್ತದೆ ಎಂದು ಇಷ್ಟು ದಿನ ಕಾಯ್ದ ರೈತರಿಗೆ ಬರೆ ಎಳೆದಂತಾಗಿದೆ. ಇನ್ನೇನು ಖರೀದಿ ಪ್ರಕ್ರಿಯೆ ಮುಗಿಯಿತು, ಮಾರುಕಟ್ಟೆಯಲ್ಲಿ ಇದ್ದ ಬೆಲೆಗೆ ಮಾರಾಟ ಮಾಡಿದರಾಯಿತು ಎಂದು ರೈತ ಮಾರುಕಟ್ಟೆಗೆ ಹೋಗಬೇಕೆಂದರೆ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಎಪಿಎಂಸಿ ವಹಿವಾಟು ಸಂಪೂರ್ಣ ಬಂದ್ ಮಾಡಲಾಗಿದೆ. ಹೀಗಾಗಿ ಡಿಸಿಸಿ ಬ್ಯಾಂಕ್ ಹಾಗೂ ಪಿಕಾರ್ಡ್ ಬ್ಯಾಂಕ್‌ಗಳಲ್ಲಿ ಮಧ್ಯಮಾವಧಿ, ದೀರ್ಘಾವಧಿ ಸಾಲದ ಮೇಲಿನ ಬಡ್ಡಿಯನ್ನು ಸರ್ಕಾರ ಮನ್ನಾ ಮಾಡಿದೆ. ಸಾಲದ ಕಂತು ತುಂಬಬೇಕೆಂದರೆ ಕೈಯಲ್ಲಿ ತೊಗರಿ ಇದ್ದರೂ ನಯಾ ಪೈಸೆ ಬಾರದಂತಾಗಿದೆ ತೊಗರಿ ರೈತರ ಸ್ಥಿತಿ.
ವರ್ಷಂಪ್ರತಿ ಬಹಳ ತಡವೆಂದರೆ ಜನವರಿ ಎರಡನೇ ಇಲ್ಲವೇ ಮೂರನೇ ವಾರದಲ್ಲಿ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಪ್ರಕ್ರಿಯೆ ಪಾರಂಭವಾಗುತ್ತಿತ್ತು. ಆದರೆ ಈ ವರ್ಷ ಫೆಬ್ರವರಿ ತಿಂಗಳಿನ ಮೂರನೇ ವಾರ ಆರಂಭವಾಗಿದ್ದರೂ ಮಾರ್ಚ್ ಮೂರನೇ ವಾರದ ಹೊತ್ತಿಗೆ ಅಂದರೆ ತಿಂಗಳೊಳಗೆ ಖರೀದಿ ಮುಗಿಸಲಾಗಿದೆ. ಕೇವಲ 10 ಕ್ವಿಂಟಲ್ ತೊಗರಿ ಹಣಕ್ಕಾಗಿ ರೈತ ಈಗ
ಬಕಪಕ್ಷಿಯಂತೆ ಕಾಯುವಂತಾಗಿದೆ. ಕಲಬುರಗಿ ಜಿಲ್ಲೆಯಲ್ಲೇ ಬೆಂಬಲ ಬೆಲೆಯಲ್ಲಿ 565 ಕೋಟಿ ರೂ. ಮೊತ್ತದ ತೊಗರಿ ಖರೀದಿ ಮಾಡಲಾಗಿದೆ.
ರಾಜ್ಯದಲ್ಲಿ 3.17 ಲಕ್ಷ ರೈತರು ಬೆಂಬಲ ಬೆಲೆಯಲ್ಲಿ ತೊಗರಿ ಮಾರಾಟಕ್ಕಾಗಿ ಹೆಸರು ನೋಂದಾಯಿಸಿದ್ದರು. ಇದರಲ್ಲಿ 2.72 ಲಕ್ಷ ರೈತರ ತೊಗರಿ ಖರೀದಿಯಾಗಿದೆ. ಉಳಿದಿರುವ ಅಂದಾಜು 40 ಸಾವಿರ ರೈತರಲ್ಲಿ 20 ಸಾವಿರಕ್ಕೂ ಅಧಿಕ ರೈತರು ಮಾರುಕಟ್ಟೆಯಲ್ಲಿ ಈಗಾಗಲೇ ಮಾರಾಟ ಮಾಡಿದ್ದಾರೆ. ಖರೀದಿಯನ್ನು 20 ಕ್ವಿಂಟಲ್ ಗೆ ಹೆಚ್ಚಿಸಿದಲ್ಲಿ ಮಾತ್ರ ರೈತರಿಗೆ ಲಾಭವಾಗಲಿದೆ. ಕಲಬುರಗಿ ಜಿಲ್ಲೆಯಲ್ಲಿ 1.20 ಲಕ್ಷ ರೈತರು ಹೆಸರು ನೋಂದಾಯಿಸಿದ್ದರೆ, ಇದರಲ್ಲಿ 1.05 ಲಕ್ಷ ರೈತರ ತೊಗರಿ ಮಾರಾಟವಾಗಿದೆ.
24 ಲಕ್ಷ ಕ್ವಿಂಟಲ್ ಖರೀದಿ: ಕಳೆದ ವರ್ಷ ಬರಗಾಲ ಬಿದ್ದ ಪರಿಣಾಮ 12 ಲಕ್ಷ ಕ್ವಿಂಟಲ್ ಮಾರಾಟವಾಗಿದ್ದರೆ, ಅದರ ಹಿಂದಿನ ವರ್ಷ 2018ರಲ್ಲಿ 35 ಲಕ್ಷ ಕ್ವಿಂಟಲ್ ತೊಗರಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲಾಗಿತ್ತು. ಆದರೆ ಪ್ರಸಕ್ತ ವರ್ಷ ರಾಜ್ಯದಾದ್ಯಂತ 24 ಲಕ್ಷ ಕ್ವಿಂಟಲ್ ಖರೀದಿ ಮಾಡಲಾಗಿದೆ. ಕೇಂದ್ರ ಸರ್ಕಾರ ಪ್ರಸಕ್ತವಾಗಿ 18 ಲಕ್ಷ ಕ್ವಿಂಟಲ್ ಖರೀದಿಗೆ ಅನುಮತಿ ನೀಡಿದೆ. ಹೆಚ್ಚುವರಿಯಾಗಿ 6 ಲಕ್ಷ ಕ್ವಿಂಟಲ್ ಖರೀದಿ ಮಾಡಲಾಗಿದೆ.
ಹಣಮಂತರಾವ ಭೈರಾಮಡಗಿ