ಕಲಬುರಗಿ: ಸರ್ಕಾರದ ವಿವಿಧ ಇಲಾಖೆಗಳಿಗೆ ಕಂದಾಯ ಇಲಾಖೆ ತಾಯಿ ಇದ್ದಂತೆ. ಹಿಂದೆ ಪ್ರತಿಯೊಂದು ಕಾರ್ಯಕ್ಕೂ ಪ್ರತ್ಯೇಕ ಇಲಾಖೆಗಳಿರಲಿಲ್ಲ. ಎಲ್ಲವೂ ಕಂದಾಯ ಇಲಾಖೆಯಡಿಯಲ್ಲಿಯೇ ಕಾರ್ಯನಿರ್ವಹಿಸಬೇಕಿತ್ತು ಎಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಸುಬೋಧ ಯಾದವ ತಿಳಿಸಿದರು.
ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ನಡೆದ ವಿಭಾಗ ಮಟ್ಟದ ಆಡಳಿತ ಹಾಗೂ ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ಸುಧಾರಣೆ ಕುರಿತು ಆಯೋಜಿಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾಲ ಬದಲಾದಂತೆ ಪ್ರತ್ಯೇಕ ಕಾರ್ಯಕ್ಕೆ ಇಲಾಖೆಗಳನ್ನು ಸೃಜಿಸಲಾಗಿದೆ. ಕೆಳ ಹಂತದಲ್ಲಿ ಆಡಳಿತ ಸುಧಾರಣೆ ಕಾಣಬೇಕು ಎಂದರೆ ಕಂದಾಯ ಇಲಾಖೆ ಬೇರು ಮಟ್ಟದಲ್ಲಿ ಕಾರ್ಯನಿರ್ವಹಿಸುವ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಕಾರ್ಯಕ್ಷಮತೆ, ಕಾರ್ಯವೈಖ್ಯರಿ ಪ್ರಮುಖ ಪಾತ್ರ ವಹಿಸುತ್ತದೆ. ಆರ್ಥಿಕವಾಗಿ ಯಾವುದೇ ಜಿಲ್ಲೆ ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ ಕಂದಾಯ ಇಲಾಖೆ ಪಾತ್ರ ಮಹತ್ವದಾಗಿರುತ್ತದೆ ಎಂದರು.
ಒಂದು ಜಿಲ್ಲೆ ಅಭಿವೃದ್ಧಿ ಸಾಧಿಸ ಬೇಕಾದರೇ ಕೇವಲ ಜಿಲ್ಲಾ ಧಿಕಾರಿ ಗಳಿಂದ ಮಾತ್ರ ಸಾಧ್ಯವಾಗುವುದಿಲ್ಲ. ಕೆಳ ಹಂತದಲ್ಲಿ ಇರುವ ಅಧಿಕಾರಿ-ಸಿಬ್ಬಂದಿ ಹಾಗೂ ಇನ್ನಿತರ ಇಲಾಖೆ ಅಧಿಕಾರಿಗಳ ಪರಿಶ್ರಮದ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಿದರು.
ಜನಸಂಖ್ಯೆ ಅನುಸಾರವಾಗಿ ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೃಜಿಸಬೇಕಾದ ಅವಶ್ಯಕತೆ ಇದೆ. ಕೆಲಸ-ಕಾರ್ಯದಲ್ಲಿ ನೌಕರರು ಮೊದಲಿಗಿಂತ ಹೆಚ್ಚಿನ ಒತ್ತಡ ಅನುಭವಿಸುತ್ತಿದ್ದಾರೆ. ಇಲ್ಲಿಯ ವರೆಗೂ ಜಾರಿಗೆ ತಂದಿರುವ ಯೋಜನೆಗಳು ಎಷ್ಟರ ಮಟ್ಟಿಗೆ ಅನುಷ್ಠಾನಕ್ಕೆ ಬಂದಿವೆ. ಕೆಲಸದ ವಾತಾವರಣದಲ್ಲಿ ಯಾವ ರೀತಿ ಸಮಸ್ಯೆ ಉಂಟಾಗುತ್ತಿದೆ ಎನ್ನುವುದರ ಬಗ್ಗೆ ತಿಳಿದು ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ. ಮಾತನಾಡಿ ಜಿಲ್ಲೆಯಲ್ಲಿ 39 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ಜೊತೆಗೆ ಕಂದಾಯ ನಿರೀಕ್ಷಕರ 17 ಹುದ್ದೆಗಳನ್ನು ಸೃಷ್ಟಿಸಬೇಕು ಎಂದರು.
ಬೀದರ ಜಿಲ್ಲಾಧಿಕಾರಿ ಡಾ| ಹೆಚ್.ಆರ್.ಮಹಾದೇವ ಮಾತನಾಡಿ, ಕಲ್ಯಾಣ ಕರ್ನಾಟಕದಆರು ಜಿಲ್ಲೆಗಳಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳ ಕೊರತೆ ತೀವ್ರವಾಗಿ ಕಾಡುತ್ತಿದೆ. ಅಗತ್ಯಕ್ಕೆ ಅನುಸಾರವಾಗಿ ನೇಮಕಾತಿ ಮಾಡಿಕೊಂಡಲ್ಲಿ ಗ್ರಾಮದಲ್ಲಿನ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸ ಬಹುದು ಎಂದರು. ಕಲಬುರಗಿ ವಿಭಾಗದ ಆರು ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು ಹಾಜರಾಗಿದ್ದರು.