ಕಲಬುರಗಿ: ಮಹಾಮಾರಿ ಕೋವಿಡ್ ವೈರಸ್ ತಡೆಗಟ್ಟುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಮಾಲೋಚನೆ ನಡೆಸದೇ ಯಾರದ್ದೇ ಅಭಿಪ್ರಾಯ ಪಡೆಯದೇ ತೆಗೆದುಕೊಂಡ ನಿರ್ಧಾರಗಳೇ ಕಾರಣವಾಗಿವೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ತಡೆಗಟ್ಟಲು ವಿಫಲವಾಗಿರುವ ಕೇಂದ್ರ ಸರಕಾರ ಯಾವುದೇ ತಜ್ಞರ, ಪ್ರಮುಖರ ಅಭಿಪ್ರಾಯ ಪಡೆಯದೇ ಏಕ ಪಕ್ಷೀಯವಾಗಿ ನಿರ್ಧಾರ ಕೈಗೊಂಡಿರುವುದೇ ಕಾರಣವಾಗಿದೆ ಎಂದು ಆರೋಪಿಸಿದರು. ಯಾವುದೇ ನಿಟ್ಟಿನಲ್ಲಿ ಚರ್ಚಿಸದೇ ನೋಟು ಅಮಾನ್ಯೀಕರಣ, ಜಿಎಸ್ಟಿ ಜಾರಿಗೆ ತಂದಿರುವುದರಿಂದ ಎದುರಾದ ಪರಿಸ್ಥಿತಿ ಅರಿವಿದ್ದರೂ ಕೋವಿಡ್ ನಂತಹ ವೈರಸ್ ತಡೆಗಟ್ಟುವಲ್ಲಿ ಸಹ ಹುಡುಗಾಟದಂತೆ ನಡೆದುಕೊಂಡಿರುವ ಪರಿಣಾಮ ಪರಿಸ್ಥಿತಿ ಕೈ ಮೀರಿದೆ. ಈಗಲಾದರೂ ಎಚ್ಚೆತ್ತು ಬರೀ ಮಾತನಾಡದೇ ಪರಿಣಾಮಕಾರಿ ಕ್ರಮಕ್ಕೆ ಮುಂದಾಗಬೇಕು ಎಂದರು.
ಪ್ರಧಾನಿಯವರು ಆಗೊಮ್ಮೆ- ಈಗೊಮ್ಮೆ ಟಿವಿಯಲ್ಲಿ ಬಂದು ಪ್ರವಚನ ನೀಡುತ್ತಾರೆ. ಯಾರೊಂದಿಗೆ ಸಮಾಲೋಚನೆ ನಡೆಸದೇ ಏನೇನೋ ಹೇಳುತ್ತಾರೆ. ತದನಂತರ ಎಲ್ಲ ಅಧಿಕಾರ ರಾಜ್ಯಗಳಿಗೆ ಬಿಟ್ಟು ಬಿಡುತ್ತಾರೆ. ಈತ್ತ ರಾಜ್ಯದಲ್ಲಿ ಮುಂಜಾನೆ ಒಂದು ನಿರ್ಧಾರ, ಸಂಜೆ ಮತ್ತೂಂದರ ಕುರಿತಾಗಿ ಆದೇಶ ಹೊರಡಿಸಲಾಗುತ್ತದೆ. ಹೀಗಾಗಿ ಅಧಿ ಕಾರಿಗಳು ಗೊಂದಲದಲ್ಲಿ ಮುಳುಗಿದ್ದಾರೆ. ಒಟ್ಟಾರೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದ ಕೊರೊನಾ ನಿಯಂತ್ರಣ ಕ್ಕೆ ಬಾರದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಪತ್ರಕ್ಕೆ ಉತ್ತರವಿಲ್ಲ: ಕಾರ್ಮಿಕರನ್ನು ಮಾರ್ಚ್ ತಿಂಗಳಲ್ಲೇ ಕರೆದುಕೊಂಡು ಬರುವಂತೆ ಪತ್ರ ಬರೆಯಲಾಗಿತ್ತು. ಅದೇ ರೀತಿ ಕೋವಿಡ್ ಹೊರತಾಗಿ ಇತರ ರೋಗಗಳಿಂದ ಕಲಬುರಗಿ ಜಿಲ್ಲೆಯಲ್ಲಿ ಎಷ್ಟು ಜನರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಕೇಳಿ ಬರೆಯಲಾದ ಮಾಹಿತಿಗೂ ಜಿಲ್ಲಾಡಳಿತದಿಂದ ಉತ್ತರ ಬಂದಿಲ್ಲ. ಬಹುಶ: ತಮಗೆ ಉತ್ತರ ನೀಡದಿರುವಂತೆ ಸರ್ಕಾರ ನಿರ್ದೇಶನ ನೀಡಿರಬಹುದು ಎಂದು ಖರ್ಗೆ ವ್ಯಂಗ್ಯವಾಡಿದರು.
ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಯುವ ಘಟಕದ ಅಧ್ಯಕ್ಷ ಈರಣ್ಣ ಝಳಕಿ, ಮುಖಂಡರಾದ ಡಾ. ಕಿರಣ ದೇಶಮುಖ, ಸುಭಾಷ ರಾಠೊಡ ಸೇರಿದಂತೆ ಮುಂತಾದವರಿದ್ದರು.