Advertisement

ಸರ್ಜಿಕಲ್‌ ಸ್ಟ್ರೈಕ್‌ ರಾಜಕೀಯಕ್ಕೆ ಬಳಕೆ

11:25 AM Apr 21, 2019 | |

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಭಾವನಾತ್ಮಕವಾಗಿ ಮಾತನಾಡಿ ತಮ್ಮ ಐದು ವರ್ಷದ ಆಡಳಿತಾವಧಿಯ ವೈಫಲ್ಯಗಳ ಬಗ್ಗೆ ಉತ್ತರ
ಕೊಡದೆ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಘಟಕದ ಉಪಾಧ್ಯಕ್ಷ ವಿ.ಆರ್‌. ಸುದರ್ಶನ ಆರೋಪಿಸಿದರು.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಜಿಕಲ್‌ ಸ್ಟ್ರೈಕ್‌ನ್ನು ಪ್ರಧಾನಿ ಮೋದಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ನೆರೆಯ ದೇಶವನ್ನು ತೋರಿಸಿ ಇಲ್ಲಿನ ಜನತೆಯನ್ನು ಮೋದಿ ಭಯ ಪಡಿಸುತ್ತಿದ್ದಾರೆ.

ಪಾಕಿಸ್ತಾನ ಎಂದೂ ಭಾರತದ ಮೇಲೆ ಯುದ್ಧ ಗೆದ್ದಿಲ್ಲ. ಗೆಲ್ಲೋದು ಇಲ್ಲ. ನೆಹರು, ಇಂದಿರಾ ಗಾಂಧಿ ಸಹ ಪಾಕಿಸ್ತಾನ ಮೇಲೆ ಯುದ್ದ ಮಾಡಿ ಗೆದ್ದು ತೋರಿಸಿದ್ದಾರೆ ಎಂದರು. ದೇಶದ ಕಾನೂನು, ಸಂಸತ್‌ ಮತ್ತು ಮಾಧ್ಯಮಗಳಿಗೆ ಪ್ರಧಾನಿ ಮೋದಿ ಗೌರವ ಕೊಡುತ್ತಿಲ್ಲ. ಅವರದ್ದು ಸರ್ವಾಧಿಕಾರಿ ಧೋರಣೆ. ದೇಶದ ಪರಂಪರೆ ಕಡೆಗಣಿಸುವಂತ
ರಾಜಕೀಯವನ್ನು ಬಿಜೆಪಿ ಮಾಡುತ್ತಿದೆ. ಮೋದಿ ಅವರ ನವ ಭಾರತ ನಿರ್ಮಾಣ ಪರಿಕಲ್ಪನೆ ಎಂದರೆ
ಅದು ಸಂವಿಧಾನ ವಿರೋಧಿ ನಿಲುವು ತಾಳುವುದಾಗಿದೆ. ಸಂವಿಧಾನದ ಬಗ್ಗೆ ಅಗೌರವ ತೋರುವಂತ ಆಡಳಿತ ನಮ್ಮ ದೇಶಕ್ಕೆ ಅಗತ್ಯವಿಲ್ಲ. ದೇಶದ ಪರಂಪರೆ, ಜಾತ್ಯತೀತ ಪ್ರಜಾಪ್ರಭುತ್ವ
ವ್ಯವಸ್ಥೆ ಗೌರವಿಸುವಂತ ಸರ್ಕಾರ ಬೇಕಾಗಿದೆ ಎಂದರು.

ಮೋದಿ ಸರ್ಕಾರ ಜಾರಿಗೆ ತಂದ ಫಸಲ್‌ ಭೀಮಾ ಯೋಜನೆಯಿಂದ ರೈತರಿಗೆ ಅನುಕೂಲವಾಗಿಲ್ಲ. ರೈತರಿಂದಲೇ ಕಟ್ಟಿಸಿಕೊಂಡ ಹಣವನ್ನು ಕಂಪನಿಗಳಿಗೆ ಕೊಟ್ಟು, ಮೋದಿ ತಮ್ಮ ಸ್ನೇಹಿತರಿಗೆ ಸಹಾಯ ಮಾಡಿದ್ದಾರೆ. ಜನಸಾಮಾನ್ಯರಿಗೆ ನೆರವು ಆಗುವಂತ ಜಿಎಸ್‌ಟಿಯನ್ನು ಕಾಂಗ್ರೆಸ್‌ ರೂಪಿಸಿತ್ತು. ಆದರೆ, ಬಿಜೆಪಿ ಸರ್ಕಾರ ಜನಸಾಮಾನ್ಯರಿಗೆ ಮತ್ತಷ್ಟು ಹೊರೆಯಾಗುವ ರೀತಿಯ ಜಿಎಸ್‌ಟಿ ಜಾರಿಗೆ ತಂದಿದೆ ಎಂದರು.

ದೇಶದ ಹಿತದೃಷ್ಟಿಯಿಂದ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರಬೇಕಿದೆ. ಈ ನಿಟ್ಟಿನಲ್ಲಿ 124 ಸಭೆಗಳನ್ನು ನಡೆಸಿ ದೇಶದ ವಿವಿಧ ತಜ್ಞರೊಂದಿಗೆ ಚರ್ಚಿಸಿ ಪ್ರಣಾಳಿಕೆ ತಯಾರಿಸಲಾಗಿದೆ. ಬಡವರಿಗೆ ವಾರ್ಷಿಕ 72 ಸಾವಿರ ರೂ. ನೀಡುವ ‘ನ್ಯಾಯ್‌’ ಯೋಜನೆಯನ್ನು ಬಿಜೆಪಿಯವರು ಜಾರಿಗೆ ತರಲು ಆಗೋದಿಲ್ಲ ಎನ್ನುತ್ತಾರೆ. ಆದರೆ, ಯಾವುದು ಅಸಾಧ್ಯವೋ ಅದನ್ನು ಸಾಧ್ಯವಾಗಿಸುವುದೇ ಸರ್ಕಾರದ ಕೆಲಸ. ಅದನ್ನು ಕಾಂಗ್ರೆಸ್‌ ಸರ್ಕಾರ ಮಾಡಿ ತೋರಿಸುತ್ತದೆ ಎಂದು ಹೇಳಿದರು.

Advertisement

ವಿಧಾನ ಪರಿಷತ್‌ ಸದಸ್ಯ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವಾನ್‌ ಡಿಸೋಜಾ ಮಾತನಾಡಿ, ಬಿಜೆಪಿ ಅಲ್ಪಸಂಖ್ಯಾತರ ಬಗ್ಗೆ ತಾರತಮ್ಯ ಧೋರಣೆ ಹೊಂದಿದೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಅಲ್ಪಸಂಖ್ಯಾತರಿಗೆ ಕೇವಲ 200 ಕೋಟಿ ರೂ. ಅನುದಾನ ನೀಡಲಾಗಿತ್ತು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ 3,150 ಕೋಟಿ ರೂ.
ಕೊಟ್ಟಿತ್ತು. ಇಡೀ ದೇಶದ ಅಲ್ಪಸಂಖ್ಯಾತರಿಗೆ ಮೋದಿ ಸರ್ಕಾರ ಬರೀ 11 ಸಾವಿರ ಕೋಟಿ ರೂ. ಅನುದಾನ ನೀಡಿದ್ದಾರೆ. ಹೀಗಾಗಿ ಅಲ್ಪಸಂಖ್ಯಾತರು
ಬಿಜೆಪಿ ಹತ್ತಿರವೂ ಹೋಗೋದಿಲ್ಲ ಎಂದರು.

23 ಲೋಕಸಭಾ ಕ್ಷೇತ್ರಗಳಿಗೆ ನಾನು ಭೇಟಿ ಕೊಟ್ಟಿದ್ದೇನೆ.ಕಾಂಗ್ರೆಸ್‌ ಪರವಾಗಿ ಯುವಕರು ಹೆಚ್ಚು ಒಲವು ವ್ಯಕ್ತಪಡಿಸುತ್ತಿದ್ದಾರೆ. ಉದ್ಯೋಗ ಕೇಳಿದ ಯುವಕರಿಗೆ ಪ್ರಧಾನಿ ಮೋದಿ ಪಕೋಡಾ ಮಾರಾಟ ಮಾಡಿ ಎಂದು ಹೇಳುತ್ತಾರೆ.ಆದ್ದರಿಂದ ಯುವಕರು ಬಿಜೆಪಿ ಬಿಟ್ಟು ಕಾಂಗ್ರೆಸ್‌ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಗೆ ಮತ ಕೇಳುವ ಯಾವುದೇ ನೈತಿಕತೆ ಇಲ್ಲ. ಗೌರವದ ಪ್ರತೀಕವಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಲಬುರಗಿ ಜನತೆ ಬಹುಮತದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು. ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಗದೇವ
ಗುತ್ತೇದಾರ ಇದ್ದರು.

ಈಶ್ವರಪ್ಪಗೆ ತಲೆ ಇಲ್ಲ
ಅಲ್ಪಸಂಖ್ಯಾತರು ದೇಶಕ್ಕೆ
ನಿಷ್ಠರಲ್ಲ ಎನ್ನುವ ಬಿಜೆಪಿ ಮುಖಂಡ ಕೆ.ಎಸ್‌. ಈಶ್ವರಪ್ಪ ಹೇಳಿಕೆಗೆ ಐವಾನ್‌ ಡಿಸೋಜಾ ಆಕ್ರೋಶ ವ್ಯಕ್ತಪಡಿಸಿ, ಈಶ್ವರಪ್ಪಗೆ ತಲೆ ಇಲ್ಲ. ತಲೆ ಇದ್ದರೂ ಅದರಲ್ಲಿ ಏನೂ ಇಲ್ಲ. ಆರ್‌ಎಸ್‌ಎಸ್‌ ಚಡ್ಡಿ ಹಾಕುವುದನ್ನೇ ಇವರು ಹೆಮ್ಮೆ ಎಂದು ತಿಳಿದುಕೊಂಡಿದ್ದಾರೆ. ದೇಶ ಪ್ರೇಮದ ಬಗ್ಗೆ ಇವರಿಂದ ಕಲಿಯುವುದು ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next