Advertisement

ಗೆದ್ದರೆ ವೈದ್ಯರ ಧ್ವನಿ ಆಗುವೆ: ಜಾಧವ

10:55 AM Apr 18, 2019 | |

ಕಲಬುರಗಿ: ನನ್ನೆಲ್ಲ ವೈದ್ಯ ಮಿತ್ರರು ತಾವೇ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇವೆಂದು ಭಾವಿಸಿಕೊಂಡು ನನ್ನನ್ನು ಬೆಂಬಲಿಸಬೇಕು. ನಾನು ಗೆದ್ದರೆ ವೈದ್ಯ ಬಳಗದ ಧ್ವನಿಯಾಗಿ ಕೆಲಸ ಮಾಡುವೆ ಎಂದು ಕಲಬುರಗಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ|ಉಮೇಶ ಜಾಧವ ಹೇಳಿದರು.

Advertisement

ನಗರದ ಹೈದ್ರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಸಭಾಂಗಣದಲ್ಲಿ ಬುಧವಾರ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ‘ಡಾಕ್ಟರ್‌ ಫ್ಯಾಟ್‌ರ್ನಿಟಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೃತ್ತಿಯಲ್ಲಿ ವೈದ್ಯನಾಗಿ ಎರಡು ಬಾರಿ ಜನಪ್ರಿಯ ಶಾಸಕನಾದ ಹೆಮ್ಮೆ ನನ್ನದು. ವೈದ್ಯರ ದುಃಖ-ದುಮ್ಮಾನಗಳು ಮತ್ತು ಬೇಕು-ಬೇಡಗಳ ಬಗ್ಗೆ ನನಗೆ ಸ್ಪಷ್ಟ ಅರಿವಿದೆ ಎಂದರು.

ಲೋಕಸಭೆ ಚುನಾವಣೆಯಲ್ಲಿ ದೊಡ್ಡ ಗೂಳಿಯೊಂದಿಗೆ ನಾನು ಕಾದಾಟಕ್ಕೆ ಇಳಿದಿದ್ದೇನೆ. ವೈದ್ಯನಾಗಿದ್ದ ನನಗೆ ವೈದ್ಯರೇ ಶಕ್ತಿ ತುಂಬಬೇಕು. ಚುನಾವಣೆಯಲ್ಲಿ ನೀವು ಮತ ನೀಡುವುದರೊಂದಿಗೆ ನಿಮ್ಮವರಿಂದಲೂ ಮತ ಕೊಡಿಸಿ, ಸಹೋದ್ಯೋಗಿಯನ್ನು ಗೆಲ್ಲಿಸಲು ಶ್ರಮಿಸಿ. ವೈದ್ಯರ ಹಿತಾಸಕ್ತಿ ಕಾಯಲು ನಾನು ಬದ್ಧನಾಗಿದ್ದೇನೆ. ಸಂಸತ್‌ ಹಾಗೂ ವೈದ್ಯಕೀಯ ಪರಿಷತ್‌ನಲ್ಲಿ ವೈದ್ಯರ ಸಮಸ್ಯೆಗಳನ್ನು ಮುಂದಿಟ್ಟು ಪರಿಹರಿಸಲು ಪ್ರಾಮಾಣಿಕ
ಪ್ರಯತ್ನ ಮಾಡುವೆ ಎಂದು ಭರವಸೆ ನೀಡಿದರು.

ಜಿಲ್ಲೆಯಲ್ಲಿ ಬೃಹತ್‌ ಇಎಸ್‌ಐ ಆಸ್ಪತ್ರೆ ಇದ್ದರೂ ಸಾರ್ವಜನಿಕರಿಗೆ ಪ್ರಯೋಜನವಾಗುತ್ತಿಲ್ಲ. ಇಂದಿಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ. ರೋಗಿಗಳ ಕುಟುಂಬವರು ಆಸ್ಪತ್ರೆಗಳ ಆವರಣದಲ್ಲಿ ಎಲ್ಲೆಂದರಲ್ಲಿ ಮಲಗುತ್ತಿದ್ದಾರೆ. ಇಡೀ ಚಿಕಿತ್ಸಾ ಸೌಕರ್ಯಗಳು ಇಎಸ್‌ಐ ಆಸ್ಪತ್ರೆಯ ಒಂದೇ ಸೂರಿನಡಿ ಸಿಗುವಂತಾಗಬೇಕಿದೆ ಎಂದರು.

ಸರ್ಕಾರದಿಂದ ಬಾರ್‌ಗಳಿಗೆ ಸಬ್ಸಿಡಿ ಸಿಗುತ್ತದೆ. ಆದರೆ, ಹೊಸ ಆಸ್ಪತ್ರೆಗಳಿಗೆ ಸಬ್ಸಿಡಿಯಾಗಲಿ, ತೆರಿಗೆ ವಿನಾಯಿತಿಯಾಗಲಿ ಕೊಡುತ್ತಿಲ್ಲ ಎಂದು ವೈದ್ಯರೊಬ್ಬರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಾಧವ್‌, ಸಂಸತ್‌ ಪ್ರವೇಶಿಸಿದ ಮೊದಲ ದಿನವೇ ಈ ವಿಷಯ ಕುರಿತು ಪ್ರಸ್ತಾಪಿಸುತ್ತೇನೆ ಎಂದು ಹೇಳಿದರು.

Advertisement

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ ಮಾತನಾಡಿ, ಕಾಂಗ್ರೆಸ್‌ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆಂದು ತಾವೇ ಹೇಳಿಕೊಳ್ಳುತ್ತಾರೆ. ಬರೀ ಕಟ್ಟಡಗಳನ್ನು ಕಟ್ಟಿದರೆ ಅಭಿವೃದ್ಧಿಯಾಗಲ್ಲ. ಜಿಲ್ಲೆಯಲ್ಲಿ ಜೀವನೋಪಯೋಗಿ ಸೌಕರ್ಯಗಳು ಮತ್ತು ಉದ್ಯೋಗ ಸೃಷ್ಟಿಗೆ ಬೇಕಾದ ಕೈಗಾರಿಕೆಗಳಿಲ್ಲ. ಶುದ್ಧ ಕುಡಿಯುವ ನೀರು, ಗುಣಮಟ್ಟದ ಶಿಕ್ಷಣ, ಚಿಕಿತ್ಸೆ ಕೊಡಿಸುವಲ್ಲಿ ಖರ್ಗೆ ವಿಫಲರಾಗಿದ್ದಾರೆ. ಇಂದಿಗೂ ಜನರು ಗುಳೆ ಹೋಗುವುದು ತಪ್ಪಿಲ್ಲ. ಇದಕ್ಕೆಲ್ಲ ಈ ಚುನಾವಣೆಯಲ್ಲಿ ಉತ್ತರ ಕೊಡಬೇಕಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ, ಬಿಜೆಪಿ ನಗರಾಧ್ಯಕ್ಷ, ವಿಧಾನ ಪರಿಷತ್‌ ಸದಸ್ಯ ಬಿ.ಜಿ.ಪಾಟೀಲ, ಬಿಜೆಪಿ ನಾಯಕಿ ಕೆ.ರತ್ನಪ್ರಭಾ, ಹಿರಿಯ ಮುಖಂಡ ಡಾ| ಎ.ಬಿ. ಮಾಲಕರೆಡ್ಡಿ, ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಡಾ| ವಿಕ್ರಂ ಪಾಟೀಲ, ಡಾ| ಪ್ರಶಾಂತ ಕಮಲಾಪುರ, ಡಾ| ಪ್ರತಿಮಾ ಕಮರೆಡ್ಡಿ, ಡಾ| ಧಾರವಾಡಕರ್‌ ಹಾಗೂ ಅನೇಕ ವೈದ್ಯರು ಪಾಲ್ಗೊಂಡಿದ್ದರು.

ನನ್ನ ತಾಯಿ ಮತ್ತು ಸಹೋದರಿ ಇಬ್ಬರೂ ಡಾಕ್ಟರ್‌
ಗಳು. ಈಗ ಒಬ್ಬ ಡಾಕ್ಟರ್‌ ಪರವಾಗಿ ನಾನು ಚುನಾವಣಾ
ಪ್ರಚಾರ ಮಾಡುತ್ತಿರುವೆ. ನಮ್ಮ ಮತವೇ ನಮ್ಮ
ಆಯುಧವಾಗಿದೆ.
ಬಿಜೆಪಿ ಅಭ್ಯರ್ಥಿ
ಡಾ| ಉಮೇಶ

ಕಳೆದ ಲೋಕಸಭೆ ಚುನಾವಣೆಯಲ್ಲಿ ಎಲ್ಲ ವೈದ್ಯರು ನರೇಂದ್ರ ಮೋದಿ ಅವರಿಗೆ ಮತ ಕೊಟ್ಟಿದ್ದಾರೆ. ಈ ಚುನಾವಣೆಯಲ್ಲೂ
ಮೋದಿ ಅವರಿಗೆ ಮತ ಕೊಡುತ್ತಾರೆ. ಈ ಬಗ್ಗೆ ನನಗೆ ಅನುಮಾನವೇ ಇಲ್ಲ.
ಡಾ| ಎ.ಬಿ. ಮಾಲಕರೆಡ್ಡಿ,
ಬಿಜೆಪಿ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next