ಕಲಬುರಗಿ: ರಾಜ್ಯದಲ್ಲಿ ಕಾಂಗ್ರೆಸ್‌ಗೆ 2018ರ ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬಾರದಿರುವುದು ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನ ಬಗ್ಗೆ ಕಾರಣ ಹುಡುಕಲು ಕೆಪಿಸಿಸಿ ಸತ್ಯ ಶೋಧನಾ ಸಮಿತಿ ಪ್ರವಾಸ ಆರಂಭಿಸಿದೆ.
ಕೆಪಿಸಿಸಿ ಮಾಜಿ ಉಪಾಧ್ಯಕ್ಷ ವಿ.ಆರ್. ಸುದರ್ಶನ ಅಧ್ಯಕ್ಷತೆಯ ಆರು ಸದಸ್ಯರನ್ನು ಒಳಗೊಂಡ ಸಮಿತಿ ಮಂಗಳವಾರ ಬೀದರ್ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಬುಧವಾರ ನಗರಕ್ಕೆ ಆಗಮಿಸಿ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ ಹಾಗೂ ಸ್ಥಳೀಯ ಮುಖಂಡರೊಂದಿಗೆ ಸಮಾಲೋಚನೆ ನಡೆಸಿತು.
ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುದರ್ಶನ, ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಆಗಿರುವ ಲೋಪ-ದೋಷಗಳು, ಮುಂದಿನ ಕಾರ್ಯಕ್ರಮಗಳು, ಪಕ್ಷ ಸಂಘಟಿಸುವುದು ಮತ್ತು ಸರ್ಕಾರದ ಸಾಧನೆ ಪರಿಣಾಮಕಾರಿಯಾಗಿ ಉಪಯೋಗ ಪಡೆದುಕೊಳ್ಳುವ ನಿಟ್ಟಿನಲ್ಲಿ ಸತ್ಯಶೋಧನಾ ಸಮಿತಿ ರಾಜ್ಯದ ಜಿಲ್ಲೆಗಳಲ್ಲಿ ಪ್ರವಾಸ ನಡೆಸಿ ಅಭಿಪ್ರಾಯ ಸಂಗ್ರಹಿಸಲಿದೆ ಎಂದರು.
ಪ್ರತಿ ಮಂಗಳವಾರ, ಬುಧವಾರ ಹಾಗೂ ಗುರುವಾರದಂದು ಒಂದೊಂದು ಲೋಕಸಭಾ ಕ್ಷೇತ್ರಕ್ಕೆ ಸಮಿತಿ ಭೇಟಿ ನೀಡಲಿದೆ. ಅದರಂತೆ ಬೀದರ್ ಪ್ರವಾಸ ಮುಗಿಸಿ ಕಲಬುರಗಿಗೆ ಆಗಮಿಸಲಾಗಿದೆ. ಜೂ.27ರಂದು ರಾಯಚೂರಿಗೆ ತೆರಳಲಿದೆ. ಹೀಗೆ ಜು.15ರೊಳಗೆ 14 ಕ್ಷೇತ್ರಗಳ ಪ್ರವಾಸ ಪೂರ್ಣಗೊಳಿಸಲಾಗುವುದು. ಬಳಿಕ ಉಳಿದ 14 ಕ್ಷೇತ್ರಗಳ ಪ್ರವಾಸ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಹೇಳಿದರು.
ಇದೇ ವೇಳೆ ಸಮಿತಿ ಮಧ್ಯಂತರ ವರದಿ ಸಲ್ಲಿಸಬೇಕೆಂಬ ಬಗ್ಗೆ ಇನ್ನೂ ಆಲೋಚಿಸಿಲ್ಲ. ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ ಎನ್ನುವ ಪ್ರಶ್ನೆಗಳು ಎದ್ದಿವೆ. ಈ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುವುದು. ಆದರೆ, ಮೈತ್ರಿಯಿಂದಾಗಿಯೇ ಕಾಂಗ್ರೆಸ್ ಹೀನಾಯ ಸ್ಥಿತಿಗೆ ಸಿಲುಕಿದೆ ಎಂಬ ವೀರಪ್ಪ ಮೊಯ್ಲಿ ಹೇಳಿಕೆ ಅವರ ವೈಯಕ್ತಿಕವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸತ್ಯಶೋಧನಾ ಸಮಿತಿ ಸದಸ್ಯರಾದ ವೀರಣ್ಣ ಮತ್ತಿಕಟ್ಟಿ, ಧೃವನಾರಾಯಣ, ನಜೀರ್ ಅಹ್ಮದ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ ಇದ್ದರು.
ಖರ್ಗೆ ಸೋಲನ್ನು ಕಾಂಗ್ರೆಸ್ ಊಹಿಸಿರಲಿಲ್ಲ
ಕಲಬುರಗಿ ಲೋಕಸಭೆ ಕ್ಷೇತ್ರದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ಸೋಲುತ್ತಾರೆ ಎಂದು ಕಾಂಗ್ರೆಸ್ ಪಕ್ಷ ಊಹೆಯನ್ನೂ ಮಾಡಿರಲಿಲ್ಲ. ಖರ್ಗೆ ಸೋಲು ನೋವಿನ ವಿಷಯವಷ್ಟೇ ಅಲ್ಲ, ಆಘಾತವನ್ನು ತಂದಿದೆ. ಕ್ಷೇತ್ರದಲ್ಲಿ ಖರ್ಗೆ ಅವರು ಸಾರ್ಥಕ ಮತ್ತು ಶಾಶ್ವತವಾದ ಉಪಯುಕ್ತ ಕಾರ್ಯಗಳನ್ನು ಮಾಡಿದ್ದಾರೆ. ಅವರಿಗೆ ವಿರೋಧಿ ಅಲೆಯೂ ಕ್ಷೇತ್ರದಲ್ಲಿ ಇರಲಿಲ್ಲ. ಆದರೆ,. ಬಿಜೆಪಿಯವರ ಭಾವನಾತ್ಮಕ ಅಪಪ್ರಚಾರಕ್ಕೆ ಮತದಾರರು ಮರುಳಾಗಿದ್ದಾರೆ. ಅಲ್ಲದೇ, ಕಾಂಗ್ರೆಸ್ ಕೆಳ ಹಂತದಲ್ಲಿ ಹೊಂದಿದ್ದ ಅತಿಯಾದ ವಿಶ್ವಾಸ ಕೂಡ ಖರ್ಗೆ ಸೋಲಿಗೆ ಕಾರಣವಾಗಿದೆ. ಅವರ ಸೋಲಿನಿಂದ ರಾಜ್ಯ ಮತ್ತು ದೇಶಕ್ಕೆ ನಷ್ಟವಾಗಿದೆ.
•ವಿ.ಆರ್. ಸುದರ್ಶನ,
ಕೆಪಿಸಿಸಿ ಮಾಜಿ ಉಪಾಧ್ಯಕ್ಷ