ಕಲಬುರಗಿ: ಕಿತ್ತೂರು ರಾಣಿ ಚನ್ನಮ್ಮಳ ಜಯಂತಿ ಇತಿಹಾಸ ಪ್ರಜ್ಞೆ ಬಡಿದೆಬ್ಬಿಸುವಂತಿರಬೇಕು. ಅವರ ಹೋರಾಟ, ಧೈರ್ಯ ಮತ್ತು ಸಾಹಸ ಮಕ್ಕಳಿಗೆ ತಿಳಿಸುವ ಉತ್ಸವ ಮಾದರಿಯಲ್ಲಿ ಜಯಂತಿ ಆಚರಿಸಬೇಕು ಎಂದು ಸಂಸದ ಡಾ| ಉಮೇಶ ಜಾಧವ ಹೇಳಿದರು.
ನಗರದ ಡಾ| ಎಸ್.ಎಂ. ಪಂಡಿತ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬುಧವಾರ ನಡೆದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಹತ್ತಾರು ಮಹಿಳಾ ಸಂಘಗಳು ಇವೆ. ಆದರೆ, ಮಹಿಳೆಯರ ಆದರ್ಶಪ್ರಾಯವಾದ ಚನ್ನಮ್ಮಳ ಜಯಂತಿ ಆಚರಣೆಯಲ್ಲೂ ಮಹಿಳೆಯರಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಟ ಮಾಡಿ ಚನ್ನಮ್ಮ ವೀರರಾಣಿ ಎನ್ನಿಸಿಕೊಂಡಿದ್ದರು. ಚನ್ನಮ್ಮಳ ಜಯಂತಿಗೆ ಸರ್ಕಾರಿ ಆದೇಶ ಇದೆ ಎಂದು ಕಾಟಾಚಾರದ ಆಚರಣೆ ಅಥವಾ ಅಧಿಕಾರಿಗಳ ಸಭೆಯಂತೆ ನಡೆಸುವುದು ಸರಿಯಲ್ಲ ಎಂದರು.
ಈ ವೇಳೆ ಸಭಿಕರೊಬ್ಬರು ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಇದೆ. ಆದ್ದರಿಂದ ಸರಳವಾಗಿ ಜಯಂತಿ ಆಚರಿಸಲಾಗುತ್ತದೆ ಎಂದರು. ಇದಕ್ಕೆ ಉತ್ತರಿಸದೇ ಸಂಸದ ಜಾಧವ ತಮ್ಮ ಭಾಷಣ ಮುಂದುವರಿಸಿದರು. ಕಿತ್ತೂರ ರಾಣಿ ಚೆನ್ನಮ್ಮ ಬಾಲ್ಯದಲ್ಲೇ ಧೀರ ಮಹಿಳೆಯಾಗಿ ರೂಪುಗೊಂಡಿದ್ದರು. ಪುರುಷರಿಗೆ ಸರಿಸಮನಾದ ಕತ್ತಿ ವರಸೆ, ಕುದುರೆ ಸವಾರಿ ಕೌಶಲ್ಯವನ್ನು ಮೈಗೂಡಿಸಿಕೊಂಡಿದ್ದರು.
ಬ್ರಿಟಿಷರ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಪ್ರಯತ್ನಿಸಿದ ವೀರ ಮಹಿಳೆ ಚನ್ನಮ್ಮ. ಇಂತಹ ಚನ್ನಮ್ಮನ ಆದರ್ಶ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕು ಎಂದರು. ಚನ್ನಮ್ಮಳ ಕುರಿತು ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಚಿ.ಸಿ.ಲಿಂಗಣ್ಣ ಮಾತನಾಡಿ, ಬ್ರಿಟಿಷರ ಆಡಳಿತದ ವಿರುದ್ಧ ಹೋರಾಟಕ್ಕೆ ಧುಮುಕಿದ ಮೊದಲ ವೀರ ರಾಣಿ ಚನ್ನಮ್ಮ, ತನ್ನ ಸಂಸ್ಥಾನ ಉಳಿಸಿಕೊಳ್ಳಲು ನಡೆಸಿದ ಹೋರಾಟ ದೇಶಕ್ಕೆ ಮಾದರಿಯಾಗಿದೆ. ಬ್ರಿಟಿಷರಿಂದ ಸಂಸ್ಥಾನ ಉಳಿಸಿಕೊಳ್ಳಲು ಸೈನಿಕರಿಗೆ ಧೈರ್ಯ, ಸ್ಥೈರ್ಯ ತುಂಬುವ ಕೆಲಸ ಮಾಡಿದರು.ಇದು ಸಂಗ್ರಾಮಕ್ಕೆ ನಾಂದಿ ಹಾಡಿತು ಎಂದು ಹೇಳಬಹುದಾಗಿದೆ ಎಂದರು.
ಬ್ರಿಟಿಷರ ಒಡೆದು ಆಳುವ ನೀತಿಯಿಂದ ದೇಶಿ ಸಂಸ್ಥಾನಗಳು ಚನ್ನಮ್ಮನ ನೆರವಿಗೆ ಬರುವುದಿಲ್ಲ. ಕಿತ್ತೂರು ಸಂಸ್ಥಾನದ ಮೇಲೆ ಮತ್ತೂಮ್ಮೆ ಬ್ರಿಟಿಷರು ಯುದ್ಧ ಸಾರಿ ಚನ್ನಮ್ಮಳನ್ನು ಬಂಧಿಸುತ್ತಾರೆ. ಇಂತಹ ಹೋರಾಟಗಾರರ ಜಯಂತಿಗಳು ಕೇವಲ ಜಾತಿಗೆ ಸಿಮೀತವಾಗವಾರದು ಎಂದರು. ಜಿ.ಪಂ ಅಧ್ಯಕ್ಷೆ ಸುವರ್ಣ ಹಣಮಂತರಾಯ ಮಲಾಜಿ ಉದ್ಘಾಟಿಸಿದರು.
ಅಪರ ಜಿಲ್ಲಾ ಧಿಕಾರಿ ಡಾ| ಶಂಕರಣ್ಣ ವಣಿಕ್ಯಾಳ, ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ಡಿಎಸ್‌ಪಿ ಜೇಮ್ಸ್ ಮಿನೇಜಸ್, ಕೊಟ್ರೇಶ ಮರಬನಳ್ಳಿ ಭಾಗವಹಿಸಿದ್ದರು. ಶಶೀಕಲಾ ಜಡೆ ನಿರೂಪಿಸಿ, ವಂದಿಸಿದರು.