Advertisement

ವರ್ಷದಿಂದ ನಡೆದಿಲ್ಲ ಕೆಡಿಪಿ ಸಭೆ!

11:03 AM Sep 12, 2019 | Naveen |

ಹಣಮಂತರಾವ ಭೈರಾಮಡಗಿ
ಕಲಬುರಗಿ:
ಕನಿಷ್ಠ ಮೂರು ತಿಂಗಳಿಗೊಮ್ಮೆ ಆದರೂ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಯಬೇಕಿದ್ದ ಕರ್ನಾಟಕ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆ ಕಳೆದೊಂದು ವರ್ಷದಿಂದ ನಡೆದಿಲ್ಲ.

Advertisement

2018ರ ಸೆಪ್ಟೆಂಬರ್‌ 12ರಂದು ಆಗ ಸಮಾಜ ಕಲ್ಯಾಣ ಇಲಾಖೆ ಜತೆಗೆ ಉಸ್ತುವಾರಿ ಸಚಿವರಾಗಿದ್ದ ಪ್ರಿಯಾಂಕ್‌ ಖರ್ಗೆ ಅಧ್ಯಕ್ಷತೆಯಲ್ಲಿ ನಡೆದ ಕೆಪಿಡಿ ಸಭೆ ನಂತರ ಇಂದಿನವರೆಗೂ ಕೆಡಿಪಿ ಸಭೆ ನಡೆದೇ ಇಲ್ಲ.

ಪ್ರಿಯಾಂಕ್‌ ಖರ್ಗೆ ಅವರು 2019ರ ಮಾರ್ಚ್‌ ಅಂತ್ಯದವರೆಗೆ ಕನಿಷ್ಠ ಮೂರು ಕೆಡಿಪಿ ಸಭೆಗಳನ್ನಾದರೂ ನಡೆಸಬೇಕಿತ್ತು. ಆದರೆ ಸಚಿವರು ಸಭೆ ನಡೆಸಿ, ಇಲಾಖಾವಾರು ಪ್ರಗತಿ ಪರಿಶೀಲನೆ ಮಾಡುವ ಗೋಜಿಗೆ ಹೋಗಲೇ ಇಲ್ಲ. ಲೋಕಸಭೆ ಚುನಾವಣೆಗೆಂದು ಎರಡೂವರೆ ತಿಂಗಳು ಕಳೆಯಿತು. ಚುನಾವಣೆ ಬಳಿಕ ಜೂನ್‌ ಇಲ್ಲವೇ ಜುಲೈ ತಿಂಗಳಲ್ಲೂ ಕೆಡಿಪಿ ಸಭೆಗೆ ಉಸ್ತುವಾರಿ ಸಚಿವರು ಮುಂದಾಗಲಿಲ್ಲ. ಕೊನೆಗೆ ಜುಲೈ ಕೊನೆ ವಾರದಲ್ಲಿ ಮಾಜಿ ಸಚಿವರಾದರು. ಜುಲೈ ಕೊನೆ ವಾರದಲ್ಲಿ ನೂತನ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂತು. ಸಂಪುಟ ವಿಸ್ತರಣೆಗೆ ತಿಂಗಳ ಸಮಯ ತೆಗೆದುಕೊಳ್ಳಲಾಯಿತು. ಸಚಿವ ಸಂಪುಟ ವಿಸ್ತರಣೆಯಾಗಿ 17 ನೂತನ ಸಚಿವರಾದರೂ ಇಂದಿನವರೆಗೂ ಉಸ್ತುವಾರಿ ಸಚಿವರ ನೇಮಕವೇ ಆಗಿಲ್ಲ.

ಸಭೆಯಿಂದ ಸಂಸದರೂ ದೂರ: ಲೋಕಸಭೆ ಸದಸ್ಯರು ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆಗಳ ದಿಶಾ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸುತ್ತಾರೆ. ಆದರೆ ಸಂಸದ ಡಾ| ಉಮೇಶ ಜಾಧವ ಅವರು ತಮ್ಮ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲು ಇಂದಿನವರೆಗೂ ಮುಂದಾಗಿಲ್ಲ. ಆಗಸ್ಟ್‌ 15ರೊಳಗೆ ಉಸ್ತುವಾರಿ ಸಚಿವರ ನೇಮಕ ಆಗಬಹುದೆಂದು ನಿರೀಕ್ಷಿಸಲಾಗಿತ್ತು. ಅದೂ ಕೈಗೂಡಲಿಲ್ಲ. ಈಗ ಉಸ್ತುವಾರಿ ಸಚಿವರು ನೇಮಕವಾಗಿ ಕೆಡಿಪಿ ಸಭೆ ಯಾವಾಗ ನಡೆಯುತ್ತದೆ ಎಂದು ತಿಳಿಯದಂತಾಗಿದೆ.

ಅಭಿವೃದ್ಧಿ ಮೇಲೆ ಪರಿಣಾಮ
ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆಯದೇ ಇರುವುದರಿಂದ ಅಭಿವೃದ್ಧಿ ಮೇಲೆ ಪರಿಣಾಮ ಬೀರಿದೆ. ವಿವಿಧ ಇಲಾಖೆಗಳಡಿ 12 ಕೋಟಿ ರೂ.ಗೂ ಹೆಚ್ಚು ಅನುದಾನ ಬಳಕೆಯಾಗದೇ ಸರ್ಕಾರಕ್ಕೆ ವಾಪಸ್‌ ಹೋಗಿದೆ. ಅಲ್ಲದೇ ಇಲಾಖಾ ಅಧಿಕಾರಿಗಳೇ ಮಾಡಿದ್ದೇ ಕೆಲಸ ಎನ್ನುವಂತಾಗಿದೆ. ಕಳೆದ ವರ್ಷ ಬೆಳೆ ಹಾನಿ ನಿಖರವಾಗಿ ವರದಿ ಮಾಡದಿದ್ದಕ್ಕೆ ಕಲಬುರಗಿ ಜಿಲ್ಲೆಗೆ ಕೇವಲ 10 ಕೋಟಿ ರೂ. ಮಾತ್ರ ಬೆಳೆವಿಮೆ ಬಂದಿದೆ. ಪಕ್ಕದ ಜಿಲ್ಲೆಗೆ ನೂರಾರು ಕೋಟಿ ರೂ. ಬೆಳೆವಿಮೆ ಬಂದಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಜಿಲ್ಲೆಗೆ ಬರಬೇಕಿದ್ದ 451 ಕೋಟಿ ರೂ. ಇನ್‌ಪುಟ್ ಸಬ್ಸಿಡಿ ಇಂದಿನವರೆಗೂ ಬಂದಿಲ್ಲ. ಕುಡಿಯುವ ನೀರು ಸರಬರಾಜು ಸಮರ್ಪಕವಾಗಿ ಆಗುತ್ತಿಲ್ಲ.
17ಕ್ಕಾದರೂ ಆಗುತ್ತಾ?
ಸೆ.17ರಂದು ಹೈದ್ರಾಬಾದ ಕರ್ನಾಟಕ ವಿಮೋಚನಾ (ಈಗ ಕಲ್ಯಾಣ ಕರ್ನಾಟಕವಾಗಿದೆ) ದಿನಾಚರಣೆ ನಡೆಯಲಿದ್ದು, ‘ಕಲ್ಯಾಣ ಕರ್ನಾಟಕ’ದ ಬೀದರ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರುಗಳೇ ರಾಷ್ಟ್ರಧ್ವಜಾರೋಹಣ ನೆರವೇರಿಸಬೇಕಿದೆ. ಕಲಬುರಗಿಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೇ ರಾಷ್ಟ್ರಧ್ವಜಾರೋಹಣ ನೆರವೇರಿಸುವರು ಎನ್ನಲಾಗುತ್ತಿದೆ. ಉಳಿದ ಜಿಲ್ಲೆಗಳಲ್ಲಿ ಧ್ವಜಾರೋಹಣ ನೆರವೇರಿಸುವರು ಯಾರು ಎನ್ನುವ ಪರಿಸ್ಥಿತಿ ಇದೆ.
Advertisement

Udayavani is now on Telegram. Click here to join our channel and stay updated with the latest news.

Next