Advertisement

46 ಅಡಿ ಎತ್ತರದ ಪೆಂಡಾಲ್‌ ನಿರ್ಮಾಣ

11:47 AM Jan 16, 2020 | |

ಕಲಬುರಗಿ: 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯನ್ನು ಉತ್ತಮವಾಗಿ, ಬಲವಾಗಿ ನಿರ್ಮಿಸಲು ಯೋಜಿಸಲಾಗಿದ್ದು, ಆರು ಸಾವಿರ ಚದರಡಿ ಮುಖ್ಯ ವೇದಿಕೆ, ಮುಂಭಾಗದಲ್ಲಿ 25 ಸಾವಿರ ಆಸನಗಳ ಸಾಮರ್ಥ್ಯದ ಸುಮಾರು 1.19 ಲಕ್ಷ ಚದರಡಿ ವಿಸ್ತೀರ್ಣ, 46 ಅಡಿ ಎತ್ತರದ ಪೆಂಡಾಲ್‌ ಹಾಕಲು ಭರದ ಸಿದ್ಧತೆ ನಡೆದಿವೆ.

Advertisement

ಮುಖ್ಯವೇದಿಕೆ ಹಿಂಭಾಗದಲ್ಲಿ ಗಣ್ಯರಿಗಾಗಿ ಹವಾನಿ ಯಂತ್ರಿತ (ಎಸಿ) ವಿಶ್ರಾಂತಿ
(ಲಾಂಚ್‌) ಕೋಣೆಗಳನ್ನು ನಿರ್ಮಿಸಲಾಗುತ್ತಿದೆ. ಗುಲಬರ್ಗಾ ವಿಶ್ವ
ವಿದ್ಯಾಲಯ ಆವರಣದ ಪರೀಕ್ಷಾಂಗ ವಿಭಾಗದ ಪಕ್ಕದ ವಿಶಾಲವಾದ 35 ಎಕರೆ ಜಾಗದಲ್ಲಿ ಸಮ್ಮೇಳನದ ಸಂಪೂರ್ಣ ವ್ಯವಸ್ಥೆ ಮಾಡಲಾಗುತ್ತಿದೆ. ಮುಖ್ಯ ವೇದಿಕೆ, ವೇದಿಕೆ ಮುಂಭಾಗದಲ್ಲಿ ಬೃಹತ್‌ ಪೆಂಡಾಲ್‌, ಎಡ ಮತ್ತು ಬಲಕ್ಕೆ ಪುಸ್ತಕ ಮಳಿಗೆ, ವಾಣಿಜ್ಯ ಮಳಿಗೆ, ಊಟದ ಬೃಹತ್‌ ಪೆಂಡಾಲ್‌ ಹಾಕಲಾಗುತ್ತದೆ.

ಬೆಂಗಳೂರಿನ ಉಡುಪ ಸರ್ವೀಸ್‌ ವೇದಿಕೆ ನಿರ್ಮಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ವೇದಿಕೆ ನಿರ್ಮಾಣದ ಸ್ಥಳವನ್ನು ಜೆಸಿಬಿ, ರೋಲರ್‌, ಟ್ರ್ಯಾಕ್ಟರ್‌ ಮೂಲಕ ಸಮತಟ್ಟು ಮಾಡುವ ಕೆಲಸ ಸಮರೋಪಾದಿಯಲ್ಲಿ ಸಾಗಿದೆ. ದಕ್ಷಿಣಾಭಿಮುಖ ವೇದಿಕೆ: ಸಮ್ಮೇಳನದ ವೇದಿಕೆಯನ್ನು ಕುಸನೂರ ರಸ್ತೆಗೆ ದಕ್ಷಿಣಾಭಿಮುಖವಾಗಿ ನಿರ್ಮಿಸಲಾಗುತ್ತಿದೆ. 50×120 (6,000 ಚದರಡಿ)
ಅಡಿಯ ಪ್ರದೇಶದಲ್ಲಿ ಬೃಹತ್‌ ವೇದಿಕೆ ಇರಲಿದ್ದು, ಅನಾಯಾಸವಾಗಿ 100ರಿಂದ 150 ಗಣ್ಯರು ಕುಳಿತುಕೊಳ್ಳಬಹುದಾಗಿದೆ. ವೇದಿಕೆ ಮುಂಭಾಗದಲ್ಲಿ 550×216 (1,18,800 ಚದರಡಿ) ಅಡಿ ವಿಶಾಲವಾದ ಸಾರ್ವನಿಕರಿಗಾಗಿ ಪೆಂಡಾಲ್‌ ಹಾಕಲಾಗುತ್ತದೆ.

ಇದರಲ್ಲಿ 25 ಸಾವಿರ ಕುರ್ಚಿ ಹಾಕಬಹುದಾಗಿದೆ. ಗುಡಿಸಿಲಿನ ಮಾದರಿಯಲ್ಲಿ ಟೆಂಟ್‌ ಇರಲಿದ್ದು, ಗರಿಷ್ಠ ಎತ್ತರ 46 ಅಡಿ ಹಾಗೂ ಅಂತ್ಯದಲ್ಲಿ 20 ಅಡಿ ಎತ್ತರ ಇರಲಿದೆ. ಬಲಕ್ಕೆ ಪುಸ್ತಕ ಮಳಿಗೆ: ಮುಖ್ಯ ವೇದಿಕೆ ಬಲ ಭಾಗಕ್ಕೆ ಪುಸ್ತಕ ಮಳಿಗೆ, ಪ್ರದರ್ಶನ ಟೆಂಟ್‌ ನಿರ್ಮಿಸಲಾಗುತ್ತದೆ. ಇದು ಒಂದು ಲಕ್ಷ ಚದರಡಿ ವಿಸ್ತೀರ್ಣದಲ್ಲಿ ನಿರ್ಮಾಣವಾದರೆ, ಎಡ ಭಾಗಕ್ಕೆ ವಾಣಿಜ್ಯ ಮಳಿಗೆ ಟೆಂಟ್‌ ಹಾಕಲಾಗುತ್ತಿದೆ. ಇದರ ವಿಸ್ತೀರ್ಣ 40 ಸಾವಿರ ಚದರಡಿ ಇರಲಿದೆ. ಪುಸ್ತಕ ಮಳಿಗೆ ಹಿಂಭಾಗದಲ್ಲಿ ಊಟದ ವ್ಯವಸ್ಥೆ ಇರಲಿದೆ.

25000 ಜನರಿಗೆ ಒಟ್ಟಿಗೆ ಊಟ: ಸಮ್ಮೇಳನದಲ್ಲಿ ಊಟಕ್ಕೆ ನೂಕುನುಗ್ಗಲು, ಗದ್ದಲಕ್ಕೆ ಅವಕಾಶ ಮಾಡಿಕೊಡದಂತೆ ಅಚ್ಚುಕಟ್ಟಾಗಿ ನಿರ್ವಹಿಸಲು ಯೋಜಿಸಲಾಗಿದೆ. ಇದಕ್ಕಾಗಿ 100 ಊಟದ ಕೌಂಟರ್‌ ಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಇದಕ್ಕೆ ಅನುಕೂಲವಾಗುವ ರೀತಿಯಲ್ಲಿ ಊಟದ ವ್ಯವಸ್ಥೆಗೆ ಬೃಹತ್‌ ಪೆಂಡಾಲ್‌ ನಿರ್ಮಿಸಲಾಗುತ್ತದೆ. ಇದರಲ್ಲಿ ಏಕಕಾಲಕ್ಕೆ ಬರೋಬ್ಬರಿ 25 ಸಾವಿರ ಜನರು ಊಟ ಮಾಡಬಹುದಾಗಿದೆ. ಆವರಣದಲ್ಲಿ ಸಾಕಷ್ಟು ಗಿಡಗಳಿದ್ದು, ಅವುಗಳಿಗೆ ಧಕ್ಕೆ ಮಾಡದಂತೆ ನೋಡಿಕೊಳ್ಳಲು ಎಲ್ಲ ಪೆಂಡಾಲ್‌ಗ‌ಳನ್ನು ಎತ್ತರದಲ್ಲಿ ನಿರ್ಮಿಸಲಾಗುತ್ತಿದೆ.

Advertisement

„ರಂಗಪ್ಪ ಗಧಾರ

Advertisement

Udayavani is now on Telegram. Click here to join our channel and stay updated with the latest news.

Next