ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಲಾಗಿರುವ ಸಂವಿಧಾನದ 371ನೇ ಜೆ ವಿಧಿ ಜಾರಿ ವಿಶೇಷ ಸೌಲಭ್ಯದಡಿ ವಿಜಯಪುರ ಜಿಲ್ಲೆಯೂ ಸೇರಿಸಿಕೊಂಡರೆ ಒಳ್ಳೆಯದಾಗಿತ್ತು ಎನ್ನುವ ಮೂಲಕ ಡಿಸಿಎಂ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಕಲ್ಯಾಣ ಕರ್ನಾಟಕ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯೂ ಹಿಂದುಳಿದಿದೆ. ಹೀಗಾಗಿ 371ನೇ ಜೆ ಅಡಿ ಸೇರಿದ್ದರೆ ಅನುಕೂಲವಾಗಿರುತ್ತಿತ್ತು. ಕಲ್ಯಾಣ ಕರ್ನಾಟಕ ಭಾಗದಂತೆ ವಿಜಯಪುರ ಜಿಲ್ಲೆಯೂ ಷಾಗಳ ಆಡಳಿತಕ್ಕೆ ಒಳಪಟ್ಟಿತ್ತು. ಅಲ್ಲದೇ ಈ ಭಾಗದಂತೆ ವಿಜಯಪುರ ಜಿಲ್ಲೆಯೂ ಹಿಂದುಳಿದೆ. ಜತೆಗೆ ಭಾಷೆ, ಜೀವನ ಪದ್ಧತಿ ಎಲ್ಲವೂ ವ್ಯತ್ಯಾಸವಿರದೇ ಸಾಮ್ಯತೆವಿದೆ. ಹಾಗಾಗಿ 371ನೇ ಜೆ ಅಡಿ ವಿಜಯಪುರ ಸೇರಬೇಕಿತ್ತು ಎಂಬುದು ತಮ್ಮ ಅಭಿಪ್ರಾಯ ಎಂದರು.
ಮಾಜಿ ಸಚಿವ ಎಚ್.ಕೆ. ಪಾಟೀಲ ಈ ಹಿಂದೆ 371ನೇ ಜೆ ವಿಧಿ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ 371ನೇ ಜೆ ಕಲಂ ಅಡಿ ಗದಗ ಜಿಲ್ಲೆಯ ಕೆಲ ಹಳ್ಳಿಗಳು ಸೇರ್ಪಡೆಯಾಗಬೇಕು ಎಂಬ ಪ್ರಸ್ತಾವನೆಯನ್ನು ಸಂಪುಟ ಸಭೆವರೆಗೂ ತೆಗೆದುಕೊಂಡು ಹೋಗಿದ್ದರು. ಆದರೆ ಈ ಭಾಗದಲ್ಲಿ ಭಾರಿ ವಿರೋಧ ವ್ಯಕ್ತವಾಗಿದ್ದರಿಂದ ಕೊನೆ ಘಳಿಗೆಯಲ್ಲಿ ಕೈ ಬಿಡಲಾಯಿತು. ಈ ಭಾಗ ಹಿಂದುಳಿರುವುದನ್ನು ಗಮನಿಸಿ ಕೇಂದ್ರ ಸರಕಾರ, ಹಿಂದಿನ ಹೈದ್ರಾಬಾದ ಕರ್ನಾಟಕ ಭಾಗಕ್ಕೆ ಅಂದರೆ ಈಗಿನ ಕಲ್ಯಾಣ ಕರ್ನಾಟಕ ಭಾಗಕ್ಕೆ 371ನೇ ಕಲಂ ತಿದ್ದುಪಡಿ ಮಾಡಿ ವಿಶೇಷ ಸ್ಥಾನ ಮಾನ ಕಲ್ಪಿಸಿದೆ. ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಗೋವಿಂದ ಕಾರಜೋಳ 371ನೇ ಕಲಂ ಸಮರ್ಪಕವಾಗಿ ಅನುಷ್ಠಾನಕ್ಕೆ ತರುವ ಪ್ರಯತ್ನ ಮಾಡುವುದು ಬಿಟ್ಟು, ವಿಜಯಪುರ ಜಿಲ್ಲೆ ಸಹ 371ನೇ ಕಲಂ ಅಡಿ ಸೇರ್ಪಡೆ ಆಗಬೇಕಿತ್ತು ಎನ್ನುವ ಮೂಲಕ ಸ್ವಜಿಲ್ಲೆಯ ಪ್ರೇಮ ಮೆರೆದಿದ್ದಾರೆ.
ಈ ಹಿಂದೆ ಎಲ್. ಕೆ. ಅಡ್ವಾಣಿ ಉಪ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ 371ನೇ ಕಲಂ ತಿದ್ದುಪಡಿ ಪ್ರಸ್ತಾಪ ತಿರಸ್ಕರಿಸಿದ್ದರು. ಅದಾದ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮನಮೋಹನಸಿಂಗ್ ಪ್ರಧಾನಿಯಾದ ಸಂದರ್ಭದಲ್ಲಿ 371ನೇ ಕಲಂ ತಿದ್ದುಪಡಿ ಮೂಲಕ ಹಿಂದಿನ ಹೈದ್ರಾಬಾದ್-ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಐತಿಹಾಸಿಕ ನಿರ್ಣಯ ಕೈಗೊಂಡಿರುವುದನ್ನು ಪ್ರಮುಖವಾಗಿ ಸ್ಮರಿಸಬಹುದಾಗಿದೆ. ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಿಗೆ ಸೀಮಿತವಾಗಿರುವ ಈ ಸೌಲಭ್ಯವನ್ನು ವಿಜಯಪುರ ಜಿಲ್ಲೆಗೂ ವಿಸ್ತರಣೆ ಆಗಬೇಕಿತ್ತು ಎನ್ನುವ ಮೂಲಕ ಡಿಸಿಎಂ ಗೋವಿಂದ ಕಾರಜೋಳ ಮತ್ತೂಂದು ವಿವಾದ ಸೃಷ್ಟಿಸಿದ್ದಾರೆ. ಈ ಹಿಂದೆ ಎಚ್.ಕೆ. ಪಾಟೀಲ ಅವರು ಸಹ ಇದೇ ರೀತಿ ಹೇಳಿಕೆ ನೀಡಿದ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕದ ಜನತೆಯಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಕಲ್ಯಾಣ ಕರ್ನಾಟಕ ಭಾಗದಲ್ಲಿನ ಭಾಷೆ, ಸಂಸ್ಕೃತಿ, ಆಚರಣೆಗಳು ವಿಜಯಪುರದಲ್ಲಿಯೂ ಇದೆ ಎನ್ನುವುದು ಈ ಸೌಲಭ್ಯ ವಿಸ್ತರಣೆಯಾಗಬೇಕು ಎನ್ನುವುದಕ್ಕೆ ಕಾರಜೋಳ ಸಮಜಾಯಿಸಿ ಕೊಡುತ್ತಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.