ಕಲಬುರಗಿ: ಬಹುದಿನಗಳಿಂದ ನನೆಗುದಿಗೆ ಬಿದ್ದಿರುವ ಕಲಬುರಗಿ ರೈಲ್ವೆ ವಿಭಾಗವನ್ನು ಪ್ರಥಮ ಆದ್ಯತೆ ಮೇರೆಗೆ ಆರಂಭಿಸಬೇಕೆಂದು ಸಂಸದ ಡಾ| ಉಮೇಶ ಜಾಧವ ರೈಲ್ವೆ ಸಚಿವ ಪಿಯೂಶ್ ಗೋಯೆಲ್ ಅವರಿಗೆ ಮನವಿ ಮಾಡಿದ್ದಾರೆ.
ನವದೆಹಲಿಯಲ್ಲಿ ಗುರುವಾರ ಸಚಿವ ಸಚಿವ ಪಿಯೂಶ್ ಗೋಯೆಲ್ ಅವರನ್ನು ಭೇಟಿ ಮಾಡಿದ ಡಾ| ಉಮೇಶ ಜಾಧವ, ರೈಲ್ವೆ ವಿಭಾಗ ಪ್ರಾರಂಭಿಸುವುದು ಸೇರಿದಂತೆ ಜಿಲ್ಲೆಗೆ ಸಂಬಂಧಿಸಿದ ರೈಲ್ವೆ ಕಾಮಗಾರಿ ಮತ್ತು ಹೊಸ ರೈಲುಗಳ ಸೇವೆ ಒದಗಿಸುವಂತೆ ಮನವಿ ಪತ್ರ ಸಲ್ಲಿಸಿದರು.
ಕಲಬುರಗಿ ರೈಲ್ವೆ ವಿಭಾಗ 2014-15ನೇ ಸಾಲಿನಲ್ಲಿ ಮಂಜೂರಾದರೂ ಆರಂಭವಾಗದೆ ನನೆಗುದಿಗೆ ಬಿದ್ದಿದೆ. ಸೊಲ್ಲಾಪುರ ರೈಲ್ವೆ ವಿಭಾಗದ ಶೇ.50ರಷ್ಟು ಆದಾಯ ಕಲಬುರಗಿ ಪ್ರದೇಶದಿಂದ ಸಂದಾಯವಾಗುತ್ತದೆ. ಪ್ರತ್ಯೇಕ ಕಲಬುರಗಿ ರೈಲ್ವೆ ವಿಭಾಗ ಆರಂಭಿಸುವುದು ಅತಿ ಮಹತ್ವದ್ದಾಗಿದೆ. ಹೀಗಾಗಿ ಆದಷ್ಟು ಬೇಗ ಕಲಬುರಗಿ ರೈಲ್ವೆ ವಿಭಾಗ ಸ್ಥಾಪನೆ ಮಾಡಬೇಕೆಂದು ಸಂಸದರು ಕೋರಿದರು.
ಅದೇ ರೀತಿ ಕಲಬುರಗಿಯಿಂದ ಬೆಂಗಳೂರು ಮಾರ್ಗವಾಗಿ ಮೈಸೂರಿಗೆ ಮತ್ತು ಕಲಬುರಗಿಯಿಂದ ಮುಂಬೈಗೆ ಹೊಸ ರೈಲ್ವೆ ಸಂಚಾರ ಆರಂಭಿಸಬೇಕು. ಜತೆಗೆ ಬೆಂಗಳೂರಿನಿಂದ ಕಲಬುರಗಿ, ಬೀದರ್ ಮಾರ್ಗವಾಗಿ ನವದೆಹಲಿಗೆ ಹೊಸ ರೈಲು ಸೇವೆ ಒದಗಿಸಬೇಕೆಂದು ಮನವಿ ಮಾಡಿದರು.
ಶಹಬಾದ ರೈಲ್ವೆ ನಿಲ್ದಾಣದಲ್ಲಿ ವಿಶಾಖಪಟ್ಟಣಂ-ಲೋಕಮಾನ್ಯ ತಿಲಕ್-ವಿಶಾಖಪಟ್ಟಣಂ (ರೈಲು ಸಂ.18519/18520) ರೈಲು ನಿಲ್ಲಿಸಬೇಕು. ಬೀದರ್-ಕಲಬುರಗಿ ಡೆಮೊ (ರೈಲು ಸಂ.77655) ಸಂಚಾರ ವಾಡಿವರೆಗೆ ವಿಸ್ತರಿಸಬೇಕು. ಅಲ್ಲದೇ, ಕಲಬುರಗಿಯಿಂದ ಕೊಲ್ಲಾಪುರದ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಕಲಬುರಗಿಯಿಂದ ಅಧಿಕ ಯಾತ್ರಿಗಳು ಪ್ರಯಾಣಿಸುತ್ತಿದ್ದಾರೆ. ಆದ್ದರಿಂದ ಸೊಲ್ಲಾಪುರ-ಕೊಲ್ಲಾಪುರ (ರೈಲು ಸಂ.01408) ವಿಶೇಷ ರೈಲು ಮತ್ತು ಸೊಲ್ಲಾಪೂರ-ಕೊಲ್ಲಾಪೂರ (ರೈಲು ಸಂ.11051) ಎಕ್ಸ್‌ಪ್ರೆಸ್ ರೈಲನ್ನು ಕಲಬುರಗಿವರೆಗೆ ವಿಸ್ತರಣೆ ಮಾಡಬೇಕು. ಕಲಬುರಗಿ-ಸೊಲ್ಲಾಪುರ ಯಾರ್ಡ್‌ನಲ್ಲಿ ಪಿಟ್ಲೈನ್ ಸ್ಥಾಪಿಸಬೇಕೆಂದು ಸಂಸದ ಜಾಧವ ಮನವಿ ಮಾಡಿದ್ದಾರೆ. ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಸಂಸದ ಬಚ್ಚೇಗೌಡ ಈ ಸಂದರ್ಭದಲ್ಲಿದ್ದರು.