Advertisement

ಕಾಟಾಚಾರಕ್ಕೆ ಹೊಸ ತಾಲೂಕುಗಳ ರಚನೆ

11:03 AM Sep 28, 2019 | Naveen |

„ರಂಗಪ್ಪ ಗಧಾರ
ಕಲಬುರಗಿ: ಅನೇಕ ವರ್ಷಗಳ ಹೋರಾಟದ ಫಲವಾಗಿ ಜಿಲ್ಲೆಯಲ್ಲಿ ರೂಪುಗೊಂಡ ನಾಲ್ಕು ನೂತನ ತಾಲೂಕುಗಳು ಜಾರಿಗೆ ಬಂದು ಒಂದೂವರೆ ವರ್ಷ ಕಳೆದರೂ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ.

Advertisement

ಸರ್ಕಾರಿ ಸೌಲಭ್ಯ ಪಡೆಯಲು ಕೆಲವೊಮ್ಮೆ ಹೊಸ ತಾಲೂಕು, ಮತ್ತೂಮ್ಮೆ ಹಳೆ ತಾಲೂಕಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿ ನಾಗರಿಕರ ಸಮಸ್ಯೆಗಳು ಮತ್ತಷ್ಟು ಜಟಿಲವಾಗಿವೆ.

ಬಿಜೆಪಿ ಅಧಿಕಾರಾವಧಿಯಲ್ಲಿ ಜಿಲ್ಲೆಯಲ್ಲಿ ಶಹಾಬಾದ, ಕಾಳಗಿ, ಯಡ್ರಾಮಿ ಹಾಗೂ ಕಮಲಾಪುರ ಸೇರಿದಂತೆ ರಾಜ್ಯಾದ್ಯಂತ 43 ಹೊಸ ತಾಲೂಕುಗಳನ್ನು ರಚಿಸುವ ಬಗ್ಗೆ ಘೋಷಿಸಲಾಗಿತ್ತು. 2016-17ರ ಸಾಲಿನ ಸರ್ಕಾರದ ಕೊನೆ ಬಜೆಟ್‌ನಲ್ಲಿ ಅಂದಿನ ಸಿಎಂ ಜಗದೀಶ ಶೆಟ್ಟರ್‌ ಹೊಸ ತಾಲೂಕುಗಳನ್ನು ಘೋಷಿಸಿದ್ದರು. ನಂತರ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಜಿಲ್ಲೆಯಲ್ಲಿ ಹೊಸ ತಾಲೂಕುಗಳ ಅನುಷ್ಠಾನಕ್ಕೆ ಮೀನಮೇಷ ಎಣಿಸಿತ್ತು. ಆದರೆ, ಸಿದ್ದರಾಮಯ್ಯ ತಮ್ಮ ಅಧಿಕಾರಾವಾಧಿಯ ಕೊನೆ ಗಳಿಗೆಯಲ್ಲಿ ಅಂದರೆ 2017ರ ಮಾರ್ಚ್‌ ತಿಂಗಳಲ್ಲಿ ನೂತನ ತಾಲೂಕುಗಳ ರಚನೆಗೆ ಹಸಿರು ನಿಶಾನೆ ತೋರಿಸಿದ್ದರು.

ನಂತರದಲ್ಲಿ ಪ್ರತಿ ತಾಲೂಕಿಗೆ ವಿಶೇಷ ತಹಶೀಲ್ದಾರ್‌ಗಳನ್ನು ನೇಮಿಸಲಾಗಿತ್ತು. ಪೀಠೊಪಕರಣ ಮತ್ತಿತರ ಮೂಲಭೂತ ಸೌಕರ್ಯಗಳಿಗೆಂದು ಐದು ಲಕ್ಷ ರೂ. ಅನುದಾನ ನೀಡಿತ್ತು. ಹಳೆ ತಾಲೂಕುಗಳ ತಹಶೀಲ್ದಾರ್‌ ಕಚೇರಿ ಹೆಸರಲ್ಲಿ ಈ ಅನುದಾನ ಕೂಡ ನೀಡಿದ್ದು, ಬಳಕೆಯಾಗಿ ಉಳಿದ ಅನುದಾನ ಇನ್ನೂ ಹೊಸ ತಹಶೀಲ್ದಾರ್‌ ಕಚೇರಿಗೆ ವರ್ಗಾವಣೆಯೇ ಆಗಿಲ್ಲ. ಇದು ಹೊಸ ತಾಲೂಕುಗಳ ಅನುಷ್ಠಾನಕ್ಕೆ ಹಿಡಿದ
ಕೈಗನ್ನಡಿಯಾಗಿದೆ. ಹೊಸ ಅನುದಾನ ದೂರದ ಮಾತು!

ಕೆಲವೇ ಕಚೇರಿಗಳ ಆರಂಭ: ಹೊಸ ನಾಲ್ಕು ತಾಲೂಕುಗಳಲ್ಲಿ ಕಚೇರಿಗಳ ಆರಂಭಕ್ಕೆ ಸ್ವಂತ ಕಟ್ಟಡಗಳೇ ಇಲ್ಲ. ನಾಡ ಕಚೇರಿಗಳ ನಾಮಫಲಕ ಬದಲಾಯಿಸಿ ಅದೇ ಕಚೇರಿಯಲ್ಲಿ ತಹಶೀಲ್ದಾರ್‌ ಕಚೇರಿಗಳನ್ನು ಪ್ರಾರಂಭಿಸಲಾಗಿದೆ. ಉಳಿದಂತೆ ತಾಲೂಕು ಪಂಚಾಯಿತಿ ಕಚೇರಿ ಸೇರಿದಂತೆ ಕೆಲ ಕಚೇರಿಗಳನ್ನು ಬಾಡಿಗೆ ಕಟ್ಟಡ ಹಾಗೂ ಮತ್ತಿತರ ಕಡೆಗಳಲ್ಲಿ ಆರಂಭಿಸಲಾಗಿದೆ. ಆದರೆ, ಅಗತ್ಯ ಮೂಲ ಸೌಲಭ್ಯಗಳು ಮತ್ತು ಸಿಬ್ಬಂದಿ ಸಮಸ್ಯೆ ಕಾಡುತ್ತಿದೆ. ಉದ್ದೇಶಿತ ಹೊಸ ತಾಲೂಕುಗಳ ಅನುಷ್ಠಾನ ಕಾಟಾಚಾರಕ್ಕೆ ಎಂಬಂತೆ ಆಗಿದೆ.

Advertisement

ಹೀಗಾಗಿ ಅಂದು ಹೊಸ ತಾಲೂಕುಗಳಿಗಾಗಿ ಹೋರಾಟ ಮಾಡಿದರು ಇಂದು ಕಚೇರಿಗಳ ಆರಂಭಕ್ಕೆ ಮತ್ತೆ ಹೋರಾಟದ ಹಾದಿ ಹಿಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಶಾಲಾ ಕಟ್ಟಡದಲ್ಲಿ ತಾಪಂ ಕಚೇರಿ: ದೊಡ್ಡ ತಾಲೂಕಾಧಾರದ ಮೇರೆಗೆ ಚಿತ್ತಾಪುರ ತಾಲೂಕಿನಲ್ಲಿದ್ದ ಶಹಾಬಾದ ಮತ್ತು ಕಾಳಗಿ ಪಟ್ಟಣಗಳನ್ನು ತಾಲೂಕು ಕೇಂದ್ರಗಳಾಗಿ ರಚಿಸಲಾಗಿದೆ. ಶಹಾಬಾದನಲ್ಲಿ ನಾಡ ಕಚೇರಿಯಲ್ಲಿ ತಹಶೀಲ್ದಾರ್‌ ಕಚೇರಿ ಆರಂಭಿಸಲಾಗಿದೆ. ಅಚ್ಚರಿ ಎಂದರೆ ತಾಲೂಕು ಪಂಚಾಯಿತಿ ಕಚೇರಿ ಶಾಲಾ ಪರಿಸರದಲ್ಲಿ ನಡೆಯುತ್ತಿದೆ. ಈ ಕಚೇರಿಯ ಒಂದು ಕಡೆ ಸರ್ಕಾರಿ ಬಾಲಕರ ಪ್ರೌಢ ಶಾಲೆ, ಇನ್ನೊಂದು ಕಡೆ ಪಿಯು ಕಾಲೇಜು ಮತ್ತು ಉರ್ದು ಶಾಲೆ ಇದೆ.

ಇವುಗಳ ಮಧ್ಯೆ ತಾಪಂ ಕಚೇರಿ ಆರಂಭಿಸಲಾಗಿದೆ. ಇದರಿಂದ ಮಕ್ಕಳು ಶಾಲಾ ಪಠ್ಯಕ್ಕಿಂತ ಹೆಚ್ಚಾಗಿ ಸರ್ಕಾರಿ ಸಭೆ-ಸಮಾರಂಭಗಳ ಭಾಷಣ ಮತ್ತು ತಾಪಂ ಕಚೇರಿ ಎದುರು ನಡೆಯುವ ಪ್ರತಿಭಟನೆಗಳ ಕೂಗನ್ನು ಆಲಿಸುವಂತಾಗಿದೆ. ವಾಡಿ, ಕಾಳಗಿ ಕಥೆನೂ ಅದೇ: ವಾಡಿ ರಸ್ತೆಯಲ್ಲಿರುವ ಇಎಸ್‌ಐ ಆಸ್ಪತ್ರೆ ಬೃಹತ್‌ ಕಟ್ಟಡ ಬಳಕೆ ಇಲ್ಲದೇ ಪಾಳು ಬಿದ್ದಿದ್ದು, ಅದನ್ನು ಮಿನಿ ವಿಧಾನಸೌಧ ರೀತಿಯಲ್ಲಿ ಬಳಕೆ ಮಾಡಲು ಉದ್ದೇಶಿಸಲಾಗಿದೆ ಎಂದು ಹೇಳಲಾಗಿದೆ.

ಕಾಳಗಿಯಲ್ಲೂ ನಾಡ ಕಚೇರಿಯ ನಾಮಫಲಕ ಬದಲಾಯಿಸಿ ಅಲ್ಲಿಯೇ ತಹಶೀಲ್ದಾರ್‌ ಕಚೇರಿ ಪ್ರಾರಂಭಿಸಲಾಗಿದೆ. ಮಿನಿ ವಿಧಾನಸೌಧ ನಿರ್ಮಾಣಕ್ಕೆ ಐದು ಎಕರೆ ಸ್ಥಳ ಗುರುತಿಸಲಾಗಿದೆ.

ಕೆಲ ದಿನಗಳಲ್ಲಿ ನ್ಯಾಯಾಲಯ ಕಚೇರಿ ಆರಂಭವಾಗುವ ನಿರೀಕ್ಷೆ ಇದೆ. ಉಳಿದಂತೆ ಇಲ್ಲೂ ಹಳೆ ಕಚೇರಿಗಳ ನಾಮಫಲಕಗಳನ್ನು ಬದಲಾಯಿಸಿ ಹೊಸ ಕಚೇರಿಗಳನ್ನು ಆರಂಭಿಸಲಾಗಿದೆ.

ಯಡ್ರಾಮಿಯಲ್ಲಿ ಹೇಗಿದೆ?: ಯಡ್ರಾಮಿಯಲ್ಲೂ ತಾಲೂಕು ಕಚೇರಿಗಳು ನಾಮಫಲಕಗಳಿಗೆ ಮಾತ್ರ ಸೀಮಿತವಾಗಿವೆ. ಅದೂ ತಹಶೀಲ್ದಾರ್‌ರ ಕಾಳಜಿ ಫಲವಾಗಿ ಬಿಇಒ, ಅರಣ್ಯ, ಲೋಕೋಪಯೋಗಿ ಸಹಾಯಕ ಅಭಿಯಂತರರು ಈ ಕಚೇರಿಗಳ ನಾಮಫಲಕಗಳನ್ನು ಮಾತ್ರ ಹಳೆಯ ಪೊಲೀಸ್‌ ಕ್ವಾಟ್ರಸ್‌ಗಳಲ್ಲಿ ತೂಗು ಹಾಕಿದ್ದಾರೆ.

ಆದರೆ, ಒಬ್ಬ ಸಿಬ್ಬಂದಿಯೂ ಅಲ್ಲಿ ಕಾಣ ಸಿಗುವುದಿಲ್ಲ. ಈ ಹಿಂದೆ ನಡೆದ ಕೆಡಿಪಿ ಸಭೆಯಲ್ಲಿ ಜೇವರ್ಗಿ ಕಚೇರಿಗಳ ಸಿಬ್ಬಂದಿ ಹಾಗೂ ಅಧಿಕಾರಿಗಳು ವಾರದಲ್ಲಿ ಕನಿಷ್ಟ ಎರಡು ದಿನವಾದರೂ ಯಡ್ರಾಮಿ ಕೇಂದ್ರಕ್ಕೆ ಬರಬೇಕೆಂದು ಸೂಚಿಸಲಾಗಿತ್ತು. ಇಲ್ಲಿ ಕರ್ತವ್ಯ ನಿಭಾಯಿಸಿ ಕಡತಗಳ ವಿಲೇವಾರಿ ಕೆಲಸ ಆಗಬೇಕೆಂದು ತಾಕೀತು ಮಾಡಲಾಗಿತ್ತು.

ಆದರೆ, ಯಾವ ಇಲಾಖೆಯವರು ಈ ಸೂಚನೆ ಪಾಲಿಸುತ್ತಿಲ್ಲ. ಸುಗಮ ಆಡಳಿತದ ಅನುಕೂಲಕ್ಕಾಗಿ ತಾಲೂಕಿನಲ್ಲಿ ಇನ್ನೂ ಮಳ್ಳಿ, ಬಿಳವಾರ, ಅರಳಗುಂಡಗಿ ಕೇಂದ್ರ ರಚನೆ ಆಗಬೇಕಾಗಿದೆ.

ಕಮಲಾಪುರದಲ್ಲೂ ತಹಶೀಲ್ದಾರ್‌ ಕಚೇರಿಯನ್ನು ನಾಡ ಕಚೇರಿಯಲ್ಲಿ ಆರಂಭಿಸಲಾಗಿದೆ. ಅದು ಬಿಟ್ಟರೆ ಯಾವುದೇ ಕಚೇರಿಗಳು ಆರಂಭವಾಗಿಲ್ಲ. ಮಿನಿ ವಿಧಾನಸೌಧ ನಿರ್ಮಾಣಕ್ಕೆ ಸುಮಾರು 12 ಎಕರೆ ಸ್ಥಳದ ಹುಡುಕಾಟ ನಡೆದಿದೆ. ಒಟ್ಟಾರೆ ಹೊಸ ತಾಲೂಕುಗಳಲ್ಲಿ ತಹಶೀಲ್ದಾರ್‌ ನೇಮಕದಿಂದ ತಹಶೀಲ್ದಾರ್‌ ಕಚೇರಿ ಆರಂಭವಾಗಿದೆ. ಉಳಿದಂತೆ ಪರಿಪೂರ್ಣ ತಾಲೂಕು ಕೇಂದ್ರಕ್ಕೆ ಬೇಕಾದ ಕಚೇರಿಗಳು ಇನ್ನೂ ಕಾರ್ಯೋನ್ಮುಖವಾಗಿಲ್ಲ. ಅಲ್ಲದೇ, ತಹಶೀಲ್ದಾರ್‌ ಕಚೇರಿಯ ಕೊರತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next