Advertisement

ಕನ್ನಡ ಸಾಹಿತ್ಯಕ್ಕೆ ಕಲ್ಯಾಣ ಮೇಲ್ಪಂಕ್ತಿ

01:22 PM Nov 14, 2019 | Naveen |

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗವು ಜನಪದ ಕಲೆ, ಸಾಹಿತ್ಯದಿಂದ ಸಂಪದ್ಭರಿತವಾಗಿದೆ. ಕನ್ನಡ ಸಾಹಿತ್ಯಕ್ಕೆ ಇದೇ ಭಾಗ ಮೇಲ್ಪಂಕ್ತಿ ಹಾಕಿದೆ ಎಂದು ಮೈಸೂರು ಭಾಷಾ ಸಂಸ್ಥೆಯ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ| ಕೆ.ಆರ್‌. ದುರ್ಗಾದಾಸ್‌ ಹೇಳಿದರು.

Advertisement

ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮಾಗಾಂಧಿ ಸಭಾಂಗಣದಲ್ಲಿ ಬುಧವಾರ ವಿಶ್ವವಿದ್ಯಾಲಯದ ಪ್ರಸಾರಾಂಗ ವತಿಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಚರಿತ್ರೆಯನ್ನು ಅವಲೋಕನ ಮಾಡಿದಾಗ ಈ ಭಾಗ ಸಾಂಸ್ಕೃತಿಕ ಸಂಪತ್ತಿನಿಂದ ಕೂಡಿದೆ. ಕವಿರಾಜಮಾರ್ಗ, ವಚನ, ದಾಸ ಸಾಹಿತ್ಯ ಇದೇ ಭಾಗದಿಂದ ಮೂಡಿ ಬಂದಿರುವುದು ಹೆಮ್ಮೆಯ ಸಂಗತಿ. ಈ ಎಲ್ಲ ಚರಿತ್ರೆ, ಇತಿಹಾಸ ಇಟ್ಟುಕೊಂಡು ಹಲಬುವ ಕಾರಣವಿಲ್ಲ. ಪುನಃ ನಮ್ಮ ಸಂಸ್ಕೃತಿ, ಚರಿತ್ರೆ ಕಟ್ಟಬೇಕಾಗಿದೆ ಎಂದು ಕರೆ ನೀಡಿದರು.

ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ| ಸತೀಶಕುಮಾರ ಹೊಸಮನಿ ಮಾತನಾಡಿ, ಪ್ರಶಸ್ತಿಗಳು ಮನುಷ್ಯರ ಜವಾಬ್ದಾರಿ ಹೆಚ್ಚಿಸುತ್ತವೆ. ನಮ್ಮಲ್ಲಿರುವ ಅಧ್ಯಯನಶೀಲತೆ ಹಾಗೂ ಪರಿಶ್ರಮ ಸಾಧನೆ ಉತ್ತುಂಗಕ್ಕೆ ಎಳೆದೊಯ್ಯಲಿದೆ ಎಂದರು. ಪ್ರಸಾರಾಂಗ ನಿರ್ದೇಶಕ ಪ್ರೊ| ಎಚ್‌.ಟಿ. ಪೋತೆ ಮಾತನಾಡಿ, ಗುಲಬರ್ಗಾ ವಿಶ್ವವಿದ್ಯಾಲಯ ಕಳೆದ 35 ವರ್ಷಗಳಿಂದ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಪ್ರಶಸ್ತಿ ಪ್ರದಾನ ಮಾಡುತ್ತಾ ಬರುತ್ತಿದೆ. ಈ ಬಾರಿ 28 ಜನರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುತ್ತಿದೆ ಎಂದರು.

ದಿ. ಜಯತೀರ್ಥ ರಾಜಪುರೋಹಿತ ಸ್ಮಾರಕ ದತ್ತಿ ರಾಜ್ಯಮಟ್ಟದ ಕನ್ನಡ ಕಥಾ ಸ್ಪರ್ಧೆಯಲ್ಲಿ ಪತ್ರಕರ್ತರಾದ ಡಾ| ಶಿವರಾಮ್‌ ಅಸುಂಡಿ ಅವರ “ಹೆಣದ ಮೇವು’ ಕೃತಿಗೆ ಮತ್ತು ಪ್ರಭುಲಿಂಗ ನೀಲೂರೆ ಅವರ “ಒಳಿತು ಮಾಡು ಮನುಜ’ ಕೃತಿಗೆ ಚಿನ್ನದ ಪದಕ ಹಾಗೂ ಗಾಯಿತ್ರಿ ಸುಂದರೇಶ್‌ ಅವರ “ಸೋಪ್ಪೀರಮ್ಮನ ಸಮಾ ಯ ಸುತ್ತ’ ಕೃತಿಗೆ ಬೆಳ್ಳಿ ಪದಕ ಮತ್ತು ಮುದಿರಾಜ್‌ ಬಾಣದ್‌ ಅವರ “ಹೇನು’ ಕೃತಿಗೆ ಕಂಚಿನ ಪದಕದೊಂದಿಗೆ 5,000 ರೂ., 3,000 ಹಾಗೂ 2,000 ರೂಪಾಯಿ ಗೌರವಧನ ಹಾಗೂ ಸ್ಮರಣಿಕೆ ಪದಕ ಪ್ರದಾನ ಮಾಡಲಾಯಿತು.

Advertisement

ಪ್ರಶಸ್ತಿ ವಿಜೇತರಿಗೆ ಕಲ್ಯಾಣ ಕರ್ನಾಟಕ ಪ್ರದೇಶದ ಕನ್ನಡ ಸೃಜನ, ಸೃಜನೇತರ ಲೇಖಕರು, ಜೀವನ ಕಥನ ಹಾಗೂ ಕನ್ನಡ ಪುಸ್ತಕ ಪ್ರಕಾಶಕರು, ಅನುವಾದ ಲೇಖಕರು, ಸಮಾಜ ವಿಜ್ಞಾನ, ಜನಪದ ಕಲಾವಿದರು ಹಾಗೂ ಚಿತ್ರ, ಶಿಲ್ಪಕಲಾವಿದರು, ಹಿಂದಿ, ಮರಾಠಿ, ಇಂಗ್ಲಿಷ್‌ ಹಾಗೂ ಉರ್ದು ಭಾಷಾ ಲೇಖಕರಿಗೆ ಪದಕ ಪ್ರದಾನ ಹಾಗೂ ಗೌರವ ಧನ ನೀಡಿ ಸನ್ಮಾನಿಸಲಾಯಿತು. ಕುಲಪತಿ ಪ್ರೊ| ಪರಿಮಳಾ ಅಂಬೇಕರ್ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಪ್ರೊ|ಸಿ.ಸೋಮಶೇಖರ, ಮೌಲ್ಯಮಾಪನ ಕುಲಸಚಿವ ಪ್ರೊ| ಕೆ.ಎಂ.ಸಂಜೀವಕುಮಾರ, ವಿತ್ತಾಧಿ ಕಾರಿ ಬಿ. ವಿಜಯ, ಸಿಂಡಿಕೇಟ್‌ ಸದಸ್ಯ ಕೆ.ವಿಜಯಕುಮಾರ, ಡಾ|ಸಿದ್ದಲಿಂಗ ದಬ್ಟಾ, ಡಾ| ಹಣಮಂತ ಮೇಲಕೇರಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next