Advertisement

175 ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ

01:27 PM May 18, 2019 | Naveen |

ಕಲಬುರಗಿ: ಸರ್ಕಾರಿ ಶಾಲಾ ಮಕ್ಕಳು ಕೂಡ ಆರಂಭದಿಂದಲೇ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆಯಲಿ ಎಂಬ ಆಶಯದೊಂದಿಗೆ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಲು ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.

Advertisement

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ರಾಜ್ಯಾದ್ಯಂತ ಒಂದು ಸಾವಿರ ಸರ್ಕಾರಿ ಶಾಲೆಗಳನ್ನು ಸರ್ಕಾರ ಆಯ್ಕೆ ಮಾಡಿಕೊಂಡಿದ್ದು, ಈ ಪೈಕಿ ಹೈದ್ರಾಬಾದ್‌-ಕರ್ನಾಟಕ ಭಾಗದ 175 ಶಾಲೆಗಳು ಸೇರಿವೆ.

ಆಂಗ್ಲ ಮಾಧ್ಯಮ ಶಿಕ್ಷಣ ನೀಡಬೇಕಾದ ಒಂದು ಸಾವಿರ ಶಾಲೆಗಳನ್ನು ರಾಜ್ಯ ಸರ್ಕಾರವೇ ಆಯ್ಕೆ ಮಾಡಿದೆ. ಮಕ್ಕಳು ಇಂಗ್ಲಿಷ್‌ ಕಲಿಕೆಗೆ ಪೂರಕ ವಾತಾವರಣ ಇರುವಂತಹ ಪ್ರತಿ ವಿಧಾನಸಭಾ ಕ್ಷೇತ್ರವಾರು ನಾಲ್ಕೈದು ಶಾಲೆಗಳನ್ನು ಗುರುತಿಸಲಾಗಿದೆ. ಹೈ-ಕ ಪ್ರದೇಶದ ಕಲಬುರಗಿ-ಬಳ್ಳಾರಿ ಜಿಲ್ಲೆಯಲ್ಲಿ ತಲಾ 39, ಕೊಪ್ಪಳ-ಯಾದಗಿರಿ ಜಿಲ್ಲೆಯಲ್ಲಿ ತಲಾ 20, ರಾಯಚೂರು ಜಿಲ್ಲೆಯಲ್ಲಿ 31 ಹಾಗೂ ಬೀದರ ಜಿಲ್ಲೆಯಲ್ಲಿ 26 ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಈಗಾಗಲೇ ಸರ್ಕಾರ ಶಾಲೆಗಳನ್ನು ಆಯ್ಕೆ ಮಾಡಿ ಶಾಲೆ ಕೋಡ್‌ ಸಮೇತ ಪಟ್ಟಿ ಕಳುಹಿಸಿಕೊಡಲಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಲಾಗುವುದು. ಮುಂದಿನ ವರ್ಷ 2ನೇ ತರಗತಿ ಆರಂಭಗೊಳ್ಳಲಿದೆ. ಈ ಶಾಲೆಗಳಲ್ಲಿ ಇಂಗ್ಲಿಷ್‌-ಕನ್ನಡ ಎರಡೂ ಮಾಧ್ಯಮಕ್ಕೂ ಅವಕಾಶ ಇರುತ್ತದೆ. ಪೋಷಕರು ತಮ್ಮ ಇಚ್ಚಾನುಸಾರ ಮಕ್ಕಳನ್ನು ಯಾವ ಮಾಧ್ಯಮಕ್ಕಾದರೂ ಸೇರಿಸಬಹುದಾಗಿದೆ. ಕನ್ನಡ ಮಾಧ್ಯಮ ರೀತಿಯಲ್ಲೇ ಇಂಗ್ಲಿಷ್‌ ಮಾಧ್ಯಮದ ಪಠ್ಯ ಇರುತ್ತದೆ. ಬಡವರ ಮಕ್ಕಳು ಇಂಗ್ಲಿಷ್‌ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸರ್ಕಾರ ಇಂತಹ ತೀರ್ಮಾನ ಕೈಗೊಂಡಿದೆ. ಇದರಿಂದ ಗ್ರಾಮೀಣ ಭಾಗ ಮಾತ್ರವಲ್ಲ ನಗರ ಪ್ರದೇಶದ ಬಡ ಪ್ರತಿಭಾವಂತ ಮಕ್ಕಳಿಗೂ ಅನುಕೂಲವಾಗಲಿದೆ. ಮಕ್ಕಳನ್ನು ಸೆಳೆಯಲು ಆರಂಭದಲ್ಲಿ ಮಾತೃ ಭಾಷೆಗೆ ಒತ್ತು ಕೊಡಲಾಗುವುದು ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು.

ಶಿಕ್ಷಕರಿಗೆ ತರಬೇತಿ: ಮಕ್ಕಳಿಗೆ ಆಂಗ್ಲ ಮಾಧ್ಯಮ ಶಿಕ್ಷಣವನ್ನು ಪರಿಣಾಮಕಾರಿಯಾಗಿ ನೀಡುವುದು ಸರ್ಕಾರ ಮತ್ತು ಶಿಕ್ಷಣ ಇಲಾಖೆ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಆಯ್ಕೆಯಾದ ಶಿಕ್ಷಕರಿಗೆ ಈಗಾಗಲೇ ವಿಶೇಷ ತರಬೇತಿ ನೀಡಲಾಗುತ್ತಿದೆ. ಪ್ರತಿ ಶಾಲೆಯಿಂದ ತಲಾ ಒಬ್ಬ ಶಿಕ್ಷಕರನ್ನು ಆಯ್ದುಕೊಂಡು ಅವರಿಗೆ ತರಬೇತಿ ಕೊಡಲಾಗುತ್ತಿದೆ. ಅಲ್ಲದೇ, ಶಾಲೆಯಲ್ಲಿ ಮಕ್ಕಳಿಗೆ ಆಂಗ್ಲ ಮಾಧ್ಯಮ ಕಲಿಕೆಗೆ ಪೂರಕ ವಾತಾವರಣ ಇರುವ ಬಗ್ಗೆ ಮುಖ್ಯಶಿಕ್ಷಕರು ಪೋಷಕರಿಗೆ ಮನನ ಮಾಡಿಕೊಡಲಿದ್ದಾರೆ. ಕೊನೆಗೆ ಆಂಗ್ಲ ಅಥವಾ ಕನ್ನಡ ಮಾಧ್ಯಮದ ಆಯ್ಕೆ ಹೊಣೆ ಪೋಷಕರ ವಿವೇಚನೆಗೆ ಬಿಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಒಂದು ಸಾವಿರ ಸರ್ಕಾರಿ ಆಂಗ್ಲ ಶಿಕ್ಷಣ ಶಾಲೆಗಳಲ್ಲಿ ಹೈದ್ರಾಬಾದ್‌-ಕರ್ನಾಟಕ ಭಾಗದ 175 ಶಾಲೆಗಳು ಸೇರಿವೆ. ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ಪ್ರತಿ ಶಾಲೆಯಿಂದ ತಲಾ ಒಬ್ಬ ಶಿಕ್ಷಕರನ್ನು ಆಯ್ದುಕೊಂಡು ಅವರಿಗೆ ತರಬೇತಿ ನೀಡಲಾಗುತ್ತಿದೆ. ಆಂಗ್ಲ ಅಥವಾ ಕನ್ನಡ ಯಾವ ಮಾಧ್ಯಮ ಆಯ್ಕೆ ಮಾಡಬೇಕೆನ್ನುವುದು ಪೋಷಕರ ವಿವೇಚನೆಗೆ ಬಿಡಲಾಗಿದೆ.
ನಾರಾಯಣಗೌಡ,
ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತಾಲಯ, ಕಲಬುರಗಿ

ರಂಗಪ್ಪ ಗಧಾರ

Advertisement

Udayavani is now on Telegram. Click here to join our channel and stay updated with the latest news.

Next