Advertisement

ಬುದ್ಧನ ಕಡೆ ನಮ್ಮ ನಡೆ ಸಾಗಲಿ

12:18 PM Oct 09, 2019 | Naveen |

ಕಲಬುರಗಿ: ಜಗತ್ತಿನ ಶಾಂತಿ, ನೆಮ್ಮದಿಗೆ ಗೌತಮ ಬುದ್ಧ ಹುಟ್ಟುಹಾಕಿರುವ ಬೌದ್ಧ ಧರ್ಮದ ತತ್ವ, ಸಂದೇಶಗಳನ್ನು ಪಾಲಿಸಬೇಕಿದ್ದು, ನಮ್ಮ ನಡೆ ಬುದ್ಧನ ಕಡೆಗೆ ಸಾಗಬೇಕೆಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ, ಮಾಜಿ ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದರು.

Advertisement

ನಗರದ ಹೊರವಲಯದ ಬುದ್ಧ ವಿಹಾರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 63ನೇ ಧಮ್ಮಚಕ್ರ ಪ್ರವರ್ತನ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬುದ್ಧ ಮತ್ತು ಬೌದ್ಧ ಧರ್ಮದ ಬಗ್ಗೆ ಮಾತನಾಡುವುದಲ್ಲ. ಬುದ್ಧನ ವಿಚಾರ, ಆಚಾರ ಮತ್ತು ಪ್ರಚಾರ ಅಗತ್ಯ ಎಂದರು.

ಬುದ್ಧ, ಬಸವಣ್ಣ ಸಮಾನತೆಗಾಗಿ ಹೋರಾಟ ಮಾಡಿದರು. ಆಗ ಪ್ರಾಬಲ್ಯಯುತರ ಕೈಯಲ್ಲಿ ಅಧಿಕಾರ ಇತ್ತು. ಆದ್ದರಿಂದ ಸಮಾನತೆ ಸಾಧಿಸಲು ರಾಜ, ಮಹಾರಾಜರ ಮನವೊಲಿಸುವ ಪ್ರಯತ್ನ ಮಾಡಿದರು. ಬೌದ್ಧ ಧರ್ಮ ತಾತ್ವಿಕತೆಯಿಂದ ಕೂಡಿದ ಧರ್ಮವಲ್ಲ. ಪ್ರಾಯೋಗಿಕವಾದ ಧರ್ಮವಾಗಿದೆ. ನಾನು ಹೇಳಿದ ವಿಚಾರಗಳು ನಿಮಗೆ ಸರಿ ಎನ್ನಿಸದೇ ಇದ್ದರೆ, ಅವುಗಳನ್ನು ಪರೀಕ್ಷೆಗೆ ಒಳಪಡಿಸಿ ಎಂದು ಸ್ವತಃ ಗೌತಮ ಬುದ್ಧ ಹೇಳಿದ್ದರು.

ಬುದ್ಧನ ವೈಜ್ಞಾನಿಕ ತತ್ವಗಳನ್ನು ಅರಿತ ಅಶೋಕ, ಹರ್ಷ, ಕನಿಷ್ಕ ರಾಜರು ಬೌದ್ಧ ಧರ್ಮ ಸ್ವೀಕರಿಸಿದರು. ಗ್ರೀಕ್‌ನಲ್ಲಿ ಅಲೆಕ್ಸಾಂಡರ್‌ನ ಮೊಮ್ಮಗ ಕೂಡ ಬೌದ್ಧ ಧರ್ಮಕ್ಕೆ ಸೇರಿದರು ಎಂದು ಹೇಳಿದರು.

ಬೌದ್ಧ ಧರ್ಮ ಭಾರತೀಯ ನೆಲೆ ಹೊಂದಿದ ಧರ್ಮವಾಗಿದೆ. ಬುದ್ಧ ಮತ್ತು ಆತನ ಬೌದ್ಧ ಧರ್ಮದ ಬಗ್ಗೆ ಡಾ| ಬಿ.ಆರ್‌.ಅಂಬೇಡ್ಕರ್‌
ಆಳವಾಗಿ ಚಿಂತಿಸಿಯೇ ಬೌದ್ಧ ಧರ್ಮ ಸ್ವೀಕರಿಸಿದರು. ದೇಶದ ಏಕತೆ, ಒಗ್ಗಟ್ಟಿಗಾಗಿಯೇ ಅಂಬೇಡ್ಕರ್‌ ನಮ್ಮದೇ ನೆಲದ ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಬೌದ್ಧ ಧರ್ಮ ಶಾಂತಿಯ ಪ್ರತೀಕ. ಶಾಂತಿ ಆಳವಡಿಸಿಕೊಂಡರೆ ಸುಖ, ಸಮೃದ್ಧಿ ಸಾಧಿಸಬಹುದಾಗಿದೆ ಎಂದರು.

Advertisement

ಧಮ್ಮ ಪ್ರವಚನ ನೀಡಿದ ಕವಿ ಲಕ್ಷ್ಮೀ ಪತಿ ಕೋಲಾರ, ಬೌದ್ಧ ಧರ್ಮ ಪ್ರವೇಶಕ್ಕೆ ಯಾವುದೇ ಬಾಗಿಲು ಇಲ್ಲ, ನೈತಿಕ ಜೀವನವೇ ಬೌದ್ಧ ಧರ್ಮ. ಒಂದು ಕಾಲದಲ್ಲಿ ಇಡೀ ಭಾರತವೇ ಬೌದ್ಧ ಧರ್ಮವಾಗಿತ್ತು. ಈ ನೆಲದ ಪದರುಗಳಲ್ಲಿ ಒಂದು ಪದರು ಬೌದ್ಧ ಅಡಗಿದೆ ಎಂದರು. ಭಾರತೀಯ ಮನಸ್ಸುಗಳು ಶ್ರೀಮಂತಿಕೆ, ಅಧಿಕಾರ, ಜಾತಿ, ಭಕ್ತಿ ಆಮಲಿನಲ್ಲಿ ಕೂಡಿವೆ. ಕಸ ತುಂಬಿಕೊಂಡಿರುವ ಮನಸ್ಸಿನಲ್ಲಿ ಹೊಸದು ತುಂಬಲು ಸಾಧ್ಯವಿಲ್ಲ. ಬೌದ್ಧ ಧರ್ಮ ದೇಹಕ್ಕಿಂತ ಮನಸ್ಸಿಗೆ ಸಂಬಂಧಿಸಿದ್ದಾಗಿದೆ. ಮನಸ್ಸಿನಲ್ಲಿ ತುಂಬಿದ ಕಸವನ್ನು ಹೊರಹಾಕಲು ಧ್ಯಾನ ಮಾಡಬೇಕೆಂದರು.

ಮಲ್ಲಿಕಾರ್ಜುನ ಖರ್ಗೆ ಪತ್ನಿ ರಾಧಾಬಾಯಿ ಖರ್ಗೆ, ಪುತ್ರ ರಾಹುಲ್‌ ಖರ್ಗೆ, ಮಾಜಿ ಸಂಸದ ಪ್ರಕಾಶ ಹುಕ್ಕೇರಿ, ಮಾಜಿ ಸಚಿವ ಡಾ| ಶರಣ ಪ್ರಕಾಶ ಪಾಟೀಲ, ವಿಧಾನ ಪರಿಷತ್‌ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಅರವಿಂದ ಅರಳಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಎಚ್‌.ಟಿ. ಪೋತೆ ಪಾಲ್ಗೊಂಡಿದ್ದರು. ಜಾತ್ರೆ ವಾತಾವರಣ: ಸಂವಿಧಾನ ಶಿಲ್ಪಿ ಡಾ| ಬಿ.ಆರ್‌.ಅಂಬೇಡ್ಕರ್‌ ಅವರು ಬೌದ್ಧ ಧರ್ಮ ಸ್ವೀಕರಿಸಿದ ದಿನದ ಅಂಗವಾಗಿ ಧಮ್ಮ ಚಕ್ರಪ್ರವರ್ತನ ದಿನಾಚರಣೆ ಹಿನ್ನೆಲೆಯಲ್ಲಿ ಬುದ್ಧ ವಿಹಾರದಲ್ಲಿ
ಜಾತ್ರೆ ವಾತಾವರಣ ನಿರ್ಮಾಣವಾಗಿತ್ತು. ಕರ್ನಾಟಕ, ಮಹಾರಾಷ್ಟ್ರದಿಂದ ಸಾವಿರಾರು ಜನರು ಬದ್ಧ ವಿಹಾರಕ್ಕೆ ಭೇಟಿ ಕೊಟ್ಟು ಬುದ್ಧನ ದರ್ಶನ ಪಡೆದರು. ದೂರದ ಊರುಗಳಿಂದ
ವಾಹನಗಳಲ್ಲಿ ಮಕ್ಕಳು, ವೃದ್ಧರಾದಿ ಆಗಿ ಕುಟುಂಬ ಸಮೇತ ಬಂದಿದ್ದ ಬೌದ್ಧ ಉಪಾಸಕರು, ಅಲ್ಲಿ ತಂಡ-ತಂಡವಾಗಿ ಬುದ್ಧ, ಅಂಬೇಡ್ಕರ್‌ ಅವರು ಸಂದೇಶ ಗೀತೆಗಳ ಗಾಯನ ಮಾಡಿದರು.

ಜಾತ್ರೆ ಮಾದರಿಯಲ್ಲಿ ಅನೇಕ ಮಳಿಗೆಗಳನ್ನು ತೆರೆಯಲಾಗಿತ್ತು. ಹೆಚ್ಚಾಗಿ ಬುದ್ಧ, ಅಂಬೇಡ್ಕರ್‌ ಭಾವಚಿತ್ರಗಳನ್ನು ಖರೀದಿಸುತ್ತಿರುವ ದೃಶ್ಯ ಕಂಡು ಬಂತು.

Advertisement

Udayavani is now on Telegram. Click here to join our channel and stay updated with the latest news.

Next