Advertisement

2 ವರ್ಷ ಕಲಬುರಗಿಗಿಲ್ಲ ಬೆಳೆವಿಮೆ

09:50 AM Aug 02, 2019 | Naveen |

ಹಣಮಂತರಾವ ಭೈರಾಮಡಗಿ
ಕಲಬುರಗಿ:
ನೆರೆಯ ಬೀದರ್‌, ರಾಯಚೂರು, ವಿಜಯಪುರ ಜಿಲ್ಲೆಗಳಿಗೆ ಬೆಳೆಹಾನಿಗೆ ಸೂಕ್ತ ಎನ್ನುವ ನಿಟ್ಟಿನಲ್ಲಿ ಕಳೆದ ಮೂರು ವರ್ಷಗಳಿಂದ ನೂರಾರು ಕೋಟಿ ರೂ. ಬೆಳೆವಿಮೆ ಮಂಜೂರಾಗುತ್ತಿದ್ದರೂ ಕಲಬುರಗಿ ಜಿಲ್ಲೆಗೆ ಮಾತ್ರ ಏಕೆ ಬೆಳೆವಿಮೆ ಮಂಜೂರಾಗುತ್ತಿಲ್ಲ ಎಂದು ರೈತರು ಪ್ರಶ್ನಿಸುತ್ತಿದ್ದಾರೆ.

Advertisement

ಕಳೆದ ವರ್ಷ ಮಳೆ ಬರದೇ ಇರುವುದು ಎಲ್ಲರಿಗೂ ತಿಳಿದ ವಿಷಯ. ಹೈದ್ರಾಬಾದ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳಿಗೆ ಮುಂಗಾರು ಹಂಗಾಮಿನ ಬೆಳೆ ಹಾನಿಗೆ ತಲಾ 100 ಕೋಟಿ ರೂ. ಅಧಿಕ ಬೆಳೆವಿಮೆ ಮಂಜೂರಾಗಿದೆ. ಆದರೆ ಕಲಬುರಗಿ ಜಿಲ್ಲೆಗೆ ಕೇವಲ 10.35 ಕೋಟಿ ರೂ. ಮಾತ್ರ ಬಂದಿದೆ.

ಕಡಿಮೆ ವಿಮೆ ಮಂಜೂರಿಗೆ ಕಾರಣವೇನು?: ಕಳೆದ ದಶಕದ ಅವಧಿಯಿಂದ ಕಲಬುರಗಿ ಜಿಲ್ಲೆಯಲ್ಲಿ ಕಡಿಮೆ ಇಳುವರಿ ಬಂದಿದೆ ಎಂದು ವರದಿ ದಾಖಲಿಸುತ್ತಾ ಬರಲಾಗಿತ್ತು. ಕಳೆದ ವರ್ಷ, ಅದರ ಹಿಂದಿನ ವರ್ಷಗಳ ಇಳುವರಿ ಆಧಾರದ ಮೇಲೆ ವರದಿ ರೂಪಿಸಲಾಗಿತ್ತು. ಅಲ್ಲದೇ 2018-19ನೇ ಸಾಲಿನ ಮುಂಗಾರು ಹಂಗಾಮಿನ ಸುಮಾರು 2400 ತೊಗರಿ ಕ್ಷೇತ್ರಗಳ ಇಳುವರಿ ಪ್ರಮಾಣ (ಕ್ರಾಪ್‌ ಕಟಿಂಗ್‌ ಎಕ್ಸಪಿರಮೆಂಟ್)ಅಳೆಯುವುದನ್ನು ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್‌ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸರಿಯಾಗಿ ರೂಪಿಸಿರಲಿಲ್ಲ. ಕುಳಿತಲ್ಲೇ ತಪ್ಪು ವರದಿ ರೂಪಿಸಿದ್ದರ ಪರಿಣಾಮ ಸೂಕ್ತ ನಿಟ್ಟಿನಲ್ಲಿ ಬೆಳೆವಿಮೆ ಮಂಜೂರಾಗಿಲ್ಲ.

ಇದನ್ನೆಲ್ಲ ನೋಡಿದರೆ ಇನ್ನೂ ಎರಡ್ಮೂರು ವರ್ಷ ಕಲಬುರಗಿ ಜಿಲ್ಲೆಗೆ ಬೆಳೆಗೆ ಹಾನಿಗೆ ತಕ್ಕ ಬೆಳೆವಿಮೆ ಮಂಜೂರಾಗುವುದಿಲ್ಲ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಈ ಸಲ ಬೆಳೆವಿಮೆಗೆ ರೈತರಲ್ಲಿ ಆಸಕ್ತಿ ಕಂಡು ಬರುತ್ತಿಲ್ಲ ಎನ್ನಲಾಗುತ್ತಿದೆ. ಒಟ್ಟಾರೆ ರೈತರಲ್ಲಿ ಜಾಗೃತಿ ಮೂಡಿಸುವುದು ಮುಖ್ಯವಾಗಿದೆ.

ಬೆಳೆ ಇಳುವರಿ ಪ್ರಮಾಣ (ಕ್ರಾಪ್‌ ಕಟಿಂಗ್‌ ಎಕ್ಸ್‌ಪಿರಿಮೆಂಟ್)ಅಳೆಯುವುದರಲ್ಲಿ ಲೋಪವಾಗಿರುವುದನ್ನು ಜಿಲ್ಲಾಡಳಿತ ಹಾಗೂ ವಿಮಾ ಕಂಪನಿಗಳು ನೇರವಾಗಿ ಒಪ್ಪುತ್ತಿಲ್ಲ. ದೂರು ಬಂದಿರುವುದಕ್ಕೆ ಮರು ಸರ್ವೇ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ ಅಷ್ಟೇ. ಹೈ.ಕ ಭಾಗದ ಜಿಲ್ಲೆಗಳಲ್ಲಿ ತೀವ್ರ ಬರಗಾಲ ಎನ್ನುವುದಾಗಿದ್ದರೇ ಕಲಬುರಗಿ ಜಿಲ್ಲೆಯಲ್ಲಿ ಮಾತ್ರ ಮಧ್ಯಮ ಬರಗಾಲ ಎಂಬುದಾಗಿ ಸರ್ಕಾರ ಘೋಷಿಸಿರುವುದರಿಂದ ಹಾನಿಗೆ ತಕ್ಕ ಬೆಳೆವಿಮೆ ಮಂಜೂರಾಗಿಲ್ಲ ಎನ್ನುವುದು ಜಿಲ್ಲಾಡಳಿತದ ವಾದವಾಗಿದೆ.

Advertisement

ಇನ್‌ಪುಟ್ ಸಬ್ಸಿಡಿ ಬರುತ್ತಿಲ್ಲ: ಕಳೆದ ವರ್ಷ ಕಲಬುರಗಿ ಜಿಲ್ಲೆಯನ್ನು ಮಧ್ಯಮ ಬರಗಾಲವೆಂದು ಘೋಷಿದ್ದರ ಪರಿಣಾಮವೇ ಕಲಬುರಗಿ ಜಿಲ್ಲೆಗೆ ಬರಬೇಕಿದ್ದ 269 ಕೋಟಿ ರೂ. ಇನ್‌ಪುಟ್ ಸಬ್ಸಿಡಿ ಬರುತ್ತಿಲ್ಲ. ಈಗಾಗಲೇ ಬೀದರ್‌ ಸೇರಿದಂತೆ ಇತರ ಜಿಲ್ಲೆಗಳಿಗೆ ಇನ್‌ಪುಟ್ ಸಬ್ಸಿಡಿ ಬಂದಿದೆ. ಇದನ್ನೆಲ್ಲ ಅವಲೋಕಿಸಿದರೆ ಕಲಬುರಗಿ ರೈತರ ಗೋಳಿಗೆ ಕೊನೆ ಇಲ್ಲವೇ ಎನ್ನುವಂತಾಗಿದೆ.

ಮರು ಸರ್ವೇಯಲ್ಲಿ ಬಂಪರ್‌
ಬೆಳೆ ಇಳುವರಿ ಪ್ರಮಾಣ (ಕ್ರಾಪ್‌ ಕಟಿಂಗ್‌ ಎಕ್ಸ್‌ಪಿರಿಮೆಂಟ್) ಅಳೆಯುವುದರಲ್ಲಿ ಲೋಪವಾಗಿದೆ. ಸರಿಯಾದ ನಿಟ್ಟಿನಲ್ಲಿ ಸರ್ವೇ ಆಗಿಲ್ಲವೆಂದು ಬೆಳೆ ಕಟಾವು ಸಂದರ್ಭದಲ್ಲೇ ಕಲಬುರಗಿ ತಾಲೂಕಿನ ಹೊನ್ನಕಿರಣಗಿ, ಫಿರೋಜಾಬಾದ್‌ ರೈತರು ಆಕ್ಷೇಪಿಸಿ ದೂರು ಸಲ್ಲಿಸಿದ ಪರಿಣಾಮ ಬೆಳೆ ಇಳುವರಿ ಪ್ರಮಾಣವನ್ನು ಮರು ಸರ್ವೇ ಮಾಡಲಾಯಿತು. ಹೀಗಾಗಿ ಈ ಗ್ರಾಮಗಳಿಗೆ ತಲಾ ಒಂದು ಕೋಟಿ ರೂ. ಬೆಳೆವಿಮೆ ಮಂಜೂರಾಗಿದೆ. ಕಲಬುರಗಿ ಜಿಲ್ಲೆಗೆ ಮಂಜೂರಾಗಿರುವ 10 ಕೋಟಿ ರೂ.ದಲ್ಲಿ ಈ ಎರಡೇ ಗ್ರಾಮಗಳಿಗೆ ಎರಡು ಕೋಟಿ ರೂ. ಬಿಡುಗಡೆಯಾಗಿದೆ. ಇದನ್ನೆಲ್ಲ ಅವಲೋಕಿಸಿದರೆ ಬೆಳೆವಿಮೆ ಹೆಸರಿನಲ್ಲಿ ಕೆಲ ಅಧಿಕಾರಿಗಳು, ವಿಮಾ ಕಂಪನಿಗಳು ವ್ಯವಸ್ಥಿತವಾಗಿ ಲೂಟಿ ಮಾಡಿವೆ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ.

ಸಂಘಟನೆಗಳು ಏನ್ಮಾಡ್ತಿವೆ?
ಸಣ್ಣ ಪುಟ್ಟ ಸಂಗತಿಗಳಿಗೂ ಬೀದಿಗಿಳಿದು ಹೋರಾಟ ಮಾಡುವ ಹಾಗೂ ವಿನಾಕಾರಣ ಹೋರಾಟಕ್ಕಿಳಿಯುವ ಸಂಘಟನೆಗಳು, ರೈತ ಮುಖಂಡರು, ರೈತರು ಕಲಬುರಗಿ ಜಿಲ್ಲೆಗೆ ಆಗಿರುವ ಬೆಳೆವಿಮೆ ಮಂಜೂರಾತಿಯಲ್ಲಿನ ಅನ್ಯಾಯ ಹಾಗೂ ಶೋಷಣೆ ವಿರುದ್ಧ ಒಬ್ಬರೂ ಚಕಾರ ಎತ್ತದಿರುವುದು ಜಿಲ್ಲೆಯ ರೈತರ ದೌರ್ಭಾಗ್ಯ ಎನ್ನಬಹುದಾಗಿದೆ. ಬೆಳೆವಿಮೆ ತಮಗೇನು ಸಂಬಂಧ ಹಾಗೂ ಬೆಳೆವಿಮೆ ಎಂದರೇನೆ ಅರ್ಥವಾಗದಿರುವುದೇ ಹೋರಾಟದಿಂದ ದೂರ ಉಳಿಯಲು ಕಾರಣ ಎನ್ನಲಾಗುತ್ತಿದೆ. ಬೀದರ್‌ ಜಿಲ್ಲೆಗೆ 2016-17ನೇ ಸಾಲಿಗೆ 129 ಕೋಟಿ ರೂ. ಬೆಳೆವಿಮೆ ಮಂಜೂರಾಗಿದ್ದರೆ ಕಲಬುರಗಿ ಜಿಲ್ಲೆಗೆ ಕಳೆದ ವರ್ಷ 3.53 ಕೋಟಿ ರೂ. ಮಾತ್ರ ಬೆಳೆವಿಮೆ ಮಂಜೂರಾಗಿತ್ತು. ಈ ವರ್ಷವಂತೂ 125 ಕೋಟಿ ರೂ. ಬೆಳೆವಿಮೆ ಬಂದಿದೆ. ಬೀದರ್‌ ಸಂಸದರಾಗಿರುವ ಭಗವಂತ ಖೂಬಾ ಬೆಳೆವಿಮೆ ಕುರಿತಾಗಿ ಆಸಕ್ತಿ ಹೊಂದಿರುವುದೇ ಕಾರಣ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇದನ್ನು ಪ್ರಧಾನಿ ಮೋದಿ ಅವರು ಸಭೆಯೊಂದರಲ್ಲಿ ಹೇಳಿದ್ದರು.

ಹೊನ್ನಕಿರಣಗಿ, ಫಿರೋಜಾಬಾದ್‌ ಸೇರಿದಂತೆ ಇತರ ಗ್ರಾಮಸ್ಥರು ಬೆಳೆ ಇಳುವರಿ ಪ್ರಮಾಣ (ಕ್ರಾಪ್‌ ಕಟಿಂಗ್‌ ಎಕ್ಸ್‌ಪಿರಿಮೆಂಟ್)ಅಳೆಯುವುದರಲ್ಲಿ ಲೋಪವಾಗಿದೆ ಎಂದು ದೂರು ಸಲ್ಲಿಸಿದ್ದರ ಪರಿಣಾಮ ಇಳುವರಿ ಪ್ರಮಾಣ ಮತ್ತೆ ಸರ್ಚೇ ಮಾಡಲಾಗಿದೆ. ಇದರ ಜತೆಗೆ ಹಲವು ದೂರುಗಳನ್ನು ಇತ್ಯರ್ಥಪಡಿಸಲಾಗಿದೆ. ಜಿಲ್ಲೆಯಲ್ಲಿ ಈಗ 10 ಸಾವಿರ ರೈತರಿಗೆ ಬೆಳೆವಿಮೆ ಬಂದಿದೆ. ಇನ್ನೂ ಮೂರು ಸಾವಿರ ರೈತರಿಗೆ ಬೆಳೆವಿಮೆ ಮಂಜೂರಾಗಲಿದೆ. ಬೆಳೆ ಇಳುವರಿ ಪ್ರಮಾಣದಲ್ಲಿ ಲೋಪವಾಗಿಲ್ಲ. ಆದರೆ ಕಲಬುರಗಿ ಜಿಲ್ಲೆಯನ್ನು ಮಧ್ಯಮ ಬರಗಾಲವೆಂದು ಘೋಷಣೆ ಮಾಡಿದ್ದರಿಂದ ಕಡಿಮೆ ಬೆಳೆವಿಮೆ ಮಂಜೂರಾಗಿದೆ.
ಆರ್‌. ವೆಂಕಟೇಶಕುಮಾರ,
 ಜಿಲ್ಲಾಧಿಕಾರಿ, ಕಲಬುರಗಿ

Advertisement

Udayavani is now on Telegram. Click here to join our channel and stay updated with the latest news.

Next