Advertisement

ಬೆಳೆ ಹಾನಿ ಸಮೀಕ್ಷೆ ಚುರುಕುಗೊಳಿಸಲು ಸಲಹೆ

12:34 PM Aug 18, 2019 | Naveen |

ಕಲಬುರಗಿ: ಭೀಮಾ ನದಿ ಪ್ರವಾಹದಿಂದ ಹಾನಿಗೊಳಗಾದ ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮಕ್ಕೆ ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ ಶನಿವಾರ ಭೇಟಿ ನೀಡಿ ಬೆಳೆಗಳನ್ನು ವೀಕ್ಷಿಸಿದರು.

Advertisement

ಪ್ರವಾಹಕ್ಕೆ ತೊಗರಿ, ಕಬ್ಬು ಮತ್ತು ಹತ್ತಿ ಬೆಳೆಗಳು ಹಾಳಾದ ಹೊಲಗಳಿಗೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಬೆಳೆ ಹಾನಿ ಬಗ್ಗೆ ಗಮನಕ್ಕೆ ಬಂದಿದೆ. ಬೆಳೆ ಹಾನಿಯಾಗಿರುವ ಪ್ರದೇಶದಲ್ಲಿ ಕೂಡಲೇ ಬೆಳೆ ಸಮೀಕ್ಷೆ ಕಾರ್ಯ ಚುರುಕುಗೊಳಿಸಿ ರೈತರಿಗೆ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಮಾತನಾಡಿ, ಜಿಲ್ಲಾದ್ಯಂತ ಈಗಾಗಲೇ ಬೆಳೆ ಹಾನಿ ಕುರಿತಂತೆ ಸಮೀಕ್ಷೆ ಕಾರ್ಯ ನಡೆಯುತ್ತಿದೆ. ಭೀಮಾ ನದಿ ತೀರದ ಕೆಲ ಗ್ರಾಮಗಳಲ್ಲಿ ಮನೆ, ಬೆಳೆ ಹಾನಿಗೊಳಗಾದರೆ, ಇನ್ನು ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದರು.

ನೆಲೋಗಿ ಜಿಪಂ ಸದಸ್ಯೆ ದೇವಕಿ ಚನ್ನಮಲ್ಲಯ್ಯ ಹಾಗೂ ಗ್ರಾಮಸ್ಥರು ಮಾತನಾಡಿ, ಭೀಮಾ ಪ್ರವಾಹದಿಂದ ನದಿ ದಂಡೆಯಲ್ಲಿ ಬೆಳೆಯಲಾದ ಬಹುತೇಕ ಬೆಳೆಗಳು ಸಂಪೂರ್ಣ ಕೊಚ್ಚಿಕೊಂಡು ಹೋಗಿವೆ. ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಬಗ್ಗೆ ಅರಿವಿಲ್ಲದೆ ಗ್ರಾಮದ ಬಹುತೇಕ ರೈತರು ಬೆಳೆ ವಿಮೆ ಮಾಡಿಸಿಲ್ಲ. ಹೀಗಾಗಿ ಬೆಳೆ ವಿಮೆ ಮಾಡಿಸದ ರೈತರಿಗೂ ಸೂಕ್ತ ಪರಿಹಾರ ನೀಡಬೇಕು ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದರು.

ಕಲ್ಲೂರ ಬ್ರಿಡ್ಜ್ಗೆ ಭೇಟಿ: ಇದಕ್ಕೂ ಮುನ್ನ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ ಹಾಗೂ ಅಧಿಕಾರಿಗಳು ಕಲ್ಲೂರ(ಕೆ) ಬ್ರಿಡ್ಜ್ ಕಂ ಬ್ಯಾರೇಜ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬ್ಯಾರೇಜ್‌ನ ಕೊನೆಯಲ್ಲಿ ನೀರು ಹರಿಯುತ್ತಿರುವುದನ್ನು ಗಮನಿಸಿದ ಅವರು, ಕೂಡಲೇ ಬಂಡ್‌ ನಿರ್ಮಿಸಿ ನೀರು ತಡೆಯುವುದಲ್ಲದೇ, ಬ್ಯಾರೇಜ್‌ನಲ್ಲಿ ನೀರು ಶೇಖರಣೆಗೆ ಕ್ರಮ ಕೈಗೊಳ್ಳಬೇಕು. ಚಿಣಮಗೇರಾಗೆ ಸಂಪರ್ಕ ಕಲ್ಪಿಸುವ ಕೂಡು ರಸ್ತೆ ಕೊಚ್ಚಿಹೋಗಿದ್ದು, ರಸ್ತೆ ಕಾಮಗಾರಿ ಪ್ರಾರಂಭಿಸಬೇಕೆಂದು ಕೆಬಿಜೆಎನ್‌ಎಲ್ ರಾಂಪೂರ ವಿಭಾಗದ ಇಇ ಬಸವರಾಜ ಕುಂಬಾರ ಅವರಿಗೆ ಸೂಚನೆ ನೀಡಿದರು. ಕೂಡು ರಸ್ತೆಯನ್ನು 3.66 ಕೋಟಿ ರೂ. ವೆಚ್ಚದಲ್ಲಿ ನಿರ್ಮಿ ಸಲು ಈಗಾಗಲೇ ಟೆಂಡರ್‌ ಕರೆಯಲಾಗಿದೆ ಎಂದು ಇಇ ಬಸವರಾಜ ಅಧಿಕಾರಿಗಳ ಗಮನಕ್ಕೆ ತಂದರು.

Advertisement

ಪರಿಹಾರ ಚೆಕ್‌ ವಿತರಣೆ: ಭೀಮಾ ನದಿ ದಂಡೆಯಲ್ಲಿರುವ ಜೇವರ್ಗಿ ತಾಲೂಕಿನ ಹರವಾಳ ಗ್ರಾಮದಲ್ಲಿ ಪ್ರವಾಹದಿಂದ ಮನೆಗೆ ನೀರು ನುಗ್ಗಿ ಮನೆಯ ಆಸ್ತಿಪಾಸ್ತಿ ಹಾಗೂ ವಸ್ತುಗಳನ್ನು ಕಳೆದುಕೊಂಡ ಕುಟುಂಬಗಳಿಗೆ ರಾಜ್ಯ ಸರ್ಕಾರವು ಘೋಷಿಸಿರುವ ಹೆಚ್ಚುವರಿ 6,200 ರೂ.ಗಳ ಪರಿಹಾರದ ಮೊತ್ತದ ಚೆಕ್‌ಗಳನ್ನು ಇ.ವಿ.ರಮಣರೆಡ್ಡಿ ವಿತರಿಸಿದರು.

ಸಂತ್ರಸ್ತರಾದ ಭೀಮರಾಯ ಲಕ್ಷಣ, ಬಸವರಾಜ ನಾಗಪ್ಪ, ಸಿದ್ರಾಮ ರಾಮು, ನಾಗಮ್ಮ ಮಲ್ಲೇಶ, ಶರಣಪ್ಪ ಚಂದ್ರಪ್ಪ, ದೇವಿಂದ್ರಪ್ಪ ಅಂಬಣ್ಣಾ, ಶಾಂತರಾಯ ಭೀಮರಾಯ, ಹಣಮಂತ ಭೀಮಶಾ, ಬಲಭೀಮ ಅಂಬಣ್ಣಾ ಮತ್ತು ಅಂಬ್ರೇಶ್‌ ತಂ. ಮಾನಪ್ಪ ಅವರಿಗೆ ಚೆಕ್‌ ವಿತರಿಸಲಾಯಿತು.

ಜಿಪಂ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಡಾ| ಪಿ.ರಾಜಾ, ಸಹಾಯಕ ಆಯುಕ್ತ ರಾಹುಲ್ ಪಾಂಡ್ವೆ, ಪ್ರೊಬೇಷನರಿ ಐಎಎಸ್‌ ಅಧಿಕಾರಿ ಡಾ| ಬಿ.ಗೋಪಾಲಕೃಷ್ಣ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಚಪ್ಪ, ಜಂಟಿ ಕೃಷಿ ನಿರ್ದೇಶಕ ಡಾ| ರತೇಂದ್ರನಾಥ ಸುಗೂರ, ಜೇವರ್ಗಿ ತಹಶೀಲ್ದಾರ ಸಿದ್ದರಾಯ ಭೋಸಗಿ, ಪಂಚಾಯಿತಿ ರಾಜ್‌ ಎಂಜಿನಿಯರಿಂಗ್‌ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಶರಣಬಸಪ್ಪ ಹಾಗೂ ಇನ್ನಿತರ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next