ಕಲಬುರಗಿ: ಕೋವಿಡ್ ಮಹಾಮಾರಿ ಮತ್ತಿಬ್ಬರನ್ನು ಬಲಿ ಪಡೆದಿದೆ. 72 ವರ್ಷದ ವೃದ್ಧ, 50 ವರ್ಷದ ವ್ಯಕ್ತಿ ಸೋಂಕಿಗೆ ತುತ್ತಾಗಿದ್ದು, ಇದರೊಂದಿಗೆ ಮೃತರ ಸಂಖ್ಯೆ 17ಕ್ಕೆ ಏರಿಕೆಯಾದಂತಾಗಿದೆ.
ಮೃತ ಇಬ್ಬರೂ ಕಲಬುರಗಿ ನಗರ ಪ್ರದೇಶದವರೇ ಆಗಿದ್ದು, ಜ್ವರ, ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರು. ಗಾಜಿಪುರ ಬಡಾವಣೆಯ 50 ವರ್ಷದ ವ್ಯಕ್ತಿ (ಪಿ-11,278) ತೀವ್ರ ಉಸಿರಾಟದ ತೊಂದರೆಯಿಂದ ಜೂ.25ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಜೂ.26ರಂದು ಕೊನೆಯುಸಿರೆಳೆದಿದ್ದಾರೆ.
ಮತ್ತೊಂದೆಡೆ, ಮದೀನಾ ಕಾಲೋನಿಯ 72 ವರ್ಷದ ವೃದ್ಧ (ಪಿ-9833) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸಾಮಾನ್ಯ ಜ್ವರ ಬಂದಿದ್ದರಿಂದ ವೃದ್ಧನನ್ನು ಜೂ.23ರಂದು ಜಿಮ್ಸ್‌ಗೆ ದಾಖಲಿಸಲಾಗಿತ್ತು. ಇವರೂ ಜೂ.26ರಂದೇ ಅಸುನೀಗಿದ್ದಾರೆ.ಇಬ್ಬರ ಗಂಟಲು ಮಾದರಿ ಸಂಗ್ರಹಿಸಿ ಕೋವಿಡ್ ಪರೀಕ್ಷೆಗೆಂದು ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಶನಿವಾರ ಪ್ರಯೋಗಾಲಯದ ಬಂದ ವರದಿಯಲ್ಲಿ ಕೋವಿಡ್ ದೃಢಪಟ್ಟಿದೆ. ಆದರೆ, ವರದಿ ಬರುವ ಮುನ್ನವೇ ಮೃತಪಟ್ಟಿದ್ದಾರೆ.
ಮೃತರು ಸೇರಿ ಶನಿವಾರ ಒಟ್ಟು 33 ಜನರಿಗೆ ಸೋಂಕು ಪತ್ತೆಯಾಗಿದೆ. ಇದರಲ್ಲಿ 29 ಮಂದಿ 50 ವರ್ಷದೊಳಗಿನವರೇ ಹೆಚ್ಚು ಸೋಂಕಿತರಾಗಿದ್ದು, ಇಬ್ಬರು ಮಕ್ಕಳು ಸೇರಿದ್ದಾರೆ. ಉಳಿದಂತೆ 50 ವರ್ಷಕ್ಕಿಂತ ಮೇಲ್ಪಟ್ಟ ನಾಲ್ವರಿಗೆ ಕೊರೊನಾ ಕಾಣಿಸಿಕೊಂಡಿದೆ. ಇದೇ ಶನಿವಾರ ಮತ್ತೆ 24 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,364ಕ್ಕೆ ಏರಿಕೆಯಾಗಿದೆ. ಆಸ್ಪತ್ರೆಯಿಂದ 959 ಸೋಂಕಿತರು ಬಿಡುಗಡೆಗೊಂಡಿದ್ದರೆ, ಇನ್ನೂ 388 ಸೋಂಕಿತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ವಾಡಿ: ಪಟ್ಟಣ ವ್ಯಾಪ್ತಿಯಲ್ಲಿ ಶನಿವಾರ ನಾಲ್ವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ವಾಡಿ ನಗರದ ಜಾಂಬವೀರ ಕಾಲೋನಿಯ 7 ವರ್ಷದ ಬಾಲಕಿಗೆ, ಬಿರ್ಲಾ ಏರಿಯಾದ 20 ವರ್ಷದ ಯುವತಿಗೆ ಹಾಗೂ ನಾಲವಾರ ವ್ಯಾಪ್ತಿಯ ಬಾಲಿಸೌಕಾರ ತಾಂಡಾದ 49 ವರ್ಷದ ಪುರುಷ, 50 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಇವರೆಲ್ಲರೂ ಮಹಾರಾಷ್ಟ್ರದ ವಲಸಿಗರಾಗಿದ್ದಾರೆ ಎನ್ನಲಾಗಿದೆ.