Advertisement

ಏಳು ಮಕ್ಕಳಿಗೆ ಸೋಂಕು: ಐವರು ಗುಣಮುಖ

12:33 PM Jun 12, 2020 | Naveen |

ಕಲಬುರಗಿ: ಜಿಲ್ಲೆಯಲ್ಲಿ ಮಹಾ ಸೋಂಕಿನ ಕಂಟಕ ಮುಂದುವರಿದಿದ್ದು, ಗುರುವಾರ ಉತ್ತರ ಪ್ರದೇಶದ ಪ್ರವಾಸ ಹಿನ್ನೆಲೆಯ ಓರ್ವ ಮಹಿಳೆ ಹಾಗೂ ಮಹಾರಾಷ್ಟ್ರದಿಂದ ಬಂದ 15 ಜನರು ಸೇರಿ ಒಟ್ಟು 16 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.

Advertisement

16 ಜನ ಸೋಂಕಿತರಲ್ಲಿ ಎಂಟು ತಿಂಗಳು ಹೆಣ್ಣು ಮಗು ಸೇರಿ ಏಳು ಮಕ್ಕಳು ಸೇರಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 796ಕ್ಕೆ ಏರಿಕೆಯಾಗಿದೆ. ಉತ್ತರ ಪ್ರದೇಶದಿಂದ ಆಗಮಿಸಿದ ನಗರದ ಇಸ್ಲಾಮಾಬಾದ್‌ ಕಾಲೋನಿಯ 29 ವರ್ಷದ ಮಹಿಳೆ (ಪಿ-6186)ಗೂ ಮಹಾಮಾರಿ ಸೋಂಕು ಪತ್ತೆಯಾಗಿದೆ. ತಾಲೂಕಿನ ಹರಸೂರ ಗ್ರಾಮದ ಎಂಟು ತಿಂಗಳು ಹೆಣ್ಣು ಮಗು, 21 ವರ್ಷದ ಮಹಿಳೆ, ಮೂರು ವರ್ಷದ ಹೆಣ್ಣು ಮಗು, ಪಾಣೆಗಾಂವ್‌ ಗ್ರಾಮದ 20 ವರ್ಷದ ಮಹಿಳೆ, ಐದು ವರ್ಷದ ಗಂಡು ಮಗುವಿಗೆ ಸೋಂಕು ಪತ್ತೆಯಾಗಿದೆ. ಕಲಬುರಗಿ ನಗರದ ಖಂಡಾಲ್‌ ಪ್ರದೇಶದ 14 ವರ್ಷದ ಹೆಣ್ಣು ಮಗು, ಭರತ್‌ ನಗರದ 26 ವರ್ಷದ ಮಹಿಳೆ ಮತ್ತು ಬಸವ ನಗರದ 35 ವರ್ಷದ ಮಹಿಳೆಗೆ ಕೋವಿಡ್ ಅಂಟಿಗೊಂಡಿದೆ.

ಉಳಿದಂತೆ ಮಹಾರಾಷ್ಟ್ರದಿಂದ ಬಂದ ಸೇಡಂ ತಾಲೂಕಿನ ಕೋಟಪಲ್ಲಿ ಗ್ರಾಮದ 23 ವರ್ಷ ಮತ್ತು 21 ವರ್ಷದ ಪುರುಷರಿಗೆ ಸೋಂಕು ಕಾಣಿಸಿಕೊಂಡಿದೆ. ಕಮಲಾಪುರ ತಾಲೂಕಿನ ದೇವಲು ನಾಯಕ ತಾಂಡಾದ ಆರು ವರ್ಷದ ಹೆಣ್ಣು ಮಗು, 40 ವರ್ಷದ ಪುರುಷ, ಚಿತ್ತಾಪುರ ತಾಲೂಕಿನ ಮುಗುಳನಾಗಾಂವ್‌ ಗ್ರಾಮದ 60 ವರ್ಷದ ವೃದ್ಧ, ಶಹಾಬಾದ್‌ನ ನಿಜಾಮ ಬಜಾರ್‌ನ 14 ವರ್ಷದ ಗಂಡು ಮಗು ಹಾಗೂ ಜೇವರ್ಗಿ ತಾಲೂಕಿನ ನರಿಬೋಳ ಗ್ರಾಮದ ಐದು ವರ್ಷದ ಮಗುವಿಗೆ ಕೊರೊನಾ ಪತ್ತೆಯಾಗಿದೆ.

ಐದು ಮಕ್ಕಳು ಗುಣಮುಖ: ಕೋವಿಡ್ ಪೀಡಿತ ಐದು ಮಕ್ಕಳು ಸೇರಿ ಆರು ಜನರು ಗುರುವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕಾಳಗಿ ತಾಲೂಕಿನ ಅರುಣಕಲ್‌ ತಾಂಡಾದ ಏಳು ವರ್ಷದ ಬಾಲಕ (ಪಿ-1136), ಅಫಜಲಪುರ ತಾಲೂಕಿನ ರೇವೂರ ಗ್ರಾಮದ 25 ವರ್ಷದ ಯುವಕ (ಪಿ-3395), ಕಮಲಾಪುರ ತಾಲೂಕಿನ ಒಂಭತ್ತು ವರ್ಷದ ಬಾಲಕ (ಪಿ-3730), ವಿಕೆ ಸಲಗರ ಗ್ರಾಮದ ಏಳು ವರ್ಷದ ಬಾಲಕ (ಪಿ-3376), ಎಂಟು ವರ್ಷದ ಬಾಲಕಿ (ಪಿ-3377) ಹಾಗೂ 12 ವರ್ಷದ ಬಾಲಕಿ (ಪಿ-3378) ಮಹಾಮಾರಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ಸೋಂಕಿತ 796 ಜನರಲ್ಲಿ 285 ಜನ ಗುಣಮುಖರಾದಂತೆ ಆಗಿದೆ. ಉಳಿದಂತೆ 503 ಸಕ್ರಿಯ ರೋಗಿಗಳಿಗೆ ಐಸೋಲೇಷನ್‌ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಐದು ವರ್ಷದ ಬಾಲಕನಿಗೆ ಕೋವಿಡ್
ಜೇವರ್ಗಿ: ತಾಲೂಕಿನ ನರಿಬೋಳ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಕ್ವಾರಂಟೈನ್‌ನಲ್ಲಿದ್ದ ಐದು ವರ್ಷದ ಬಾಲಕನಿಗೆ ಗುರುವಾರ ಕೋವಿಡ್ ಸೋಂಕು ದೃಡಪಟ್ಟಿದೆ. ಬಾಲಕನ ಕುಟುಂಬದವರು ಇತ್ತೀಚೆಗೆ ಮಹಾರಾಷ್ಟ್ರದಿಂದ ಸ್ವಗ್ರಾಮ ನರಿಬೋಳಗೆ ಬಂದಿದ್ದರು. ನಂತರ ಇವರನ್ನು ರಾಜವಾಳ ರಸ್ತೆಯಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ 14 ದಿನಗಳ ಕಾಲ ಕ್ವಾರಂಟೈನ್‌ ಮಾಡಲಾಗಿತ್ತು. ಬಿಡುಗಡೆಯಾದ ನಂತರ ಹೋಂ ಕ್ವಾರಂಟೈನ್‌ನಲ್ಲಿದ್ದ ಈ ಕುಟುಂಬದಲ್ಲಿ ಐದು ವರ್ಷದ ಬಾಲಕನಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಬಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ನಗರದ ಕೋವಿಡ್‌ ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ಸಿದ್ಧು ಪಾಟೀಲ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next