ಕಲಬುರಗಿ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನಿಂದ ಮತ್ತೊಂದು ಸಾವು ಸಂಭವಿಸಿದ್ದು, ಮೃತರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಬೀದರ ಜಿಲ್ಲೆಯ ಹುಮನಾಬಾದ್‌ನ 36 ವರ್ಷದ ವ್ಯಕ್ತಿ (ಪಿ-16,764) ಸೋಂಕಿನಿಂದ ಮೃತಪಟ್ಟಿದ್ದಾರೆ. ಕೆಲ ದಿನಗಳ ಹಿಂದೆ ಬೆಂಗಳೂರಿನಿಂದ ವಾಪಸ್ಸಾಗಿದ್ದ ಇವರು ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡು ಪ್ರಜ್ಞಾಹೀನನಾಗಿದ್ದರು.
ಜೂ.29ರಂದು ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿತ್ತು. ಜೂ.30ರಂದೇ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಗುರುವಾರ ಪ್ರಯೋಗಾಲಯದ ವರದಿ ಬಂದಿದ್ದು, ಕೋವಿಡ್ ಸೋಂಕು ದೃಢವಾಗಿದೆ. ಗುರುವಾರ ಮೃತ ವ್ಯಕ್ತಿ ಸೇರಿ 38 ಜನರಿಗೆ ಸೋಂಕು ಪತ್ತೆಯಾಗಿದೆ. ಆಘಾತಕಾರಿ ಎಂದರೆ ಸೋಂಕಿತರ ಪೈಕಿ ಆರು ಮಕ್ಕಳು ಇದ್ದಾರೆ. ಮಹಾರಾಷ್ಟ್ರದಿಂದ ಬಂದಿರುವ 18 ಜನರು, ಸೋಂಕಿತರ ಸಂಪರ್ಕಕ್ಕೆ ಬಂದ ಮೂವರಿಗೆ ಕೋವಿಡ್ ವಕ್ಕರಿಸಿದೆ. ಅಫಜಲಪುರ ತಾಲೂಕಿನ ಹವನೂರ ಗ್ರಾಮವೊಂದರಲ್ಲೇ ಮಹಾರಾಷ್ಟ್ರದಿಂದ ಮರಳಿದ 8 ಮಂದಿಗೆ ಸೋಂಕು ಕಾಣಿಸಿಕೊಂಡಿದೆ.
ಮತ್ತೊಂದು ಆಘಾತಕಾರಿ ಅಂಶವೆಂದರೆ ಜ್ವರ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಒಂಭತ್ತು ಜನರಿಗೆ ಕೋವಿಡ್ ಕಾಣಿಸಿಕೊಂಡಿದೆ. 27 ವರ್ಷದ ಮಹಿಳೆ ಹಾಗೂ 20ರಿಂದ 52 ವರ್ಷದೊಳಗಿನ ಎಂಟು ಪುರುಷರಿಗೆ ಮಹಾಮಾರಿ ದೃಢಪಟ್ಟಿದೆ. ಒಟ್ಟಾರೆ, ಸೋಂಕಿತರ ಸಂಖ್ಯೆ 1,488ಕ್ಕೆ ಏರಿಕೆಯಾಗಿದೆ. ಇತ್ತ, 23 ಜನರು ಸೋಂಕಿನಿಂದ ಗುಣಮುಖರಾಗಿ ಗುರುವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಈ ಮೂಲಕ ಇದುವರೆಗೆ ಗುಣಮುಖರಾದವರ ಸಂಖ್ಯೆ ಸಹ 1,126ಕ್ಕೆ ಹೆಚ್ಚಳವಾಗಿದೆ. ಇನ್ನು, 343 ಸೋಂಕಿತರು ಐಸೋಲೇಷನ್ ವಾರ್ಡ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಾಡಿ: ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಸಾರ್ವಜನಿಕವಾಗಿ ಓಡಾಡುತ್ತಿದ್ದ ಹಾಗೂ ಮಹಾರಾಷ್ಟ್ರದಿಂದ ಬಂದು ಮಾಹಿತಿ ನೀಡದೆ ಮನೆಯಲ್ಲಿ ವಾಸವಿದ್ದ ವ್ಯಕ್ತಿ ಸೇರಿದಂತೆ ಒಟ್ಟು ಐವರ ವಿರುದ್ಧ ವಾಡಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಪಟ್ಟಣದಲ್ಲಿ ರೈಲ್ವೆ ಕಾರ್ಮಿಕ ಸೇರಿದಂತೆ ಒಟ್ಟು ಮೂವರು, ಲಾಡ್ಲಾಪುರ ಗ್ರಾಮದ ಓರ್ವ ವ್ಯಕ್ತಿ ಹಾಗೂ ಯಾಗಾಪುರ ಗ್ರಾ.ಪಂ ವ್ಯಾಪ್ತಿಯ ಬಾಂಬ್ಲಾ ನಾಯಕ ತಾಂಡಾ ನಿವಾಸಿಯೊಬ್ಬರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ಇವರನ್ನು ಶುಕ್ರವಾರ ವಶಕ್ಕೆ ಪಡೆದುಕೊಂಡು 14 ದಿನಗಳ ಸರಕಾರಿ ಕ್ವಾರಂಟೈನ್‌ಗೆ ಸೇರಿಸಲಾಗುವುದು ಎಂದು ಪಿಎಸ್‌ಐ ವಿಜಯಕುಮಾರ ಭಾವಗಿ ತಿಳಿಸಿದ್ದಾರೆ.
ಹೋಂಗಾರ್ಡ್‌ಗೂ ಕೋವಿಡ್
ಕೋವಿಡ್ ವಾರಿಯರ್ಸ್ ಆಗಿರುವ ಮತ್ತಿಬ್ಬರು ಪೊಲೀಸರು ಹಾಗೂ ಓರ್ವ ಹೋಂಗಾರ್ಡ್ಗೆ ಸೋಂಕು ಕಾಣಿಸಿಕೊಂಡಿದೆ. ನಗರದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಮತ್ತು ಬ್ರಹ್ಮಪುರ ಠಾಣೆಯ ತಲಾ ಒಬ್ಬ ಪೇದೆ ಮತ್ತು ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಹೋಂಗಾರ್ಡ್‌ಗೆ ಕೋವಿಡ್ ಪತ್ತೆಯಾಗಿದೆ. ಬಸವೇಶ್ವರ ಆಸ್ಪತ್ರೆ ಆವರಣದ ಪಿಜಿ ಹಾಸ್ಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಒಬ್ಬರಿಗೆ ಸೋಂಕು ಹರಡಿದೆ. ಅಲ್ಲದೇ, ಮಾತೃ ಸಂಸ್ಥೆಯ ಹಿರಿಯ ಉದ್ಯೋಗಿಯೊಬ್ಬರಿಗೂ ಕೊರೊನಾ ಕಾಣಿಸಿಕೊಂಡಿದೆ ಎಂದು ಮೂಲಗಳು ಹೇಳಿವೆ.