ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಫೆಲ್ ಖರೀದಿ ಕುರಿತಂತೆ ಅಪಪ್ರಚಾರ ಹಾಗೂ ಅವಹೇಳನ ಮಾಡುತ್ತಿರುವ ಎಐಸಿಸಿ (ಐ) ಮಾಜಿ ಅಧ್ಯಕ್ಷ ರಾಹುಲ್‌ಗಾಂಧಿ ಅವರಿಗೆ ದೇಶದ ಸುಪ್ರೀಂಕೋರ್ಟ್ ಛೀಮಾರಿ ಹಾಕಿದ್ದು, ಕೂಡಲೇ ರಾಹುಲ್‌ಗಾಂಧಿ ಪ್ರಧಾನಿ ಹಾಗೂ ದೇಶದ ಜನತೆ ಕ್ಷಮೆ ಕೇಳಬೇಕೆಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ರಾಹುಲ್ ಗಾಂಧಿ ಚಿತ್ರಕ್ಕೆ ಛೀ, ಥೂ ಎಂದು ಬರೆದು ಪ್ರತಿಭಟನೆ ನಡೆಸಿದರು.
ದೇಶದ ಸುಪ್ರಿಂಕೋರ್ಟ್ ರಫೆಲ್ ಪ್ರಕರಣದಲ್ಲಾದ ಅವ್ಯವಹಾರ ಕುರಿತು ಸಲ್ಲಿಸಲಾಗಿದ್ದ ಮರು ಪರಿಶೀಲನಾ ಅರ್ಜಿ ವಜಾ ಮಾಡಿದೆ. ರಾಹುಲ್ ಗಾಂಧಿ ದೇಶದ ಉದ್ದಗಲಕ್ಕೂ ಪ್ರಧಾನಿ ವಿರುದ್ಧ ಆಧಾರ ರಹಿತ ಆರೋಪ, ಅಪಪ್ರಚಾರ ಮಾಡುವ ಮೂಲಕ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸಿದ್ದಾರೆ. ಸುಪ್ರಿಂಕೋರ್ಟ್ ನೀಡಿರುವ ಆದೇಶ ಕಾಂಗ್ರೆಸ್ ಸೇರಿದಂತೆ ಇತರ ರಾಜಕೀಯ ಪಕ್ಷಗಳು ಹಾಗೂ ಅವುಗಳ ನಾಯಕರಿಗೆ ತಕ್ಕ ಪಾಠವಾಗಿದೆ ಎಂದು ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.
ಸುಪ್ರಿಂಕೋರ್ಟ್ ಆದೇಶ ರಫೇಲ್ ಡೀಲ್ ಪಾರದರ್ಶಕ ಹಾಗೂ ಭ್ರಷ್ಟಾಚಾರ ಮುಕ್ತವಾಗಿದೆ ಎನ್ನುವುದನ್ನು ಸಾಬೀತು ಮಾಡಿದೆ. ಈ ಬಗ್ಗೆ ಕಾಂಗ್ರೆಸ್ ಹಾಗೂ ಇತರ ಪ್ರತಿಪಕ್ಷಗಳು ಎಬ್ಬಿಸಿದ ಗದ್ದಲ ಅರ್ಥರಹಿತವಾಗಿದೆ. ಪ್ರಧಾನಿ ಮೋದಿ ಮೇಲೆ ಕಪ್ಪು ಚುಕ್ಕೆ ತರಲು ಯತ್ನಿಸಿದವರಿಗೆ ಕಪಾಳಮೋಕ್ಷವಾಗಿದೆ ಎಂದರು.
ಸುಪ್ರಿಂಕೋರ್ಟ್ ತೀರ್ಪಿನ ನಂತರ ರಾಹುಲ್‌ಗಾಂಧಿ ಅವರು ಮಾಡಿರುವ ಸುಳ್ಳು ಹಾಗೂ ಆಧಾರ ರಹಿತ ಆರೋಪದ ಬಗ್ಗೆ ದೇಶದ ಜನತೆಯಲ್ಲಿ ಬಹಿರಂಗ ಕ್ಷಮೆ ಕೇಳಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು, ಮಾಜಿ ಶಾಸಕ ಅಮರನಾಥ ಪಾಟೀಲ, ಚಂದು ಬಿ.ಜಿ.ಪಾಟೀಲ, ಹಣಮಂತರಾವ್ ಮಲಾಜಿ, ರಾಮಚಂದ್ರ ಜಾಧವ, ಶರಣಪ್ಪ ತಳವಾರ, ಶಿವಯೋಗಿ ನಾಗನಳ್ಳಿ ಹಾಗೂ ಇತರರು ಪಾಲ್ಗೊಂಡಿದ್ದರು.