Advertisement
ಈ ಹಿಂದಿನ ಎರಡು ಅವಧಿಯಲ್ಲೂ ಮೇಯರ್ ಸ್ಥಾನದ ಆಕ್ಷಾಂಕಿಯಾಗಿದ್ದ ಶರಣಕುಮಾರ ಮೋದಿ ಅವರಿಗೆ ಮೂರನೇ ಪ್ರಯತ್ನದಲ್ಲಿ ಮಹಾಪೌರರ ಗದ್ದುಗೆ ಒಲಿಯಿತು. ಪಾಲಿಕೆಯ ಇಂದಿರಾ ಸ್ಮಾರಕ ಭವನದಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ಮೋದಿ 40 ಮತ ಪಡೆದು ಬಿಜೆಪಿ ಅಭ್ಯರ್ಥಿ ವೀರಣ್ಣ ಹೊನ್ನಳಿ ಅವರನ್ನು ಸೋಲಿಸಿ ಚುನಾಯಿತರಾದರು.
Related Articles
Advertisement
ಅಧಿಕಾರ ಹಿಡಿಯಲು 32 ಸದಸ್ಯರ ಬಹುಮತ ಬೇಕು. ಒಟ್ಟಾರೆ ಪಾಲಿಕೆಯಲ್ಲಿ ಯಾರಿಗೂ ಬಹುಮತ ಇರದಿದ್ದರೂ ಕಾಂಗ್ರೆಸ್ ಪಕ್ಷೇತರ 8 ಜನ, ನಾಲ್ವರು ಜೆಡಿಎಸ್ ಹಾಗೂ ಇಬ್ಬರು ಕೆಜೆಪಿ ಸದಸ್ಯರೊಂದಿಗೆ ಅಧಿಕಾರಕ್ಕೆ ಬಂದಿದೆ. ಮಹಾಪೌರರ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರಿಂದ ತೀವ್ರ ಪೈಪೋಟಿ ಕಂಡು ಬಂದಿತ್ತು.
ಹುಲಿಗೆಪ್ಪ ಕನಕಗಿರಿ, ರಮೇಶ ತಿಪ್ಪಣ್ಣಪ್ಪ ಕಮಕನೂರ, ಮಲ್ಲಿಕಾರ್ಜುನ ಟೆಂಗಳಿ, ಮಹೇಶ ಹೊಸುರಕರ್ ಅವರೂ ಆಕಾಂಕ್ಷಿಗಳಾಗಿದ್ದರು. ವರಿಷ್ಠರು ಎಲ್ಲ ಸದಸ್ಯರ ಅಭಿಪ್ರಾಯ ಪಡೆದು ಕೊನೆಗೆ ಮೋದಿ ಅವರ ಹೆಸರನ್ನು ಅಂತಿಮಗೊಳಿಸಿದ್ದರಿಂದ ನಿರೀಕ್ಷೆಯಂತೆ ಆಯ್ಕೆಯಾದರು.
ಪಾಲಿಕೆಯಲ್ಲಿ ಕಿಂಗ್ ಮೇಕರ್ ಎಂದೇ ಖ್ಯಾತಿ ಪಡೆದಿರುವ ಮಾಜಿ ಸಚಿವ ಖಮರುಲ್ ಇಸ್ಲಾಂ, ಶಾಸಕ ಜಿ. ರಾಮಕೃಷ್ಣ, ವಿಧಾನ ಪರಿಷತ್ ಸದಸ್ಯ ಇಕ್ಬಾಲ ಅಹ್ಮದ ಸರಡಗಿ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ನಂತರ ಮಾತನಾಡಿದ ಮಾಜಿ ಸಚಿವ ಖಮರುಲ್ ಇಸ್ಲಾಂ, ನಂಜನಗೂಡು ಹಾಗೂ ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ಗೆಲುವಿನೊಂದಿಗೆ ಕಲಬುರಗಿ ಪಾಲಿಕೆಯಲ್ಲೂ ಕಾಂಗ್ರೆಸ್ ಆಡಳಿತ ಚುಕ್ಕಾಣಿ ಮುಂದುವರಿಸಿರುವುದನ್ನು ಮುಖ್ಯಮಂತ್ರಿಗೆ ಕಾಣಿಕೆಯಾಗಿ ನೀಡುವುದಾಗಿ ಘೋಷಿಸಿದರು.
ಮೇಯರ್ ಆಯ್ಕೆಯಾಗುತ್ತಿದ್ದಂತೆ ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ, ಶಾಸಕ ಡಾ| ಅಜಯಸಿಂಗ್, ವೀಕ್ಷಕರಾಗಿ ಆಗಮಿಸಿದ ಪ್ರಕಾಶ ರಾಥೋಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭಾಗಣ್ಣಗೌಡ ಪಾಟೀಲ ಸಂಕನೂರ ನೂತನ ಮೇಯರ್ ಮೋದಿಗೆ ಶುಭ ಕೋರಿದರು.
ವಿಜಯೋತ್ಸವ: ಶರಣುಮಾರ ಮೋದಿ ಮಹಾಪೌರರಾದ ನಂತರ ವಿಜಯೋತ್ಸವ, ತೆರೆದ ವಾಹನದಲ್ಲಿ ಮೆರವಣಿಗೆ ನಡೆಯಿತು. ಪಕ್ಷದ ಅಭಿಮಾನಿಗಳು, ವಾರ್ಡ್‌ನ ಮತದಾರರು, ಅಭಿಮಾನಿಗಳು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಮೂರನೇ ಸ್ಥಾನ: ಪ್ರಸಕ್ತ ಆಡಳಿತದ ಮೂವರು ಮೇಯರ್ ಅವಧಿಯುದ್ದಕ್ಕೂ ನಿರೀಕ್ಷೆ ಮೀರಿ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಮಾದರಿ ನಗರವನ್ನಾಗಿಸುವ ಗುರಿಯತ್ತ ಮುನ್ನಡೆಯಲಾಗುತ್ತಿದೆ. ಉತ್ತಮ ಆಡಳಿತ ನೀಡುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೇ ಕಲಬುರಗಿ ಪಾಲಿಕೆ ಮೂರನೇ ಸ್ಥಾನ ಪಡೆದಿದೆ.