ಕಲಬುರಗಿ: ನಗರದಲ್ಲಿ ಸೋಮವಾರ (ಡಿ.09) ನಡೆದ ಬಂಜಾರ ಸಮುದಾಯದ ಪ್ರತಿಭಟನೆ ವೇಳೆಯಲ್ಲಿ ಮೂರ್ನಾಲ್ಕು ಕಾರು ಹಾಗೂ ಅಂಗಡಿ ಮುಂಗಟ್ಟುಗಳ ಮೇಲೆ ಕಲ್ಲು ತೂರಿದ್ದ ಎಂಟು ಜನ ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಲ್ಲಿ ರಾತ್ರೋರಾತ್ರಿ ಇಬ್ಬರು ಅಪ್ರಾಪ್ತರು ಸೇರಿದಂತೆ ಒಟ್ಟು ಎಂಟು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಲ್ಲು ತೂರಾಟದ ವೇಳೆ ಸಂಭವಿಸಿದ ಅವಘಡದಲ್ಲಿ ಮೂರಕ್ಕೂ ಹೆಚ್ಚು ಕಾರುಗಳು ಹಾನಿಗೊಳಗಾಗಿದ್ದವು. ಅದಲ್ಲದೆ ಕೆಲವು ಅಂಗಡಿ ಮುಂಗಟ್ಟುಗಳಿಗೆ ಕಿಡಿಗೇಡಿಗಳು ಕಲ್ಲು ತೂರಿದ್ದರು. ಇದರಿಂದಾಗಿ ಕೆಲಕಾಲ ಪ್ರಕ್ಷುದ್ಧ ವಾತಾವರಣ ಉಂಟಾಗಿತ್ತು. ಇದರಿಂದ ಜನರಲ್ಲಿ ಭಯವು ಉಂಟಾಗಿತ್ತು.
ಬಂಧಿತರನ್ನು ಸಾಗರ್ ರಾಠೋಡ್, ರಾಹುಲ್ ರಾಠೊಡ್, ರಮೇಶ್ ರಾಠೋಡ್, ಅಭಿಷಕ್ ರಾಠೋಡ್, ಶಂಕರ್ ರಾಠೋಡ್ ಹಾಗೂ ಪ್ರದೀಪ್ ಪವಾರ್ ಎಂದು ಗುರುತಿಸಲಾಗಿದೆ.
ಪ್ರತಿಭಟನೆ ವೇಳೆಯಲ್ಲಿ ಈ ಕಿಡಿಗೇಡಿಗಳ ಚಲನವಲನದ ಕುರಿತು ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಬಂಧಿಸಿದ್ದಾರೆ ಎಂದು ಗೊತ್ತಾಗಿದೆ.
ಡಿ.3 ರಂದು ಬಂಜಾರ ಸಮುದಾಯದ ಅಪ್ರಾಪ್ತೆ ಮೇಲೆ ಯಾಡ್ರಾಮಿ ಠಾಣಾ ವ್ಯಾಪ್ತಿಯಲ್ಲಿ ಅತ್ಯಾಚಾರ ನಡೆದಿತ್ತು. ಅತ್ಯಾಚಾರ ಮಾಡಿದ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದರು. ಅತ್ಯಾಚಾರ ಖಂಡಿಸಿ ಬಂಜಾರ ಸಮುದಾಯ ಪ್ರತಿಭಟನೆ ಮಾಡಿತ್ತು. ಪ್ರತಿಭಟನೆ ವೇಳೆ ಗಲಾಟೆ ನಡೆದಿತ್ತು.