Advertisement

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

02:50 PM Apr 27, 2024 | Team Udayavani |

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. 19 ವರ್ಷದಲ್ಲಿ ಮಾರುಕಟ್ಟೆಯಲ್ಲಿ ಸುಳ್ಳು ಮಾರಿಕೊಂಡು ಹೊರಟಿದ್ದಾರೆ. ಅವರನ್ನು ನಂಬಿ ಮತ ಹಾಕಬೇಡಿ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದರು.

Advertisement

ಕಲಬುರಗಿಯ ಖಾಸಗಿ ಹೊಟೇಲ್ ನಲ್ಲಿ ನಡೆದ‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಹಿಂದುಳಿದವರ ಮೀಸಲಾತಿ ಕಿತ್ತುಕೊಂಡು ಮುಸ್ಲಿಮರಿಗೆ ಕೊಡುತ್ತಾರೆ ಎನ್ನುವ ಮೋದಿ ಹೇಳಿಕೆ ರಾಜಕೀಯ ಪ್ರೇರಿತವಾಗಿದೆ. ಮಹಿಳೆಯರ ಮಾಂಗಲ್ಯದ ಬಗ್ಗೆಯೂ ಕೂಡಾ ನೀಡಿದ ಅವರ ಹೇಳಿಕೆ ಹತಾಶೆಯಿಂದ ಕೂಡಿದೆ. ಅವರ ಹೇಳಿಕೆಗಳ ವಿರುದ್ದ ಕಾಂಗ್ರೆಸ್ ವತಿಯಿಂದ ಚುನಾವಣಾ ಆಯೋಗಕ್ಕೆ ದೂರು ದಾಖಲಿಸಲಾಗುವುದು ಎಂದು ಸಿಎಂ ಹೇಳಿದರು.

ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರಿಗೆ ನೀಡುವ ಮೀಸಲಾತಿಯನ್ನು ಯಾವ ಕಾರಣಕ್ಕೆ ಬಿಜೆಪಿ ಬೆಂಬಲಿಸಿಲ್ಲ. ಅಡ್ವಾಣಿ ಮೀಸಲಾತಿ ವಿರುದ್ದ ರಥಯಾತ್ರೆ‌ ಕೈಗೊಂಡಿದ್ದರು. ಬಿಜೆಪಿ ಎಂಪಿ ರಾಮಾಜೋಯಿಸ್ ಮಹಿಳೆಯರಿಗೆ ಹಾಗೂ ಹಿಂದುಳಿದ ವರ್ಗಗಳಿಗೆ ನೀಡುವ ಮೀಸಲಾತಿ‌ ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಮೀಸಲಾತಿ ನೀಡಿದನ್ನು ಸುಪ್ರಿಂ ಕೋರ್ಟ್ ಎತ್ತಿ ಹಿಡಿದಿತ್ತು ಎಂದು ನೆನಪಿಸಿಕೊಂಡರು.

ಸಂವಿಧಾನದ ಆರ್ಟಿಕಲ್ 15 ಹಾಗೂ 16 ಪ್ರಕಾರ ಎಲ್ಲರೂ ಸಮಾನರು. ಆದರೆ ಆರ್ಟಿಕಲ್ 14 ರ ಪ್ರಕಾರ ಸಾಮಾಜಿಕವಾಗಿ ಹಾಗೂ‌ ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಬಹುದು. ಮಂಡಲ್ ಆಯೋಗದ ವರದಿಯಲ್ಲಿ ಇದನ್ನೇ ಹೇಳಲಾಗಿದೆ. ಹಿಂದುಳಿದ ವರ್ಗಗಳ ಆಯೋಗ ಇರಬೇಕು ಎಂದು ಹೇಳಿದೆ. ಆದರೆ ವರದಿ ವಿರುದ್ದ ಬಿಜೆಪಿ ವಿದ್ಯಾರ್ಥಿಗಳನ್ನು ಪ್ರಚೋದಿಸಿತ್ತು. ಮೀಸಲಾತಿ ವಿಚಾರದಲ್ಲಿ ಸುಪ್ರಿಂ ಕೋರ್ಟ್ ಕೂಡಾ ಒಪ್ಪಿಕೊಂಡಿದ್ದು ಅದು ಶೇ 50% ಮೀರಬಾರದು ಎಂದು‌ ನಿಗದಿಪಡಿಸಿದೆ. ಆದರೆ, ಮೋದಿ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ 10% ಮೀಸಲಾತಿ ಕೊಟ್ಟಿದೆ. ಜೊತೆಗೆ ಬೊಮ್ಮಾಯಿ ಸರ್ಕಾರ ಅಧಿಕಾರದಲ್ಲಿದ್ದಾಗ‌ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲಾಗಿದೆ. ಎನ್ನುವ ಕಾರಣ ನೀಡಿ, ಮುಸಲ್ಮಾನರಿಗೆ ಕೊಟ್ಟಿದ್ದ ಮೀಸಲಾತಿಯನ್ನು ರದ್ದುಗೊಳಿಸಿದೆ.‌ಈ ಕುರಿತು ಸುಪ್ರಿಂ ಕೋರ್ಟ್ ಗೆ ಅರ್ಜಿ ಸಲ್ಲಿಕೆಯಾಗಿದೆ ಎಂದು ಸಿಎಂ ಹೇಳಿದರು.

1974-75 ರಲ್ಲಿ ನಡೆದ ಸಂವಿಧಾನದ ತಿದ್ದುಪಡಿ ಮೂಲಕ ಜಿಪಂ ಹಾಗೂ ತಾಪಂ ಗಳಿಗೆ ಮಹಿಳೆಯರಿಗೆ ಹಾಗೂ ಹಿಂದುಳಿದವರಿಗೆ ಮೀಸಲಾತಿ‌ ನೀಡಿತ್ತು. ನರಸಿಂವ್ ರಾವ್ ಪ್ರಧಾನಿ ಆಗಿದ್ದಾಗ ರಾಜ್ಯದಲ್ಲಿ ಬಿಸಿಎ ಬಿಸಿಬಿ ಮೀಸಲಾತಿ ತರಲಾಯಿತು. ಹಾಗೆ ಮಹಿಳೆಯರಿಗೆ 33% ಮೀಸಲಾತಿ ತರಲಾಯಿತು. ಹಿಂದುಳಿದವರಿಗೆ 33% ಮೀಸಲಾತಿ, ಬಿಸಿ(ಎ) ಗೆ 26.4% ಹಾಗೂ ಬಿಸಿ ( ಬಿ) ರವರಿಗೆ 6.6% ಮೀಸಲಾತಿ ನೀಡಲಾಗಿತ್ತು. ಆಗಿನಿಂದ ಈಗಿನವರೆಗೂ ಮುಸಲ್ಮಾನರು ಬಿಸಿ (ಎ) ನಲ್ಲಿ‌ ಇದ್ದಾರೆ ಎಂದು ಸಿಎಂ ವಿವರಿಸಿದರು.

Advertisement

1994 ರಲ್ಲಿ ಸಲ್ಲಿಕೆಯಾದ ಚಿನ್ನಪ್ಪರೆಡ್ಡಿ ವರದಿ ಪ್ರಕಾರ ಮಸ್ಲಿಂ ರಿಗೆ 4% ಮೀಸಲಾತಿ ನೀಡುವಂತೆ ಶಿಫಾರಸ್ಸು ಮಾಡಲಾಗಿತ್ತು. ಆಗ ವೀರಪ್ಪ ಮೋಯಿಲಿ ಸಿಎಂ ಆಗಿದ್ದರು. ಆದರೆ ಅದು ದೇವೇಗೌಡರು‌ ಸಿಎಂ ಆಗಿದ್ದಾಗ ಜಾರಿಯಾಗಿದೆ ಎಂದು‌ ಸಿದ್ದರಾಮಯ್ಯ ಹೇಳಿದರು.

11 ಸ್ಥಾನದಲ್ಲಿ ಮುಂದೆ

ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ಮುಗಿದಿದ್ದು, ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸಲಿದೆ ಎನ್ನುವ ವರದಿಗಳು ಬಂದಿವೆ ಎಂದು ಹೇಳಿದ ಸಿದ್ದರಾಮಯ್ಯ, ಗ್ಯಾರಂಟಿ ಯೋಜನೆಗಳು ಜನರ ಮೇಲೆ ಹೆಚ್ಚು ಪರಿಣಾಮ ಬೀರಿವೆ. ಚುನಾವಣೆಯಲ್ಲಿ ಕೇಂದ್ರ ಸರ್ಕಾರದ ಹತ್ತು ವರ್ಷದ ವೈಫಲ್ಯ ಹಾಗೂ ನಮ್ಮ ಸರ್ಕಾರದ ಸಾಧನೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದೇವೆ. ನಾನು ಸಚಿವರುಗಳೊಂದಿಗೆ ಮಾತನಾಡಿದ್ದೇನೆ. ಜನರು ಆಶೀರ್ವಾದ ಮಾಡಿದ್ದಾರೆ. ಕಾಂಗ್ರೆಸ್ ಹೆಚ್ಚು ಸೀಟು ಗೆಲ್ಲಲಿದೆ ಎಂದರು.

ಬರ ಪರಿಹಾರ ಕಡಿಮೆ

ರಾಜ್ಯದಲ್ಲಿ ತೀವ್ರ ಬರವಿದ್ದು ಸುಮಾರು 48 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. 18,171 ಕೋಟಿ ರೂ. ಹಾಗಾಗಿ‌, ಎನ್ ಡಿಆರ್ಎಫ್‌ ನಿಯಮದ ಪ್ರಕಾರ ರೂ 18171 ಕೋಟಿ ಪರಿಹಾರ ನೀಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ನಿಯಮಿತ ಅವಧಿಯೊಳಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದರೂ ಕೂಡಾ ಗೃಹ ಸಚಿವ ಹಾಗೂ ಹಣಕಾಸು ಸಚಿವೆ ಸುಳ್ಳು ಹೇಳಿ ದಾರಿ ತಪ್ಪಿಸಿದ್ದರು. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಸುಪ್ರಿಂ ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ಸುಪ್ರಿಂ ಕೋರ್ಟ್ ಸಮಸ್ಯೆಯನ್ನು ಬೇಗ ಬಗೆಹರಿಸುವಂತೆ ನಿರ್ದೇಶನ ನೀಡಿದ ಬಳಿಕ ಕೇಂದ್ರ ಈಗ ರೂ 3454 ಕೋಟಿ ಬಿಡುಗಡೆ ಮಾಡಿದೆ. ಇದು ಸಾಕಾಗುವುದಿಲ್ಲ. ನಮ್ಮ ಪ್ರಸ್ತಾವನೆಗೆ ಹೋಲಿಸಿದರೆ 1/4 ರಷ್ಟು ಕೂಡಾ ಆಗುವುದಿಲ್ಲ ಎಂದರು.

ಡಿಕೆ ಹಾಗೂ ನನ್ನ ನಡುವೆ ಭಿನ್ನಮತವಿಲ್ಲ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಾಗೂ ಸಿಎಂ ಮಧ್ಯೆ ಶೀತಲ ಸಮರ ನಡೆದಿದೆ ಎನ್ನುವ ಆಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮ ಹೇಳಿಕೆ ಪ್ರತಿಕ್ರಿಯಿಸಿದ ಸಿಎಂ, ಆಸ್ಸಾಂ ಸಿಎಂ ಗೆ ಇಲ್ಲಿನ ವಿಚಾರ ಗೊತ್ತಿಲ್ಲ. ತಮ್ಮ ಹಾಗೂ ಡಿಕೆ ಶಿವಕುಮಾರ ಮಧ್ಯೆ ಯಾವುದೇ ಶೀತಲ ಸಮರವಿಲ್ಲ ಎಂದು ಸ್ಪಷ್ಟಪಡಿಸಿದರು. ನಾವೆಲ್ಲ ಒಗ್ಗಟ್ಟಾಗಿದ್ದೇವೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿವೆ. ಅವರು ಬುದ್ದವಂತರಿದ್ದು ನಮಗೆ ಆಶೀರ್ವಾದ ಮಾಡಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದರು.

ಕಲಬುರಗಿಯಲ್ಲಿ ಕಾಂಗ್ರೆಸ್ ನಾಯಕರಿಗೆ ಸೇರಿದ್ದು ಎನ್ನಲಾದ ರೂ 2 ಕೋಟಿ ಹಣ ಸಿಕ್ಕಿರುವ ವಿಚಾರಕ್ಕೆ ಉತ್ತರಿಸಿದ ಸಿದ್ದರಾಮಯ್ಯ ಆ ಬಗ್ಗೆ ತಮಗೆ ಮಾಹಿತಿ ಇಲ್ಲ. ಚುನಾವಣಾ ಆಯೋಗ ಆ ಕುರಿತು ಕ್ರಮ ಕೈಗೊಳ್ಳಲಿದೆ ಎಂದರು.

ವೇದಿಕೆಯ ಮೇಲೆ ಸಿಎಂ ಸಲಹೆಗಾರ ಬಿ.ಆರ್.ಪಾಟೀಲ, ಸಚಿವರಾದ ಪ್ರಿಯಾಂಕ್ ಖರ್ಗೆ, ಶರಣಪ್ರಕಾಶ ಪಾಟೀಲ್, ಕೆಕೆಆರ್ ಡಿಬಿ ಅಧ್ಯಕ್ಷ ಅಜಯ್ ಸಿಂಗ್, ಶಾಸಕ ಅಲ್ಲಮಪ್ರಭು ಪಾಟೀಲ್, ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ ಸೇರಿದಂತೆ ಹಲವರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next