ಕಲಬುರಗಿ: ನಗರದ ಆಳಂದ ರಸ್ತೆಯ ದೇವಿ ನಗರದಲ್ಲಿ ಕಳೆದೆರಡು ದಿನಗಳಲ್ಲಿ ಸರಣಿ ಮನೆಗಳ್ಳತನವಾಗಿದ್ದು, ನಾಗರಿಕರು ಬೆಚ್ಚಿ ಬೀಳುವಂತಾಗಿದೆ.
ಚುನಾವಣೆ ನಡೆದ ಮೇ 10 ರಂದು ಹಾಗೂ 11ರಂದು ಎರಡು ದಿನಗಳ ಕಾಲ ದೇವಿ ನಗರ ಬಡಾವಣೆಗೆ ನುಗ್ಗಿದ ಕಳ್ಳರು ಒಟ್ಟು ಆರು ಮನೆಗಳಲ್ಲಿ ಕಳ್ಳತನ ಮಾಡಿದ್ದಾರೆ.
ಬೀಗ ಹಾಕಿದ ಎರಡು ಮನೆಗಳ್ಳತನ ಮಾಡಲಾಗಿದ್ದರೆ ಇನ್ನೂ ನಾಲ್ಕು ಮನೆಗಳಲ್ಲಿ ಮನೆಯವರು ಒಳಗಿದ್ದರೂ ಗೊತ್ತಾಗದ ರೀತಿಯಲ್ಲಿ ಬಾಗಿಲು ಮುರಿದು ಕಳ್ಳರು ಒಳನುಗ್ಗಿ ಕಳ್ಳತನ ಮಾಡಿದ್ದು, ನಗದು ಹಣ ಹಾಗೂ ಬಂಗಾರದೊಡವೆ ಕದ್ದು ಪರಾರಿಯಾಗಿದ್ದಾರೆ.
ಚುನಾವಣೆ ಹಾಗೂ ಮತ ಏಣಿಕೆಯ ಬಂದೋಬಸ್ತ್ ಕಾರ್ಯದತ್ತ ಪೊಲೀಸರು ಕಾರ್ಯೋನ್ಮುಖಗೊಂಡಿದ್ದನ್ನು ಕಂಡ ಆಗುಂತಕರು ಇದೇ ಸಮಯ ಸಾಧಿಸಿ ಅಪರಾಧ ಎಸಗಿದ್ದಾರೆ.
Related Articles
ಮನೆಗಳ್ಳತನ ಅಲ್ಲದೆ ವಾರದಿಂದೀಚೆಗೆ ಕನಿಷ್ಠ ಏನಿಲ್ಲವೆಂದರೂ ಮನೆ ಮುಂದೆ ನಿಲ್ಲಿಸಲಾಗಿದ್ದ ಎಂಟಕ್ಕೂ ಹೆಚ್ಚು ಬೈಕ್ ಗಳು ಕಳ್ಳತನವಾಗಿದೆ. ಒಟ್ಟಾರೆ ದೇವಿನಗರದ ಸರಣಿ ಮನೆಗಳ್ಳತನ ಹಾಗೂ ಬೈಕ್ ಕಳ್ಳತನದಿಂದ ಬಡಾವಣೆಯ ಜನರು ರಾತ್ರಿಯಿಡಿ ಜಾಗರಣೆ ಮಾಡುವಂತಾಗಿದೆ.
ಕಳ್ಳತನ ಬಗ್ಗೆ ಬಡಾವಣೆ ನಾಗರೀಕರು ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದರೆ, ಈಗ ಪೊಲೀಸರು ಚುನಾವಣಾ ಬಂದೋಬಸ್ತ್ ಗೆ ನಿಯೋಜನೆ ಗೊಂಡಿದ್ದರಿಂದ ಪ್ರಕರಣ ಸಹ ದಾಖಲಿಸಿಕೊಳ್ಳಲು ಸಿಬ್ಬಂದಿ ಇಲ್ಲ ಎನ್ನುವಂತಾಗಿದೆ. ಇನ್ನೆರಡು ದಿನ ತಾಳಿ ಎಂದು ನ್ಯೂ ರಾಘವೇಂದ್ರ ಪೊಲೀಸ್ ಠಾಣಾ ಪೊಲೀಸರು ಹೇಳುತ್ತಿದ್ದಾರೆ. ಸ್ಥಳಕ್ಕೆ ಶ್ವಾನದಳದವರು ಆಗಮಿಸಿ ಪರಿಶೀಲನೆ ನಡೆಸಿದರು.