Advertisement

ಕೊರೊನಾ ಕಪಿಮುಷ್ಠಿಯಲ್ಲಿ ನಲುಗಿದ ಕಲಬುರಗಿ

11:44 PM Mar 14, 2020 | Lakshmi GovindaRaj |

ಕಲಬುರಗಿ: ಕೋವಿಡ್‌-19 ಸೋಂಕಿಗೆ 76 ವರ್ಷದ ವೃದ್ಧರೊಬ್ಬರು ಬಲಿಯಾದ ನಂತರ ಇಡೀ ನಗರ ಕೊರೊನಾ ಕಪಿಮುಷ್ಠಿಯಲ್ಲಿ ಸಿಲುಕಿದಂತಾಗಿದೆ. ಮಂಗಳವಾರ ರಾತ್ರಿ ವೃದ್ಧ ಮೃತಪಟ್ಟ ಬಳಿಕ ಅವರ ಕುಟುಂಬಸ್ಥರ ಮೇಲೆ ನಿಗಾ ವಹಿಸಲಾಗಿತ್ತು. ಶುಕ್ರವಾರದವರೆಗೆ ಕುಟುಂಬ ದವರು, ನಾಲ್ವರು ಆಸ್ಪತ್ರೆ ಸಿಬ್ಬಂದಿ ಸೇರಿ ಒಟ್ಟು 46 ಜನರ ಮೇಲೆ ನಿಗಾ ವಹಿಸಲಾಗಿತ್ತು.

Advertisement

ಶನಿವಾರ ಬೆಳಗ್ಗೆ ವೇಳೆಗೆ ಸೋಂಕಿತನ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾದವರನ್ನೂ ಜಿಲ್ಲಾಡಳಿತ ಪತ್ತೆ ಹಚ್ಚಿದ್ದು, ಒಟ್ಟಾರೆ 71 ಜನರ ಮೇಲೆ ನಿಗಾ ವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಶರತ್‌ ಬಿ.ತಿಳಿಸಿದ್ದಾರೆ. ಮೃತ ವೃದ್ಧರ ನೇರ ಸಂಪರ್ಕ ಹಾಗೂ ಎರಡನೇ, ಮೂರನೇ ಸಂಪರ್ಕ ದಲ್ಲಿದ್ದವರ ಪತ್ತೆಗೆ ಶ್ರಮಿಸಲಾಗುತ್ತಿದೆ. ಆದರೆ, ಕೊರೊನಾ ಸೋಂಕಿನ ಭಯ ದಿಂದ ಮೃತನ ಕುಟುಂಬಸ್ಥರು ಹಾಗೂ ಆತನ ಸಂಪರ್ಕದಲ್ಲಿದ್ದವರು ಸರಿಯಾದ ಮಾಹಿತಿ ಕೊಡುತ್ತಿಲ್ಲ ಎಂದರು.

ಕಲಬುರಗಿ ಜನತೆ ಅಗತ್ಯ ವಸ್ತುಗಳಿಗೆ ಮಾತ್ರ ಮನೆಯಿಂದ ಹೊರಬರಬೇಕು. ಬಟ್ಟೆ-ಮದ್ಯದಂಗಡಿಗಳನ್ನು ಬಂದ್‌ ಮಾಡಿಸಲಾಗುತ್ತದೆ. ನಾಗರಿಕರು ಅಗತ್ಯ ವಸ್ತುಗಳನ್ನು ಖರೀದಿಸಿದ ತಕ್ಷಣ ವಾಪಸ್‌ ಮನೆಗೆ ತೆರಳಬೇಕು. ಬೇರೆ ಜಿಲ್ಲೆಯ ಜನರು ಕಲಬುರಗಿಗೆ ಬರುವು ದನ್ನು ತಪ್ಪಿಸಲು ಸಾರಿಗೆ ಸಂಸ್ಥೆಯ ಬಸ್‌ಗಳ ಸಂಚಾರ ಕಡಿತಗೊಳಿಸಲಾಗಿದೆ.

ಮೂವರಿಗೆ ನೆಗೆಟಿವ್‌: ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬದ ನಾಲ್ವರು ಶಂಕಿತರ ಪೈಕಿ ಮೂವರಿಗೆ ಸೋಂಕು ತಗುಲಿಲ್ಲ ಎಂಬುದು ಶನಿವಾರ ದೃಢಪಟ್ಟಿದೆ. ಇನ್ನೊಬ್ಬರ ವರದಿ ಭಾನುವಾರ ಬರುವ ನಿರೀಕ್ಷೆಯಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಸುದ್ದಿಗಾರರಿಗೆ ತಿಳಿಸಿದರು. ಮಗಳ ಮದುವೆ ನಂತರ ತಿರುಪತಿಗೆ ಬರುತ್ತೇನೆಂದು ಹರಕೆ ಹೊತ್ತುಕೊಂಡಿದ್ದೆ. ಹೀಗಾಗಿ, ತಿರುಪತಿ ಪ್ರವಾಸಕ್ಕೆ ಹೋಗಿದ್ದೆ. ಧರ್ಮ ಮತ್ತು ವಿಜ್ಞಾನ ಎರಡನ್ನೂ ಬಿಡಲು ಆಗೋದಿಲ್ಲ. ಕೊರೊನಾ ಸೋಂಕು ನಿವಾರಣೆಗೂ ಪ್ರಾರ್ಥನೆ ಮಾಡಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next