ಕಲಬುರಗಿ: ಅಕ್ಷರ ಜಾತ್ರೆಗೆ ಸಾಕ್ಷಿಯಾಗಲಿರುವ ಕನ್ನಡಾಭಿಮಾನಿಗಳಿಗೆ ವಸತಿ ಹಾಗೂ ಸಾರಿಗೆ ಕಲ್ಪಿಸುವ ಸಂಬಂಧ ನಡೆದ ಥಿಯರಿ ಚೆನ್ನಾಗಿ ಮುಗಿದಿದೆ. ನಾಡಿನಾದ್ಯಂತದಿಂದ ಸಾಹಿತ್ಯಾಸಕ್ತರಿಗೆ ಜಿಲ್ಲೆಯಲ್ಲಿ ಹಿತ ಅನುಭವ ನೀಡಬೇಕಾದ ಪ್ರ್ಯಾಕ್ಟಿಕಲ್ ಇನ್ನುಂದೆ ಶುರುವಾಗಿದೆ ಎಂದು ಸಮ್ಮೇಳನದ ಸಾರಿಗೆ ಮತ್ತು ವಸತಿ ಸಮಿತಿ ಅಧ್ಯಕ್ಷ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದ ಕೃಷಿ ಇಲಾಖೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾರಿಗೆ ಮತ್ತು ವಸತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ ಮಾತನಾಡಿದ ಅವರು, ಸಾಹಿತ್ಯ ಸಮ್ಮೇಳನ ಜಿಲ್ಲೆಯ ಮರ್ಯಾದೆ ಪ್ರಶ್ನೆ. ದೂರದೂರಿನಿಂದ ಬರುವ ಕನ್ನಡಾಭಿಮಾನಿಗಳಿಗೆ ವಾಸ್ತವ್ಯ, ಸಾರಿಗೆಯಲ್ಲಿ ಯಾವುದೇ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುವ ಹೊಣೆ ನಮ್ಮ ಮೇಲಿದೆ ಎಂದು ಅಧಿಕಾರಿಗಳು ಮತ್ತು ಸಮಿತಿ ಸದಸ್ಯರಿಗೆ ಎಚ್ಚರಿಸಿದರು.
ಒಂದೇ ಸ್ಥಳದಲ್ಲಿ ನೂರಾರು ಜನರಿಗೆ ವಾಸ್ತವ್ಯ ಕಲ್ಪಿಸಲಾಗುತ್ತಿದೆ. ಯಾವುದೇ ಅತಿಥಿ ಸಮಸ್ಯೆಯನ್ನು ಹೇಳಿದರೆ, ಸೌಜನ್ಯದಿಂದ ಆಲಿಸಿ ಸ್ಪಂದಿಸಬೇಕು. ಸಮಿತಿಯ ಯಾವೊಬ್ಬ ಸದಸ್ಯನೂ ಉತ್ತಮ ರೀತಿಯಲ್ಲಿ ನಡೆದುಕೊಳ್ಳದೇ ಹೋದಲ್ಲಿ ಇಡೀ ಜಿಲ್ಲೆಗೆ ಕೆಟ್ಟ ಹೆಸರು ಬರುತ್ತದೆ. ಮೇಲಾಧಿಕಾರಿಗಳು ಸಿಬ್ಬಂದಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಬೇಜವಾಬ್ದಾರಿ ತೋರುವ ಸಿಬ್ಬಂದಿ ಇದ್ದರೆ, ಇಂದೇ ಅಂತಹವರಿಗೆ ತಿಳಿಹೇಳಿ ಎಂದು ನಿರ್ದೇಶನ ನೀಡಿದರು.
ಸಭೆ ನಂತರ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಪ್ರಿಯಾಂಕ್ ಖರ್ಗೆ, ವಸತಿ ಮತ್ತು ಸಾರಿಗೆ ಸಮಿತಿಯಿಂದ 24 ನೋಡಲ್ ಅ ಧಿಕಾರಿಗಳು, 200 ಸಂಪರ್ಕ ಅಧಿಕಾರಿಗಳು ಮತ್ತು 400 ಸ್ವಯಂ ಸೇವಕರು ಕಾರ್ಯನಿರ್ವಹಿಸುತ್ತಾರೆ ಎಂದು ತಿಳಿಸಿದರು. ಅತಿಥಿ ಗಣ್ಯರು ತಂಗಿರುವ ಸ್ಥಳಗಳಲ್ಲಿ ಹಾಸಿಗೆ, ಕುಡಿಯುವ ನೀರು, ಮೇಣದ ಬತ್ತಿ, ಸೊಳ್ಳೆ ಬತ್ತಿ, ಶೌಚಾಲಯ ಮತ್ತು ಸ್ನಾನ ಗೃಹಗಳ ವ್ಯವಸ್ಥೆ ಮಾಡಲಾಗಿದೆ. ಅತಿಥಿ ಗಣ್ಯರು ತಂಗಿರುವ ಸ್ಥಳಗಳಲ್ಲಿ ಸುರಕ್ಷತೆ ದೃಷ್ಟಿಯಿಂದ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಪ್ರಥಮ ಚಿಕಿತ್ಸೆ ಹಾಗೂ ತುರ್ತು ಚಿಕಿತ್ಸೆಗಾಗಿ ಅಂಬ್ಯುಲೆನ್ಸ್ ಮತ್ತು ಹತ್ತಿರದ ಆಸ್ಪತ್ರೆಯನ್ನು ಗುರುತಿಸಲು ಆರೋಗ್ಯ ಸಮಿತಿಗೆ ಕೋರಲಾಗಿದೆ. 150ಕ್ಕಿಂತ ಹೆಚ್ಚಿನ ಜನರು ಉಳಿದುಕೊಳ್ಳುವ ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಸುವಂತೆ ಜಿಲ್ಲಾಡಳಿತಕ್ಕೆ ಪತ್ರ ಬರೆಯಲಾಗಿದೆ ಎಂದು ವಿವರಿಸಿದರು.
ಜಿ.ಪಂ ಮುಖ್ಯ ಕಾರ್ಯನಿರ್ವಾಹಣಾಧಿ ಕಾರಿಯಾದ ಸಾರಿಗೆ ಮತ್ತು ವಸತಿ ಸಮಿತಿ ಕಾರ್ಯಾಧ್ಯಕ್ಷ ಡಾ| ರಾಜಾ ಪಿ., ಜಿ.ಪಂ ಮುಖ್ಯ ಯೋಜನಾ ಧಿಕಾರಿ ಪ್ರವೀಣ ಪ್ರಿಯಾ ಡೇವಿಡ್ ಮತ್ತಿತರರು ಇದ್ದರು.