ಕಲಬುರಗಿ: ಕಳೆದ ನವೆಂಬರ್ 18ರಂದು ತಮ್ಮ ಮೇಲೆ ನಡೆದ ಹಲ್ಲೆಯನ್ನು ಅಪಘಾತವೆಂದು ಬಿಂಬಿಸಿರುವ ವಿರುದ್ದ ನ್ಯಾಯಾಲಯದ ಮೊರೆ ಹೋಗುತ್ತೇನೆ. ಷಡ್ಯಂತ್ರ ರೂಪಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಬಂದು ಉತ್ತರ ಹೇಳಲಿ ಎಂದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಹೇಳಿದರು.
ಪತ್ರಿಕಾ ಭವನದಲ್ಲಿಂದು ಕರೆಯಲಾದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪೊಲೀಸರು ಜಿಲ್ಲಾ ಉಸ್ತುವಾರಿ ಸಚಿವರ ಕೈಗೊಂಬೆಯಾಗಿ ತಮ್ಮ ವಿರುದ್ಧ ಸುಳ್ಳು ಅಪಾದನೆ ಹೊರಿಸಲಾಗಿದೆ. ಲೋಕೇಶನ ಸೇರಿದಂತೆ ಇತರ ಅಂಶಗಳನ್ನು ಮರೆ ಮಾಚಲಾಗಿದೆ. ಹೀಗಾಗಿ ನ್ಯಾಯಾಲಯದ ಮೊರೆ ಹೋಗಿ ನ್ಯಾಯ ಪಡೆಯುವುದಾಗಿ ತಿಳಿಸಿದರು.
ಮೊನ್ನೆ ಘಟನೆ ವಿವರಣೆ ನೀಡಲು ಪತ್ರಿಕಾಗೋಷ್ಠಿಗೆ ಆಗಮಿಸುತ್ತಿದ್ದ ವೇಳೆಯಲ್ಲಿ, ತಾವು ಮಾಧ್ಯಮದವರಿಗೆ ಏನೂ ಹೇಳಬಾರದೆಂದು ಎಂಬ ಉದ್ದೇಶ ಹಿನ್ನೆಲೆಯಲ್ಲಿ ಪೊಲೀಸರು ತಮ್ಮ ಮನೆಗೆ ನುಗ್ಗಿ ವಶಕ್ಕೆ ಪಡೆದು ಏಳೆಂಟು ಗಂಟೆ ಕಾಲ ಫರಹತಾಬಾದ್ ಠಾಣೆಯಲ್ಲಿ ಕೂಡಿಸಿ ಹಾಕಿ, ತದನಂತರ ಚಿತ್ತಾಪುರಕ್ಕೆ ರಾತ್ರಿ ಕರೆದುಕೊಂಡು ಹೋಗಿ ತಹಶಿಲ್ದಾರರ ಮುಂದೆ ಹಾಜರುಪಡಿಸಲಾಯಿತು. ಆದರೆ ಈ ಕುರಿತು ಪೊಲೀಸರೇ ನೀಡಿರುವ ದಸ್ತಗಿರಿ ನೋಟಿಸ್ ನಲ್ಲಿ ಸಂಜೆ 5 ಕ್ಕೆ ಹಾಜರುಪಡಿಸಲಾಗಿದೆ ಎನ್ನಲಾಗಿದೆ. ಒಟ್ಟಾರೆ ಪೊಲೀಸರು ನಡಾವಳಿಕೆ ಪ್ರಶ್ನಾರ್ಹವಾಗಿದೆ ಎಂದರು.
ತಮ್ಮ ವಾಹನ ಅಪಘಾತವು ಹಲ್ಲೆಯಾದ ನಂತರ ನಡೆದಿದೆ. ಅದಲ್ಲದೇ ಕಾರು ಅಪಘಾತವಾದ ಬಗ್ಗೆ ಪೊಲೀಸರಿಗೆ ಸಲ್ಲಿಸಲಾದ ತಮ್ಮ ಹೇಳಿಕೆಯಲ್ಲೇ ಅಪಘಾತವಾದ ಬಗ್ಗೆ ಉಲ್ಲೇಖಿಸಲಾಗಿದೆ. ಆದರೆ ಎಲ್ಲವೂ ತಿರುಚಲಾಗಿದೆ. ತಮ್ಮ ವಿರುದ್ದ ದಾಖಲಾದ ಎಲ್ಲ 50 ಪ್ರಕರಣಗಳು ವಜಾಗೊಂಡಿವೆ. ಇಷ್ಟಿದ್ದರೂ ತಮ್ಮನ್ನು ಆರೋಪಿ ಎಂದೇ ಟೀಕಿಸಲಾಗುತ್ತಿದೆ. ತಮ್ಮನ್ನು ಎಷ್ಟೇ ಹಣಿದರೂ ಕುಗ್ಗುವುದಿಲ್ಲ. ತಮ್ಮ ಹೋರಾಟ ಎಂದಿನಂತೆ ಮುಂದುವರೆಯುತ್ತದೆ ಎಂದು ಮಣಿಕಂಠ ಪ್ರಕಟಿಸಿದರು.
ವಾಹನ ಒಂದು ವೇಳೆ ಗುರುಮಿಠಕಲ್ ಬಳಿಯ ಚೆಪಟ್ಲಾ ಬಳಿ ಅಪಘಾತವಾಗಿದ್ದರೆ ಅಲ್ಲೇ ಗುರುಮಿಠಕಲ್ ಆಸ್ಪತ್ರೆಗೆ ಇಲ್ಲವೇ ಚಿತ್ತಾಪುರ ಆಸ್ಪತ್ರೆಗೆ ದಾಖಲಾಗುತ್ತಿದ್ದೆ. ಶಹಾಬಾದ ಬಳಿ ಹಲ್ಲೆಯಾಗಿದ್ದರಿಂದ ಕಲಬುರಗಿ ಗೆ ಬಂದು ಆಸ್ಪತ್ರೆಗೆ ದಾಖಲಾಗಿದ್ದೆ. ತಮಗೆ ಜೀವಕ್ಕಿಂತ ಆರೋಪ ಮಾಡುವುದೇ ದೊಡ್ಡದಾಗಿರಲಿಲ್ಲ . ಒಟ್ಟಾರೆ ತಮ್ಮ ವಿರುದ್ದ ಸುಳ್ಳು ಆರೋಪ ಮಾಡುತ್ತಾ ಬರಲಾಗಿದ್ದು, ಅದರಲ್ಲಿ ಇದೊಂದು ಸೇರ್ಪಡೆಯಾಗಿದೆ ಎಂದರು.
ಹಲ್ಲೆ ಘಟನೆ ನಂತರವೇ ತಾವು ಸಿಓಡಿ ಇಲ್ಲವೇ ಸಿಬಿಐಗೆ ಕೊಡಿ ಎಂದು ಒತ್ತಾಯಿಸಿದ್ದೆ, ಸಿಬಿಐ ತನಿಖೆ ನಡೆದರೆ ಸತ್ಯಾಂಶ ಬಯಲಿಗೆ ಬರುತ್ತದೆ. ನೆಟ್ ವರ್ಕ್ ಡಂಪಿಂಗ್ ಮಾಡಿದ್ದು ಯಾರು ಎಂಬುದು ಗೊತ್ತಾಗುತ್ತದೆ. ಉಸ್ತುವಾರಿ ಸಚಿವರು ಬೆಳಗಾವಿಯ ಸುವರ್ಣ ಸೌಧದಲ್ಲಿ ಕುಳಿತು, ತಾವೇ ತನಿಖಾಧಿಕಾರಿಯಂತೆ ಹೇಳಿದರು. ಘಟನೆ ನಡೆದಾಗ ಅವರೇ ಕಚ್ಚಾಡಿರಬಹುದು ಎಂದಿದ್ದರು. ನಂತರ ಬೇರೆಯದ್ದೇ ಹೇಳಿದ್ದರು. ಅವರಿಗೆ ಏನು ಹೇಳಬೇಕು ಎಂಬುದು ಗೊತ್ತಾಗುತ್ತಿಲ್ಲ. ಹೀಗಾಗಿ ತಮ್ಮನ್ನು ಥರ್ಡ್ ಕ್ಲಾಸ್ ಎಂದು ಟೀಕಿಸಿದ್ದಾರೆ. ಏಳು ಸಲ ಗೆದ್ದಿಸಿರುವ ಗುರುಮಿಠಕಲ್ ದವರಾದ ತಮ್ಮನ್ನು ಹೀಗೆ ಟೀಕಿಸಿರುವುದನ್ನು ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಮಣಿಕಂಠ ತಿರುಗೇಟು ನೀಡಿದರು.