Advertisement

ರೈತರ ನೆಮ್ಮದಿ ಕೆಡಿಸುತ್ತಿದೆ‌ ಕಿಸಾನ್‌ ಸಮ್ಮಾನ

06:40 PM Oct 20, 2019 | |

ಹಣಮಂತರಾವ ಭೈರಾಮಡಗಿ
ಕಲಬುರಗಿ: ಕೇಂದ್ರದ ಮಹತ್ವಾಕಾಂಕ್ಷಿ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ ನಿಧಿ ಯೋಜನೆಯಡಿ ರೈತರಿಗೆ ಆರು ಸಾವಿರ ರೂ. ಜತೆಗೆ ರಾಜ್ಯ ಸರ್ಕಾರದ ನಾಲ್ಕು ಸಾವಿರ ರೂ. ಆರ್ಥಿಕ ಸಹಾಯ ಕಲ್ಪಿಸುವ ಕಾರ್ಯ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಇಂತಹ ಅಸಮಾಧಾನದ ಕೂಗು ರೈತರಿಂದ ವ್ಯಾಪಕವಾಗಿ ಕೇಳಿ ಬರುತ್ತಿದೆ.

Advertisement

ಹೌದು. ಆನ್‌ಲೈನ್‌ನ ಕಿಸಾನ್‌ ಸಮ್ಮಾನ್‌ ಆ್ಯಪ್‌ ದಲ್ಲಿ ರೈತರ ಆಧಾರ ಸಂಖ್ಯೆ ನಮೂದಿಸಿ ನೋಡಿದರೆ ಪ್ರಥಮ ಕಂತು 01 ಆಗಸ್ಟ್‌ 2019 ಹಾಗೂ ಎರಡನೇ ಕಂತು 01 ಅಕ್ಟೋಬರ್‌ 2019ರಂದು ಖಾತೆಗೆ ಪಾವತಿಯಾಗಿದೆ ಎಂದು ತೋರಿಸುತ್ತದೆ. ಆದರೆ ಯಾವುದೇ ಖಾತೆಗೆ ಹಣ ಇನ್ನೂ ಜಮಾ ಆಗಿಲ್ಲ. ರಾಜ್ಯಾದ್ಯಂತ ರೈತರು ಬ್ಯಾಂಕ್‌ ಹಾಗೂ ಕೃಷಿ ಇಲಾಖೆಗೆ ನಿತ್ಯ ಅಲೆದಾಡುವಂತಾಗಿದೆ. ಆನ್‌ಲೈನ್‌ದಲ್ಲಿ ಎರಡು ಕಂತುಗಳ ಹಣ ಖಾತೆಗೆ ಜಮಾ ಎನ್ನುವುದಾಗಿ ತೋರಿಸಲಾಗಿದೆ. ಆದರೆ ಖಾತೆಗಳ ವಿವರಣೆ ಇಲ್ಲ. ಗೌಪ್ಯತೆ ಹಿನ್ನೆಲೆಯಲ್ಲಿ ಬ್ಯಾಂಕ್‌ನ ಖಾತೆ ಬಹಿರಂಗ ಮಾಡಲಾಗದಿದ್ದರೂ ಕೊನೆಗೆ ಮೂರು ಸಂಖ್ಯೆಗಳನ್ನಾದರೂ ನಮೂದಿಸಿದರೇ ರೈತರಿಗೆ ಅನುಕೂಲವಾಗುತ್ತದೆ.

ಟೋಲ್‌ ಫ್ರೀ ನಂಬರ್‌ಗೆ ಕಾಲ್‌ ಮಾಡಿದರೆ ಉತ್ತರ ದೊರಕುತ್ತಿಲ್ಲ. ಪ್ರಸ್ತುತ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಹಿಂಗಾರು ಬಿತ್ತನೆ ಬೀಜ ಹಾಗೂ ಗೊಬ್ಬರಕ್ಕಾದರೂ ಹಣ ಸಹಾಯಕ್ಕೆ ಬರಬಹುದೆಂದು ರೈತ ಜಪ ಮಾಡುತ್ತಿದ್ದಾನೆ, ಫ‌ಲ ಸಿಗುತ್ತಿಲ್ಲ. ಕಳೆದ ಫೆ.1ರಂದು ಕೇಂದ್ರ ಸರ್ಕಾರ ಬಜೆಟ್‌ದಲ್ಲಿ ಈ ಯೋಜನೆ ಪ್ರಕಟಿಸಿದ ನಂತರ ಫೆ.24ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಮಾರ್ಚ್‌ ತಿಂಗಳಲ್ಲಿ ಕೆಲ ರೈತರಿಗೆ ಮೊದಲನೇ ಕಂತು ಎರಡು ಸಾವಿರ ರೂ. ಜಮಾ ಆಗಿದೆ. ಅದೇ ರೀತಿ ಜೂನ್‌-ಜುಲೈ ತಿಂಗಳಿನಲ್ಲಿ ಇನ್ನಷ್ಟು ರೈತರ ಸಂಖ್ಯೆ ಸೇರಿ ಎರಡನೇ ಕಂತು ಜಮಾ ಆಗಿದೆಯಲ್ಲದೇ ಹಣ ಡ್ರಾ ಮಾಡಿಕೊಂಡಿದ್ದಾರೆ. ಕೆಲ ರೈತರಿಗೆ ಮೂರನೇ ಕಂತು ಇತ್ತೀಚೆಗೆ ಜಮಾ ಆಗಿದೆ. ಒಟ್ಟಾರೆ ಅರ್ಧದಷ್ಟು ರೈತರಿಗೆ ಈ ಮೂರೂ ಕಂತುಗಳು ಜಮಾ ಆಗಿದ್ದರೆ, ಇದರಲ್ಲಿ ಅರ್ಧ ರೈತರಿಗೆ ಒಂದನೇ ಕಂತು ಜಮಾ ಆಗಿದೆ. ಇನ್ನುಳಿದ ರೈತರಿಗೆ ಎರಡು ಕಂತುಗಳ ಮೊತ್ತ ಖಾತೆಗೆ ಜಮಾ ಆಗಿದೆ ಎಂದು ತೋರಿಸಲಾಗುತ್ತಿದೆ. ಆದರೆ ನಯಾಪೈಸೆಯೂ ಜಮಾ ಆಗಿಲ್ಲ. ಏಕೆ ಹೀಗಾಗಿದೆ. ಎಲ್ಲಿ ತಪ್ಪಾಗಿದೆ ಎನ್ನುವುದರ ಕುರಿತು ಯಾರೂ ವಿವರಿಸುತ್ತಿಲ್ಲ.
ರಾಜ್ಯದಲ್ಲಿ ಒಟ್ಟಾರೆ 52ಲಕ್ಷ ರೈತರಿಂದ ಅರ್ಜಿ ಸ್ವೀಕಾರವಾಗಿವೆ. ಆದರೆ ಇದರಲ್ಲಿ 40 ಲಕ್ಷ ರೈತರಿಗೆ ಒಟ್ಟಾರೆ ಯೋಜನೆ ತಲುಪಿದೆ. ಉಳಿದ 12ಲಕ್ಷ ರೈತರಲ್ಲಿ ಕೆಲವರಿಗೆ ಒಂದನೇ ಹಾಗೂ ಎರಡನೇ ಕಂತು ಖಾತೆಗೆ ಜಮಾ ಆಗಿದೆ ಎನ್ನಲಾಗುತ್ತಿದೆ. ಆದರೆ ಖಾತೆಗೆ ಹಣ ಜಮಾ ಆಗಿಲ್ಲ. ಇನ್ನುಳಿದ ರೈತರ ಕುರಿತಾಗಿ ಮಾಹಿತಿ ಕೇಳಿದರೆ ಪ್ರಕ್ರಿಯೆಯಲ್ಲಿದೆ ಎಂದು ತೋರಿಸಲಾಗುತ್ತಿದೆ.

ಪ್ರಥಮ ಕಂತು ಬಂದವರಲ್ಲಿ ಮೂರನೇ ಕಂತು ಯಾವಾಗ ಬರುತ್ತದೆ ಎಂದು
ವಿಚಾರಿಸಿದರೆ ಒಂದನೇ ಹಾಗೂ ಎರಡನೇ ಕಂತು ಕೈಗೆ ಯಾವಾಗ ದೊರಕುತ್ತದೆ ಎನ್ನುತ್ತಾರೆ. ಇನ್ನೂ ಸರದಿಯಲ್ಲಿದ್ದವರು ಯಾವಾಗ ನಮಗೆ ಯೋಜನೆ ಲಾಭ ಸಿಗುವುದೋ ಎನ್ನುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next