ಕಲಬುರಗಿ: ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕುಟುಂಬದೊಂದಿಗೆ ಬನ್ನಿ. ನಿಮ್ಮ ಮಕ್ಕಳನ್ನು ಕರೆ ತನ್ನಿ ಎಂದು 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಾಧ್ಯಕ್ಷ, ಕವಿ ಡಾ| ಎಚ್.ಎಸ್.ವೆಂಕಟೇಶಮೂರ್ತಿ ಹೇಳಿದರು.
ಮಂಗಳವಾರ ಬೆಳಗ್ಗೆ ನಗರದ ರೈಲ್ವೆ ನಿಲ್ದಾಣಕ್ಕೆ ಬಂದಿಳಿದ ಅವರು, ಇಷ್ಟೊಂದು ಜನ ಅಭಿಮಾನಿಗಳು ಸ್ವಾಗತ ಮಾಡುತ್ತಿದ್ದಿರಿ, ತುಂಬಾ ಖುಷಿ ಆಗಿದೆ. ಮೂರು ದಿನಗಳ ಕಾಲ ನಿಮ್ಮ ಜೊತೆ ಕಾಲ ಕಳೆಯಲಿದ್ದೇನೆ. ಸಮ್ಮೆಳನ ಅರ್ಥಪೂರ್ಣವಾಗಿ ನಡೆಯುತ್ತೆ. ಜತೆಗೆ ಯಶಸ್ವಿಯಾಗುತ್ತದೆ ಎಂದು ನುಡಿದರು.
ಕಲಬುರಗಿ ಜನರ ಪ್ರೀತಿಗೆ ನಾನು ತಲೆಬಾಗುವೆ. ಅತ್ಯಂತ ಖುಷಿಯಿಂದ ಸಮ್ಮೇಳನದಲ್ಲಿ ಭಾಗಿಯಾಗುವೆ. ಕಲ್ಯಾಣ ಕರ್ನಾಟಕ ಮತ್ತು ಅಖಂಡ ಕರ್ನಾಟಕದ ಜನರು ಭಾಗಿಯಾಗಿ ಸಮ್ಮೇಳನ ಯಶಸ್ವಿಗೊಳಿಸಬೇಕು. ಬೆಂಗಳೂರಿನ ಕಲಾಮಂದಿರಗಳಲ್ಲಿ ಮಕ್ಕಳನ್ನು ಬಿಡುವುದಿಲ್ಲ. ಆದರೆ ಸಾಹಿತ್ಯ ಸಮ್ಮೇಳನದಲ್ಲಿ ಅಂತಹ ಯಾವುದೇ ನಿರ್ಬಂಧವಿಲ್ಲ. ಆದ್ದರಿಂದ ಮಹಿಳೆಯರು, ಮಕ್ಕಳು ಎಲ್ಲರನ್ನೂ ಕರೆದುಕೊಂಡು ಬನ್ನಿ. ಮಕ್ಕಳಲ್ಲಿ ಕನ್ನಡ ಪ್ರೇಮ ಹುಟ್ಟಿಸುವ ಕೆಲಸ ಮಾಡಿ ಎಂದರು.
ನೆಗೆಟಿವ್ ಬೇಡ: ಸಾಹಿತ್ಯ ಸಮ್ಮೆಳನದ ನಿರ್ಣಯಗಳು ಕಾಗದಕ್ಕೆ ಸೀಮಿತ ಎನ್ನುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈಗ ನಕಾರಾತ್ಮಕವಾಗಿ ಯೋಚಿಸುವುದು ಬೇಡ. ಮಗು ಅಳದೇ ಹೋದರೆ ತಾಯಿ ಹಾಲು ಕೊಡುವುದಿಲ್ಲ. ನಾವು ಹೋರಾಟ ಮಾಡಲೇಬೇಕು. ಸರ್ಕಾರದ ಕಣ್ಣು ತೆರೆಸಲೇಬೇಕು. ಇವತ್ತಲ್ಲ, ನಾಳೆ ನಿರ್ಣಯಗಳು ಜಾರಿಗೆ ಬರುತ್ತವೆಂದು ವಿಶ್ವಾಸ ವ್ಯಕ್ತಪಡಿಸಿದರು.