Advertisement

‘ಕವಿಜನ ಮಾರ್ಗ’ಕ್ಕೆ 25 ಗಣ್ಯರ ಲೇಖನ

11:59 AM Jan 15, 2020 | Naveen |

ಕಲಬುರಗಿ: ಕನ್ನಡದ ಮೊದಲ ಉಪಲಬ್ದ ಗ್ರಂಥ “ಕವಿರಾಜ ಮಾರ್ಗ’. ಈ ಪ್ರಥಮ ಗ್ರಂಥವನ್ನು ಕನ್ನಡ ನಾಡಿಗೆ ನೀಡಿದ ನೆಲ ಕಲಬುರಗಿ. ಈ ನೆಲ ಮೂರು ದಶಕಗಳ ಬಳಿಕ ಕನ್ನಡ ಸಾಹಿತ್ಯ ಲೋಕದ ದೊಡ್ಡ ಹಬ್ಬವಾದ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಣಿಯಾಗಿದ್ದು, ಇದು ಸದಾ ನೆನಪಿನಲ್ಲಿ ಉಳಿಯುವಂತೆ ಮಾಡಲು “ಕವಿರಾಜ ಮಾರ್ಗ’ ಗ್ರಂಥದ ನಾಮಾಂಕಿತದ ಮಾದರಿಯಲ್ಲೇ “ಕವಿಜನ ಮಾರ್ಗ’ ಎನ್ನುವ ಸ್ಮರಣ ಸಂಚಿಕೆ ಹೊರಲಾಗುತ್ತಿದೆ.

Advertisement

ಗುಲಬರ್ಗಾ ವಿವಿ ಆವರಣದಲ್ಲಿ ಫೆ. 5, 6 ಮತ್ತು 7ರಂದು ಸಮ್ಮೇಳನ ನಡೆಯಲಿದ್ದು, ಸಿಕ್ಕ ಕಡಿಮೆ ಅವಧಿಯಲ್ಲೇ ಸ್ಮರಣೀಯವಾಗಿಸಲು ಸ್ಮರಣ ಸಂಚಿಕೆ ಸಮಿತಿ ನಿರ್ಧರಿಸಿದೆ. ಇಡೀ ಕರ್ನಾಟಕದ ಸಾಹಿತ್ಯ, ಸಂಸ್ಕೃತಿ, ಭಾಷೆಯನ್ನು ಒಳಗೊಂಡ ಸಮಗ್ರ, ಸಮೃದ್ಧವಾದ ಆಕರ ಗ್ರಂಥವನ್ನಾಗಿ “ಕವಿಜನ ಮಾರ್ಗ’ ರೂಪಿಸಲಾಗುತ್ತಿದೆ. ಸಮ್ಮೇಳನದ ಸ್ವಾಗತಿ ಸಮಿತಿ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸಲಹೆ ಮೇರೆಗೆ ನಾಡಿನ 25 ಗಣ್ಯ ಸಾಹಿತಿಗಳಿಂದ ಲೇಖನ ತರಿಸಿಕೊಳ್ಳಲಾಗುತ್ತಿದೆ.

ಮೂರು ವಿಭಾಗ: “ಕವಿಜನ ಮಾರ್ಗ’ ಸ್ಮರಣ ಸಂಚಿಕೆಯು 500 ಪುಟಗಳ ಗ್ರಂಥವಾಗಿರಲಿದೆ. ಸಮಗ್ರ ಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ಕಲಬುರಗಿ ಜಿಲ್ಲೆ ಎಂದು ಮೂರು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ರಾಜ್ಯಮಟ್ಟ, ಕಲ್ಯಾಣ ಕರ್ನಾಟಕ ಭಾಗದ ಲೇಖಕರ ಲೇಖನಗಳನ್ನು ಇದು ಒಳಗೊಂಡಿರಲಿದೆ. ಕರ್ನಾಟಕ ವಿಭಾಗದಲ್ಲಿ ನಾಡಿನ ಹೆಸರಾಂತ ಶ್ರೀಗಳು,
ಹಿರಿಯ ಸಾಹಿತಿಗಳು, ಲೇಖಕರು, ವಿದ್ವಾಂಸರ ಲೇಖನಗಳು ಇರಲಿದ್ದು,
ಬರಹಕ್ಕೆ ಇಂತಹದ್ದೇ ವಿಷಯವೆಂದಿಲ್ಲ. ಕಲ್ಯಾಣ ಕರ್ನಾಟಕ ವಿಭಾಗ ಮತ್ತು
ಕಲಬುರಗಿ ಜಿಲ್ಲೆ ವಿಭಾಗದ ಲೇಖಕರಿಗೆ ಸಮಿತಿಯವರೇ ವಿಷಯಗಳನ್ನು ಕೊಟ್ಟು ಲೇಖನಗಳನ್ನು ಬರೆಸುತ್ತಿದ್ದಾರೆ. ಈ ಭಾಗದ ನೆಲ, ಜಲ, ಭಾಷೆ, ಕಲೆ, ವಚನ ಸಾಹಿತ್ಯ, ತತ್ವಪದ, ದಾಸ ಸಾಹಿತ್ಯ, ಮಹಿಳಾ ಸಾಹಿತ್ಯ, ಗಡಿ ಮತ್ತು ಗಡಿ ಭಾಗದ ಕನ್ನಡ, ಶಿಕ್ಷಣ, ಶಾಲೆಗಳ ಸಮಸ್ಯೆ, ಕೃಷಿ, ಕ್ರೀಡೆ, ಪತ್ರಿಕೋದ್ಯಮ, ಕೈಗಾರಿಕೆ, ನೀರಾವರಿ ಯೋಜನೆಗಳ ಬಗ್ಗೆ ಲೇಖಕರು ಬೆಳಕು ಚೆಲ್ಲಲಿದ್ದಾರೆ ಎನ್ನುತ್ತಾರೆ “ಕವಿಜನ ಮಾರ್ಗ’ ಗ್ರಂಥದ ಪ್ರಧಾನ ಸಂಪಾದಕರಾದ ಹಿರಿಯ ಸಾಹಿತಿ ಡಾ| ಸ್ವಾಮಿರಾವ್‌ ಕುಲಕರ್ಣಿ.

ಬಂದಿವೆ 70 ಲೇಖನ: ಸ್ಮರಣ ಸಂಚಿಕೆಯಲ್ಲಿ 80ರಿಂದ 90 ಜನ ಲೇಖಕರ ಲೇಖನಗಳು ಇರಲಿವೆ. ಇದರಲ್ಲಿ ಸುಮಾರು 70 ಲೇಖಕರು ತಮ್ಮ ಲೇಖನ ಕಳುಹಿಸಿಕೊಟ್ಟಿದ್ದಾರೆ. ಗಡಿ ಭಾಗದ ಕನ್ನಡ ಮತ್ತು ಗಡಿಯಾಚೆ ಕನ್ನಡದ ಬಗ್ಗೆ ಮುಂಬೈ, ಪುಣೆ, ಅಕ್ಕಲಕೋಟೆ ಮತ್ತು ರಾಯಚೂರಿನ ಲೇಖಕರಿಂದ ಲೇಖನಗಳನ್ನು ಬರೆಸಲಾಗಿದೆ. ಹಲವು ಲೇಖಕರು ಇ-ಮೇಲ್‌ ಮೂಲಕ ಲೇಖನಗಳನ್ನು ಮತ್ತು ಕೈ ಬರಹದ ರೂಪದಲ್ಲಿ ಅಂಚೆ ಮೂಲಕ ಲೇಖನಗಳನ್ನು ಕಳುಹಿಸಿಕೊಟ್ಟಿದ್ದಾರೆ. ಲೇಖನಗಳನ್ನು ಸಂಪಾದಿಸಿ
ಅಂತಿಮ ಸ್ಪರ್ಶ ನೀಡುವಲ್ಲಿ ಸ್ಮರಣ ಸಂಚಿಕೆ ಸಮಿತಿಯವರು ಶ್ರಮಿಸುತ್ತಿದ್ದಾರೆ.

ಡಾ| ಸ್ವಾಮಿರಾವ್‌ ಕುಲಕರ್ಣಿ ಅವರೊಂದಿಗೆ ಸ್ಮರಣ ಸಂಚಿಕೆ ಪ್ರಧಾನ ಸಂಪಾದಕರಾಗಿ ಡಾ| ನಾಗಾಬಾಯಿ ಬುಳ್ಳಾ, ಸಂಪಾದಕರಾಗಿ ಡಾ| ಕಲ್ಯಾಣರಾವ್‌ ಪಾಟೀಲ, ಡಾ| ಈಶ್ವರಯ್ಯ ಮಠ, ಸಂಚಾಲಕರಾಗಿ ಡಾ| ವಿಜಯಕುಮಾರ ಪರುತೆ, ದೌಲತ್‌ರಾಯ ಪಾಟೀಲ, ಡಾ| ಮಡಿವಾಳಪ್ಪ ನಾಗರಹಳ್ಳಿ ಗ್ರಂಥ ರೂಪಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

Advertisement

ಸಂಪಾದಕೀಯ ಮಂಡಳಿ ಸದಸ್ಯರಾಗಿ ಎಂ.ಬಿ. ಪಾಟೀಲ, ಎಸ್‌.ಪಿ. ಸುಳ್ಳದ, ಡಾ| ಮಹಾದೇವ ಬಡಿಗೇರ, ಡಾ| ಶಾಂತಾ ಮಠ, ಡಾ| ಶಾರದಾದೇವಿ ಜಾಧವ, ಡಾ| ಅಮೃತಾ ಕಟಕೆ, ಡಾ| ಸಾರಿಕಾದೇವಿ ಕಾಳಗಿ, ಡಾ| ಶಾಂತಪ್ಪ ಡಂಬಳ, ವಿಶ್ವನಾಥ ಭಕರೆ, ಡಾ| ಶರಣಬಸಪ್ಪ ವಡ್ಡನಕೇರಿ, ಡಾ| ಭೀಮರಾವ್‌ ಅರಕೇರಿ, ಚಂದ್ರಶೇಖರ ಕಟ್ಟಿಮನಿ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

25 ಲೇಖಕರಿಗೆ ಪತ್ರ
85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ “ಕವಿಜನ ಮಾರ್ಗ’ ಗ್ರಂಥವು ಸ್ಮರಣೀಯವಾಗಲಿ ಎಂದು ಜ.10ರಂದು ನಡೆದ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಸೂಚಿಸಿದ್ದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಸ್ವತಃ ತಾವೇ ಹಲವು ವಿದ್ವಾಂಸರು, ಲೇಖಕರು, ಬರಹಗಾರರ ಹೆಸರನ್ನು ಪಟ್ಟಿ ಮಾಡಿ ಹೇಳಿದ್ದರು. ಅದರಂತೆ ಸ್ಮರಣ ಸಂಚಿಕೆ ಸಮಿತಿಯವರು ವಿಜಯಪುರದ ಸಿದ್ದೇಶ್ವರ ಶ್ರೀಗಳು, ಎಸ್‌.ಎಲ್‌.ಭೈರಪ್ಪ, ವೈದೇಹಿ, ಮಲ್ಲಿಕಾ ಘಂಟಿ, ಮಾಲತಿ ಪಟ್ಟಣಶೆಟ್ಟಿ, ರಹೆಮತ್‌ ತರೀಕೆರೆ, ಸಿದ್ದಲಿಂಗ ಪಟ್ಟಣಶೆಟ್ಟಿ, ಚಿರಂಜೀವಿ ಸಿಂಗ್‌, ಮಹಾದೇವ ಪ್ರಸಾದ್‌ ಸೇರಿ 25 ಲೇಖಕರಿಗೆ ಪತ್ರ ಬರೆದು ಲೇಖನಗಳನ್ನು ಆಹ್ವಾನಿಸಿದ್ದಾರೆ. ಎಲ್ಲರಿಗೂ ಎರಡು ದಿನಗಳ ಹಿಂದೆಯೇ ಪತ್ರ ಬರೆದು, ಜ.25ರೊಳಗೆ ಲೇಖನಗಳನ್ನು ಕಳುಹಿಸಿಕೊಂಡುವಂತೆ ಕೋರಿದ್ದಾರೆ.

“ಕವಿಜನ ಮಾರ್ಗ’ ಸ್ಮರಣ ಸಂಚಿಕೆಯು 500 ಪುಟಗಳ ಗ್ರಂಥವಾಗಿದೆ. ಕನ್ನಡ ನಾಡಿನ ಪ್ರಖ್ಯಾತ ಲೇಖಕರು ಲೇಖನಗಳು ಮತ್ತು ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಕ್ಷೇತ್ರಗಳ ಲೇಖನಗಳು ಇರಲಿವೆ. ಈಗಾಗಲೇ ಬಂದಿರುವ ಲೇಖನಗಳನ್ನು ಅಂತಿಮಗೊಳಿಸುವ ಕಾರ್ಯ ನಡೆದಿದೆ. ಈಗ ಹೊಸದಾಗಿ 25 ಲೇಖಕರಿಗೆ ಜ.25ರೊಳಗೆ ಲೇಖನ ಕಳುಹಿಸಿಕೊಡುವಂತೆ ಕೋರಲಾಗಿದೆ. ಎಲ್ಲ ಲೇಖನಗಳು ಬಂದ ತಕ್ಷಣ ಜಿಲ್ಲಾಧಿಕಾರಿಗಳ ಸೂಚಿಸುವ ಮುದ್ರಣಾಲಯಕ್ಕೆ ಗ್ರಂಥ ಮುದ್ರಣಕ್ಕೆ ಕೊಡಲಾಗುವುದು.
ಡಾ| ಸ್ವಾಮಿರಾವ್‌ ಕುಲಕರ್ಣಿ,
ಪ್ರಧಾನ ಸಂಪಾದಕರು, “ಕವಿಜನ ಮಾರ್ಗ’ ಸ್ಮರಣ ಸಂಚಿಕೆ

ರಂಗಪ್ಪ ಗಧಾರ

Advertisement

Udayavani is now on Telegram. Click here to join our channel and stay updated with the latest news.

Next