ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ರಾಜ್ಯಶಾಸ್ತ್ರ ವಿಭಾಗದ ಪಿಎಚ್‌ಡಿ ಪ್ರವೇಶ ಪರೀಕ್ಷೆ ನಡೆಸುವಲ್ಲಿ ಮತ್ತೂಮ್ಮೆ ವಿವಾದ ಎಳೆದುಕೊಂಡ ಪರಿಣಾಮ ಸತತ ಮೂರನೇ ಬಾರಿಗೂ ಪರೀಕ್ಷೆ ರದ್ದಾಯಿತು.
ರಾಜ್ಯಶಾಸ್ತ್ರ ವಿಭಾಗದ ಒಂಭತ್ತು ಪಿಎಚ್‌ಡಿ ಸೀಟುಗಳಿಗೆ ಪ್ರಶ್ನೆಪತ್ರಿಕೆಯನ್ನು ಲಕೋಟೆ ಬಿಚ್ಚದೆ ಹಾಗೆ ನೀಡಲಾಗಿದೆ ಎಂದು ಗುರುವಾರ ಪರೀಕ್ಷೆಗೆ ಹಾಜರಾದ 181 ಅಭ್ಯರ್ಥಿಗಳು ಆರೋಪಿಸಿ ಪರೀಕ್ಷೆ ಬರೆಯಲಿಲ್ಲ. ಅಷ್ಟೇ ಅಲ್ಲ, ಮೌಲ್ಯಮಾಪನ ಕುಲಸಚಿವರ ಕಚೇರಿ ಎದುರು ದಿಢೀರ್ ಪ್ರತಿಭಟನೆ ನಡೆಸಿ ಕುಲಸಚಿವ ಪ್ರೊ|ಸಂಜೀವಕುಮಾರ್‌ಗೆ ಮುತ್ತಿಗೆ ಹಾಕಿದರು.
ಪರೀಕ್ಷಾ ಕೇಂದ್ರದಲ್ಲಿ ಎಲ್ಲ ಅಭ್ಯರ್ಥಿಗಳ ಎದುರು ಪ್ರಶ್ನೆ ಪತ್ರಿಕೆ ಲಕೋಟೆ ಬಿಚ್ಚಿಲ್ಲ. ಹೀಗಾಗಿ ಪರೀಕ್ಷೆಗೆ ಮುನ್ನವೇ ತಮಗೆ ಬೇಕಾದವರಿಗೆ ಪ್ರಶ್ನೆಪತ್ರಿಕೆ ನೀಡಿರುವ ಅನುಮಾನವಿದೆ. ಪಾರದರ್ಶಕ ಪರೀಕ್ಷೆ ನಡೆಸುವಲ್ಲಿ ವಿಶ್ವವಿದ್ಯಾಲಯ ವಿಫಲವಾಗಿದೆ ಎಂದು ಪ್ರತಿಭಟನಾನಿರತರು ಅಸಮಾಧಾನ ವ್ಯಕ್ತಪಡಿಸಿದರು.
2 ಬಾರಿ ಮುಂದೂಡಲಾಗಿತ್ತು: ಪಿಎಚ್‌ಡಿ ಪರೀಕ್ಷೆ ಈ ಹಿಂದೆ ಎರಡು ಬಾರಿ ಮುಂದೂಡಿಕೆಯಾಗಿ ಗುರುವಾರ ಮೂರನೇ ಬಾರಿಗೆ ನಿಗದಿಯಾಗಿತ್ತು. ಮೊದಲ ಬಾರಿ ಪ್ರವೇಶ ಪರೀಕ್ಷೆ ನಡೆದಾಗ ಪ್ರಶ್ನೆಪತ್ರಿಕೆಯನ್ನು ಕೇವಲ ಇಂಗ್ಲಿಷ್‌ನಲ್ಲಿ ಕೊಡಲಾಗಿತ್ತು. ಕನ್ನಡದಲ್ಲಿ ಪ್ರಶ್ನೆ ಪತ್ರಿಕೆ ಇಲ್ಲದ ಕಾರಣ ಟೀಕೆಗೆ ಗುರಿಯಾಗಿ ಮುಂದೂಡಲಾಗಿತ್ತು.
ಎರಡನೇ ಬಾರಿ ಪರೀಕ್ಷೆ ನಡೆಸಿದರೂ ಕೀ ಉತ್ತರದಲ್ಲಿ ಸಾಕಷ್ಟು ತಪ್ಪುಗಳು ಇದ್ದವು. ಆಗ ಕೀ ಉತ್ತರ ಸರಿಪಡಿಸುವ ಬದಲಿಗೆ ಪರೀಕ್ಷೆಯನ್ನೇ ರದ್ದು ಮಾಡಲಾಗಿತ್ತು. ಇದೀಗ ಮೂರನೇ ಬಾರಿ ಪ್ರಶ್ನೆಪತ್ರಿಕೆ ಬಹಿರಂಗ ಆರೋಪ ಕೇಳಿ ಬಂದಿದೆ. ಈಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಮನವೊಲಿಸಲು ಕುಲಸಚಿವ ಪ್ರೊ| ಸಂಜೀವಕುಮಾರ ಪ್ರಯತ್ನ ಪಟ್ಟರೂ ಅವರು ಪಟ್ಟು ಸಡಿಲಿಸಲಿಲ್ಲ. ಆದ್ದರಿಂದ ಪರೀಕ್ಷೆ ಮುಂದೂಡಲಾಗುತ್ತಿದೆ ಎಂದು ಕುಲಸಚಿವರು ಪ್ರಕಟಿಸಿದರು.
ಪಿಎಚ್‌ಡಿ ಪ್ರವೇಶ ಪರೀಕ್ಷೆಯಲ್ಲಿ ಯಾವುದೇ ಗೊಂದಲ ಇರಲಿಲ್ಲ. ಪ್ರಶ್ನೆ ಪತ್ರಿಕೆ ಬಹಿರಂಗಗೊಂಡ ಬಗ್ಗೆ ಖಚಿತಪಡಿಸುವಂತೆ ಅಭ್ಯರ್ಥಿಗಳಿಗೆ ಅರ್ಧ ಗಂಟೆ ಸಮಯಾವಕಾಶ ನೀಡಲಾಯಿತು. ಆದರೂ ಅಭ್ಯರ್ಥಿಗಳು ವಿನಾಕಾರಣ ಪರೀಕ್ಷೆ ಕುರಿತು ಗದ್ದಲ ಮಾಡಿದರು. ಹೀಗಾಗಿ ಅನಿವಾರ್ಯವಾಗಿ ಪರೀಕ್ಷೆ ಮುಂದೂಡಲಾಗಿದೆ. ಮತ್ತೂಮ್ಮೆ ಪರೀಕ್ಷೆ ನಡೆಸಲು ಶೀಘ್ರವೇ ದಿನಾಂಕ ನಿಗದಿ ಮಾಡಲಾಗುವುದು.
ಪ್ರೊ| ಸಂಜೀವಕುಮಾರ,
ಕುಲಸಚಿವ (ಮೌಲ್ಯಮಾಪನ), ಗುವಿವಿ.