Advertisement

ರಾಜ್ಯದ 22 ಬೌದ್ಧ ನೆಲೆಗಳ ಅಧ್ಯಯನ

07:38 PM Mar 12, 2020 | Naveen |

ಕಲಬುರಗಿ: ವೈದಿಕ, ಜೈನ, ಬೌದ್ಧ ಭಾರತದ ಮೂಲ ಪರಂಪರೆಗಳಾಗಿವೆ. ಕರ್ನಾಟಕದಲ್ಲಿ ಪ್ರಸಿದ್ಧ 22 ಬೌದ್ಧ ನೆಲೆಗಳಿದ್ದು, ಅವುಗಳ ಬಗ್ಗೆ ಅಧ್ಯಯನ ನಡೆಯುತ್ತಿದೆ. ಮುಂದಿನ ಆರೇಳು ತಿಂಗಳಲ್ಲಿ ಸಂಪೂರ್ಣ ಇತಿಹಾಸ ಸಂಪುಟದ ರೂಪದಲ್ಲಿ ಹೊರ ಬರಲಿದೆ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ| ಮಲ್ಲೇಪುರಂ ಜಿ. ವೆಂಕಟೇಶ ಹೇಳಿದರು.

Advertisement

ನಗರದ ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮಾ ಗಾಂಧಿ ಸಭಾಂಗಣದಲ್ಲಿ ಬುಧವಾರ ಪಾಲಿ  ಮತ್ತು ಬೌದ್ಧ ಅಧ್ಯಯನ ಸಂಸ್ಥೆ, ಕನ್ನಡ ಅಧ್ಯಯನ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ “ರಾಷ್ಟ್ರೀಯ ಬೌದ್ಧ ಸಾಹಿತ್ಯ ಸಮ್ಮೇಳನ ಮತ್ತು ಕನ್ನಡ ಬೌದ್ಧ ಸಾಹಿತ್ಯ ಸಂಪುಟಗಳ ಜನಾರ್ಪಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬೆಂಗಳೂರು ರಾಜಘಟ್ಟ ಬೌದ್ಧ ಕ್ಷೇತ್ರದ ಇತಿಹಾಸ ತಕ್ಕಮಟ್ಟಿಗೆ ದಾಖಲಾಗಿದೆ. ಆದರೆ, ಕಲಬುರಗಿ ಜಿಲ್ಲೆಯ ಸನ್ನತಿ ಸೇರಿದಂತೆ ಉಳಿದ ಕ್ಷೇತ್ರಗಳ ಇತಿಹಾಸ ಹೊರಬರಬೇಕಿದೆ. ಈ ನಿಟ್ಟಿನಲ್ಲಿ ಅಧ್ಯಯನ ನಡೆಯುತ್ತಿದೆ. ಕಲ್ಯಾಣ ಕರ್ನಾಟಕದಲ್ಲಿ ಬೌದ್ಧ ಸಂಪತ್ತು ಹೇರಳವಾಗಿದೆ ಎಂದರು.

ಅನುವಾದದ ಮೂಲಕ ಬೌದ್ಧ ಸಾಹಿತ್ಯ ಜನರಿಗೆ ತಲುಪಿದೆ. ಕರ್ನಾಟಕದಲ್ಲಿ ನಾರಾಯಣ ಶಾಸ್ತ್ರೀಗಳು ಪಾಲಿಯಿಂದ ಕನ್ನಡಕ್ಕೆ ಅನುವಾದ ಪ್ರಕ್ರಿಯೆ ಆರಂಭಿಸಿದರು. 1910ರಲ್ಲಿ ಕನ್ನಡದ ಪ್ರಥಮ ಅನುವಾದಿತ ಗ್ರಂಥ ಹೊರ ಬಂದಿತ್ತು. ಆರಂಭದಿಂದಲೂ ಬೌದ್ಧ ಸಾಹಿತ್ಯದ ಬಗ್ಗೆ ಹೆಚ್ಚಿನ ಅಧ್ಯಯನ ಬಂಗಾಳಿ ಮತ್ತು ಮರಾಠಿಯಲ್ಲಿ ನಡೆದಿದ್ದು, ಕನ್ನಡ ಮೂರನೇ ಸ್ಥಾನದಲ್ಲಿದೆ ಎಂದು ತಿಳಿಸಿದರು. ಕನ್ನಡದಲ್ಲಿ ಸಾ.ಕು. ರಾಮಚಂದ್ರ ರಾಯರು, ಜಿ.ಪಿ. ರಾಜರತ್ನಂ, ಗೋವಿಂದ ಪೈ ಬೌದ್ಧ ಸಾಹಿತ್ಯದ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ್ದಾರೆ. ಪಾಲಿಯಿಂದ ಕನ್ನಡಕ್ಕೆ ಅನುವಾದಿಸಿ ಬೌದ್ಧ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಬೌದ್ಧಿಕವಾದ ಆಲೋಚನೆ ಇದ್ದರಷ್ಟೇ ಸಾಲದು ತಾತ್ವಿಕ ಅನುಷ್ಠಾನ ಮುಖ್ಯ ಎಂದು ಹೇಳಿದರು.

ರಾಜ್ಯದ ವಿಶ್ವವಿದ್ಯಾಲಯಗಳ ಇತಿಹಾಸದಲ್ಲಿ ಈ ರಾಷ್ಟ್ರೀಯ ಬೌದ್ಧ ಸಾಹಿತ್ಯ ಸಮ್ಮೇಳನ ವಿಶಿಷ್ಟವಾಗಿದ್ದು, ವಿಶ್ವವಿದ್ಯಾಲಯವೊಂದು ಆಯೋಜಿಸಿದ ಪ್ರಪ್ರಥಮ ಸಮ್ಮೇಳನವಾಗಿದೆ. ಒಟ್ಟಾರೆ ಬೌದ್ಧ ಸಾಹಿತ್ಯದ ಇತಿಹಾಸದಲ್ಲಿ ಇದನ್ನು ನಾಲ್ಕನೇ ಹಂತ ಎಂದು ಹೇಳಬಹುದಾಗಿದೆ. ವಿವಿಧ ರಾಜ್ಯಗಳ 72 ಜನ ವಿದ್ವಾಂಸರು ಪ್ರಬಂಧ ಮಂಡಿಸುತ್ತಿರುವುದು ಸಮ್ಮೇಳನದ ಹಿರಿಮೆ ಹೆಚ್ಚಿಸಲಿದೆ ಎಂದು ಶ್ಲಾಘಿಸಿದರು.

Advertisement

ಆರು ಗ್ರಂಥಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಾ| ಡಿ.ಜಿ. ಸಾಗರ, ಹೊರ ದೇಶದಲ್ಲಿ ವೈಜ್ಞಾನಿಕ ನೆಲಗಟ್ಟಿನಲ್ಲಿ ಬೌದ್ಧ ಧರ್ಮವನ್ನು ಅಪ್ಪಿಕೊಳ್ಳಲಾಗಿದೆ. ಆದರೆ, ಮೂಲ ನೆಲವಾದ ನಮ್ಮ ದೇಶದಲ್ಲಿ ವಿಚಾರ, ಆಚಾರ, ಪ್ರಚಾರ ಬದಲಾಗಿ ಕೇವಲ ಪ್ರಚಾರ ಮುಂಚೂಣಿಯಲ್ಲಿ ಇದೆ. ಇದರಿಂದ ಬೌದ್ಧ ಧರ್ಮ ಸೊರಗಿದೆ. ಹೀಗಾಗಿ ಇಂತಹ ಸಮ್ಮೇಳನಗಳು ಇವತ್ತಿನ ದಿನಗಳಲ್ಲಿ ತುಂಬ ಅವಶ್ಯಕವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಂಗಾಮಿ ಕುಲಪತಿ ಡಾ| ದೇವಿದಾಸ ಮಾಲೆ, ರಂಗಾಯಣ ನಿರ್ದೇಶಕ ಪ್ರಭಾಕರ ಜೋಷಿ, ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆ ಅಧ್ಯಕ್ಷ ಡಾ| ಎಚ್‌.ಟಿ. ಪೋತೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಸಚಿವ ಸಿ. ಸೋಮಶೇಖರ, ಮೌಲ್ಯಮಾಪನ ಕುಲಪತಿ ಡಾ| ಸಂಜೀವ್‌ ಕುಮಾರ, ಸಿಡಿಂಕೇಟ್‌ ಸದಸ್ಯ ಚಂದ್ರಶೇಖರ್‌ ನಿಟ್ಟೂರ, ವಿದ್ಯಾ ವಿಷಯಕ ಪರಿಷತ್‌ ಸದಸ್ಯ ಪ್ರೊ| ಜಿ.ಎಂ. ವಿದ್ಯಾಸಾಗರ ಹಾಗೂ ವಿದ್ವಾಂಸರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next