Advertisement

ಕಲಬುರಗಿ: ಕುಲಸಚಿವರ ವಜಾಕ್ಕೆ ಒತ್ತಾಯ

01:21 PM Sep 07, 2022 | Team Udayavani |

ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿ ಬಳಿಯಲ್ಲಿರುವ ಕೇಂದ್ರೀಯ ವಿವಿಯಲ್ಲಿ ನಡೆದಿರುವ ಇಂಗ್ಲಿಷ್‌ ಸೇರಿದಂತೆ ಇತರೆ ವಿಷಯಗಳ ಪ್ರಾಧ್ಯಾಪಕರು, ಕುಲಸಚಿವರ ನೇಮಕಗಳು ಅಕ್ರಮವಾಗಿದ್ದು, ಕೂಡಲೇ ವಜಾ ಮಾಡಬೇಕು ಎಂದು ಒತ್ತಾಯಿಸಿ ವಿಶ್ವವಿದ್ಯಾಲಯಗಳ ಹಿತರಕ್ಷಣಾ ಸಮಿತಿ ಹಾಗೂ ರಿಪಬ್ಲಿಕನ್‌ ಯೂತ್‌ ಫೆಡರೇಷನ್‌ ಸದಸ್ಯರು ಮುಖ್ಯದ್ವಾರ ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು.

Advertisement

ಬೆಳಗ್ಗೆಯಿಂದಲೇ ಪ್ರತಿಭಟನಕಾರಾರರು ಮುಖ್ಯದ್ವಾರಕ್ಕೆ ಕೀಲಿ ಜಡಿದು ಮುಂಭಾಗದಲ್ಲಿ ಧರಣಿ ಕುಳಿತರು. ಬಳಿಕ ಕುಲಪತಿಗಳ ಮೂಲಕ ಕುಲಾಧಿಪತಿಗಳಾದ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಮುಖಂಡರು, ನೇಮಕಾತಿಯ ಅರ್ಹತಾ ಮಾನದಂಡಗಳನ್ನು ಸಮರ್ಪಕವಾಗಿ ಪೂರೈಸಿಲ್ಲ. ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಸಂಗ್ರಹಿಸಿಲಾದ ವಿವಿ ದಾಖಲೆಗಳಲ್ಲೇ, ಇಂಗ್ಲಿಷ್‌ ವಿಷಯದಲ್ಲಿ ಪಿಎಚ್‌ಡಿ ಹೊಂದದೇ ಇದ್ದರೂ, 2011ರಲ್ಲಿ ಸಹ ಪ್ರಾಧ್ಯಾಪಕರೆಂದು ನೇಮಕಗೊಂಡಿದ್ದಾರೆ. ಅಚ್ಚರಿ ಎಂದರೆ 2013ರಲ್ಲಿ ಅವರು ಪಿಎಚ್‌ಡಿ ಪಡೆದಿದ್ದಾರೆ. ಆದರೂ ಸಹ ಇವರನ್ನು ಸಹಪ್ರಾಧ್ಯಾಪಕ ಹುದ್ದೆಗೆ ಪರಿಗಣಿಸಿರುವುದು ನೇರವಾಗಿ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ಕಂಡುಬಂದಿದೆ ಎಂದು ಆರೋಪಿಸಿದರು.

ಬಳಿಕ ಇವರನ್ನು ಕುಲಸಚಿವರನ್ನಾಗಿ ನೇಮಿಸಲಾಗಿದೆ. ಆಗಿನಿಂದಲೂ ಇವರು, ಹಲವಾರು ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಗಳ ನೇಮಕವೂ ಅವ್ಯವಹಾರದಿಂದ ಕೂಡಿದೆ. ಆದ್ದರಿಂದ ಕೂಡಲೇ ಈ ಎಲ್ಲ ನೇಮಕಾತಿಗಳು ಮತ್ತು ಕುಲಸಚಿವರ ನೇಮಕಾತಿ ಕುರಿತು ಸಮಗ್ರ ತನಿಖೆಗೆ ಒಳಪಡಿಸಬೇಕು. ಕೂಡಲೇ ಕುಲಸಚಿವರನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಸುನೀಲ ಮಾರುತಿ ಮಾನ್ಪಡೆ, ಅಶ್ವಿ‌ನಿ ಮದನಕರ್‌, ಅನಿಲ ಟೆಂಗಳಿ, ಗೌತಮ್‌ ಕರಿಕಲ್‌, ಬಾಬುರಾವ್‌ ಬೀಳಗಿ, ಸುರೇಶ ಕಟ್ಟಿಮನಿ, ಧರ್ಮಣ್ಣ ಕೋಣಿಕರ್‌, ಸಂತೋಷ ಮೇಲ್ಮನಿ, ಮುತ್ತಣ್ಣ ನಡಿಗೇರ್‌, ರಾಜೇಂದ್ರ ರಾಜವಾಳ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next