ಹಣಮಂತರಾವ ಭೈರಾಮಡಗಿ
ಕಲಬುರಗಿ: ಕಳೆದ 2018-19ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆವಿಮೆ ಕಲಬುರಗಿ ಜಿಲ್ಲೆಗೆ ಕೇವಲ 8 ಕೋಟಿ ರೂ. ಬಿಡುಗಡೆಯಾಗಿದ್ದು, ಬೆಳೆವಿಮೆ ಮಂಜೂರಾತಿಯಲ್ಲಿನ ಶೋಷಣೆ ಮುಂದುವರಿದಂತಾಗಿದೆ. ಆಶ್ಚರ್ಯಕರ ಸಂಗತಿ ಎಂದರೆ ಆಳಂದ ತಾಲೂಕಿಗೆ 6.36 ಕೋಟಿ ರೂ. ಬೆಳೆವಿಮೆ ಬಿಡುಗಡೆಯಾಗಿದ್ದರೆ, ಜೇವರ್ಗಿ ತಾಲೂಕಿಗೆ ಒಂದು ಕೋಟಿ ರೂ. ಬಿಡುಗಡೆಯಾಗಿದೆ.
ಉಳಿದ ತಾಲೂಕುಗಳಿಗೆ ಲಕ್ಷ ಇಲ್ಲವೇ ಸಾವಿರ ರೂ.ದಲ್ಲಿ ಮಾತ್ರ ಮಂಜೂರಾಗಿದ್ದು, ಇದು ಶೋಷಣೆಗೆ ಹಿಡಿದ ಕನ್ನಡಿಯಾಗಿದೆ. ಮಂಜೂರಾಗಿರುವ ಬೆಳೆವಿಮೆ ಮೊತ್ತ ಈಗಾಗಲೇ ರೈತರ ಖಾತೆಗೆ ಕಳೆದ ವಾರದಿಂದ ಜಮಾ ಆಗುತ್ತಿದ್ದು, ಜಿಲ್ಲೆಯ ಕೆಲ ರೈತರಿಗೆ ಮಾತ್ರ ಬೆಳೆವಿಮೆ ಭಾಗ್ಯ ದೊರಕಿದೆ.
ಅಫಜಲಪುರ ತಾಲೂಕಿಗೆ ಕೇವಲ 11 ಲಕ್ಷ ರೂ. ಬೆಳೆವಿಮೆ ಬಿಡುಗಡೆಯಾಗಿದ್ದರೆ ಜೇವರ್ಗಿ ತಾಲೂಕಿಗೆ 85 ಲಕ್ಷ ಹಾಗೂ ನೂತನ ತಾಲೂಕು ಯಡ್ರಾಮಿ ತಾಲೂಕಿಗೆ 19 ಲಕ್ಷ ರೂ. ಬಿಡುಗಡೆಯಾಗಿದೆ. ಅದೇ ರೀತಿ ಕಲಬುರಗಿ ತಾಲೂಕಿಗೆ 24 ಲಕ್ಷ ರೂ., ಸೇಡಂ ತಾಲೂಕಿಗೆ 12 ಲಕ್ಷ ರೂ., ಚಿತ್ತಾಪುರ ತಾಲೂಕಿಗೆ 16 ಲಕ್ಷ ರೂ. ಮಾತ್ರ ಬೆಳೆವಿಮೆ ಬಿಡುಗಡೆಯಾಗಿದೆ.
ಕಳೆದ ವರ್ಷ ಮಳೆ ಬಾರದೇ ಬೆಳೆ ಇಳುವರಿ ಬಾರದೇ ರೈತ ಸಂಕಷ್ಟಕ್ಕೆ ಒಳಗಾಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಮುಂಗಾರು ವಾಣಿಜ್ಯ ಬೆಳೆ ತೊಗರಿ ನೆಲಕಚ್ಚಿದ್ದರೂ ಜಿಲ್ಲೆಗೆ ಮುಂಗಾರು ಹಂಗಾಮಿನ ಬೆಳೆಹಾನಿಗೆ ಕೇವಲ 12 ಕೋಟಿ ರೂ. ಬೆಳೆವಿಮೆ ಬಿಡುಗಡೆ ಆಗಿರುವಾಗ ಹಿಂಗಾರಿನಲ್ಲೂ ಮಳೆ ಬಾರದೇ ಜೋಳ, ಕಡಲೆ, ಗೋಧಿ ಎಲ್ಲವೂ ಇಳುವರಿ ಬಾರದೇ ಇದ್ದರೂ ಬೆಳೆಹಾನಿಗೆ ತಕ್ಕ ಬೆಳೆವಿಮೆ ಬಿಡುಗಡೆ ಆಗದೇ ಇರುವುದು ಬೆಳೆವಿಮೆ ಎಂಬುದು ಕನ್ನಡಿಯೊಳಗಿನ ಗಂಟು ಎಂಬುದನ್ನು ಸಾಬೀತುಪಡಿಸಿದೆ. ಹೀಗಾಗಿ ರೈತರು ಬೆಳೆವಿಮೆ ಮಾಡಿಸಲು ಹಿಂದೇಟು ಹಾಕುವಂತಾಗಿದೆ. 2017-18ನೇ ಸಾಲಿನಲ್ಲಿ ಉತ್ತಮ ಮಳೆಯಾಗಿ ಬೆಳೆ ಇರುವರಿ ಚೆನ್ನಾಗಿ ಬಂದಿರುವುದರಿಂದ ಜತೆಗೆ ಪ್ರಸಕ್ತವಾಗಿ ಮಳೆ ಈಚೆಗೆ ಸರಿಯಾಗಿ ಬಂದಿದ್ದರಿಂದ ಬೆಳೆ ಸಮೃದ್ಧವಾಗಿ ಬೆಳೆದಿದೆ. ಇಳುವರಿ ಬರುವ ಲಕ್ಷಣ ಕಂಡು ಬರುತ್ತಿವೆ.
ಇಂತಹ ವರ್ಷದಲ್ಲಿ ಬೆಳೆವಿಮೆ ಬಾರದಿದ್ದರೆ ಪರ್ವಾಗಿಲ್ಲ. ಆದರೆ ಭೀಕರ ಬರಗಾಲ ಬಿದ್ದು, ಕ್ವಿಂಟಲ್ ಇಳುವರಿ ಬಾರದ ದುಸ್ಥಿತಿ ಇದ್ದಾಗಲೂ ಮಳೆ ನಾಪತ್ತೆಯಾಗಿ ಹಳ್ಳ-ಕೊಳ್ಳಗಳು, ಬಾವಿಗಳು ಬತ್ತಿರುವ ಭೀಕರ ಬರಗಾಲವಿರುವ ಸಮಯದಲ್ಲೂ ಬೆಳೆವಿಮೆ ಸೌಲಭ್ಯ ದೊರಕದಿದ್ದರೆ, ಬೆಳೆವಿಮೆ ಯಾಕೆ ಮಾಡಿಸಬೇಕೆಂದು ರೈತರು ಪ್ರಶ್ನಿಸುತ್ತಾರೆ.
ರೈತರ ಖಾತೆಗೆ ಜಮಾ: ಬಿಡುಗಡೆಯಾಗಿರುವ ಕಳೆದ ಸಾಲಿನ ಹಿಂಗಾರು ಬೆಳೆ ಹಾನಿಯ ಬೆಳೆವಿಮೆ ಪರಿಹಾರ ಮೊತ್ತ ರೈತರ ಖಾತೆಗೆ ನೇರವಾಗಿ ಜಮಾ ಆಗುತ್ತಿದೆ. ಒಂದು ಗ್ರಾಮದಲ್ಲೇ ಒಬ್ಬೊಬ್ಬರಿಗೆ ವಿಮೆ ಬಂದರೆ ಮಗದೊಬ್ಬರಿಗೆ ಬಂದಿಲ್ಲ. ಒಟ್ಟಾರೆ ನೋಡಿದರೆ ಬೆಳೆವಿಮೆ ಭಾಗ್ಯ ಯಾರಿಗುಂಟು, ಯಾರಿಗಿಲ್ಲ ಎನ್ನುವಂತಾಗಿದೆ.