ಕಲಬುರಗಿ: ರಾಜ್ಯಾದ್ಯಂತ ಸಾರಿಗೆ ಬಸ್ ಸಂಚಾರ ಆರಂಭವಾಗಿದ್ದರೂ ಸುರಕ್ಷತಾ ಕ್ರಮವಾಗಿ 10 ವರ್ಷದೊಳಗಿನ ಮಕ್ಕಳು, 65 ವರ್ಷ ಮೇಲ್ಪಟ್ಟ ವೃದ್ಧರು ಹಾಗೂ ಗರ್ಭಿಣಿಯರ ಪ್ರಯಾಣಕ್ಕೆ ಅವಕಾಶ ನಿರಾಕರಿಸಲಾಗಿದೆ. ಬಸ್ ನಿಲ್ದಾಣದಲ್ಲಿ ವಿಶೇಷವಾಗಿ ಚಿಕ್ಕ ಮಕ್ಕಳು ಹಾಗೂ ವಯಸ್ಸಾದವರು ಕಂಡು ಬಂದರೆ ಅಂತಹವರ ಮೇಲೆ ನಿಗಾ ವಹಿಸಲಾಗುತ್ತಿದೆ.
ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಮಂಗಳವಾರ ಕುಟುಂಬ ಸಮೇತ ಬಂದ ಮಕ್ಕಳು ಹಾಗೂ ಅಜ್ಜಿಯೊಬ್ಬರನ್ನು ಪ್ರವೇಶ ದ್ವಾರದಲ್ಲೇ ಭದ್ರತಾ ಸಿಬ್ಬಂದಿ ತಡೆದರು. ಆರೇಳು ಜನ ಕುಟುಂಬಸ್ಥರಲ್ಲಿ ಓರ್ವ ಬಾಲಕಿ, ಓರ್ವ ಬಾಲಕ ಹಾಗೂ ಅಜ್ಜಿ ಇದ್ದರು. ಅವರ ಪ್ರಯಾಣದ ಮಾಹಿತಿ ಪಡೆದ ಸಿಬ್ಬಂದಿ, ವಯಸ್ಸು ಹಾಗೂ ಆರೋಗ್ಯದ ಬಗ್ಗೆ ವಿಚಾರಿಸಿದರು. ಬಾಲಕ ಇನ್ನೂ ಚಿಕ್ಕವನು ಇರುವುದರಿಂದ ಮರಳಿ ಕಳುಹಿಸಲಾಯಿತು.
ಅಜ್ಜಿಯ ವಯಸ್ಸು 60ರೊಳಗೆ ಇದ್ದಿದ್ದರಿಂದ ಆಕೆಯನ್ನು ಕುಟುಂಬದೊಂದಿಗೆ ಒಳ ಬಿಡಲಾಯಿತು. ಅದೂ, ಅಜ್ಜಿಯ ಆಧಾರ್ ಕಾರ್ಡ್ ಹೊಂದಿರುವ ಬಗ್ಗೆ ಖಚಿತ ಪಡಿಸಿಕೊಂಡು! ಕುಟುಂಬದೊಂದಿಗೆ ಪ್ರಯಾಣಿಸಲು ಅವಕಾಶ ಸಿಗದ ಬಾಲಕ ನಿಂತಲ್ಲೇ ಕಣ್ಣೀರು ಹಾಕಿದ. ನಿಲ್ದಾಣಕ್ಕೆ ಬಿಡಲು ಬಂದಿದ್ದ ಸಂಬಂಧಿಕರು ಅವನನ್ನು ಸಮಾಧಾನ ಪಡಿಸಿ ಮನೆಗೆ ಕರೆದುಕೊಂಡು ಹೋದ ಪ್ರಸಂಗ ನಡೆಯಿತು. ಈ ಬಗ್ಗೆ ಪ್ರತಿಕ್ರಿಯಿಸಿದ ಭದ್ರತಾ ಸಿಬ್ಬಂದಿ, 10 ವರ್ಷದೊಳಗಿನ ಮಕ್ಕಳು ಹಾಗೂ 65 ವರ್ಷ ಮೇಲ್ಪಟ್ಟ ವೃದ್ಧರ ಪ್ರಯಾಣಕ್ಕೆ ಅವಕಾಶ ನೀಡಬೇಡಿ ಎಂದು ಮೇಲಧಿಕಾರಿಗಳಿಂದ ನಿರ್ದೇಶನ ಬಂದಿದೆ ಎಂದರು.
ಆದಾಯ ಮುಖ್ಯವಲ್ಲ: ವಿನಾಃ ಕಾರಣದಿಂದ ಮಕ್ಕಳು, ಹಿರಿಯರ ಪ್ರಯಾಣಕ್ಕೆ ನಿರ್ಬಂಧ ಹೇರಿಲ್ಲ. ಅವರ ಆರೋಗ್ಯದ ಹಿತದೃಷ್ಟಿಯಿಂದ ಅವಕಾಶ ನಿರಾಕರಿಸಲಾಗಿದೆ. ಯಾರಾದರೂ ಆದಾಯ ಬರುತ್ತದೆ ಎಂದು ಎಲ್ಲರನ್ನೂ ಹತ್ತಿಸಿಕೊಂಡು ಹೋಗುತ್ತಾರೆ. ಆದರೆ, ನಮಗೆ ಆದಾಯ ಮುಖ್ಯವಲ್ಲ. ಸಮಾಜದ ಮೇಲಿನ ಕಾಳಜಿ ಮುಖ್ಯವಾಗಿದೆ ಎನ್ನುತ್ತಾರೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಜಹೀರಾ ನಸೀಂ.
ಮಕ್ಕಳಲ್ಲಿ ರೋಗ ನಿರೋಧ ಶಕ್ತಿ ಕಡಿಮೆ ಇರುತ್ತದೆ. ಬೇಸಿಗೆಯಾಗಿದ್ದರಿಂದ ಬಳಲುವಿಕೆ ಹೆಚ್ಚಾಗುತ್ತದೆ. ಅದೇ ರೀತಿ ಹಿರಿಯರಲ್ಲಿ ನಾನಾ ಆರೋಗ್ಯ ಸಮಸ್ಯೆಗಳು ಇರುತ್ತವೆ. ಅವರಿಗೆ ತೊಂದರೆಯಾದಲ್ಲಿ ಕುಟುಂಬಸ್ಥರೇ ತೊಂದರೆ ಅನುಭವಿಸಬೇಕಾಗುತ್ತದೆ. ನಮಗೂ ಮಕ್ಕಳು, ಹಿರಿಯರ ಬಗ್ಗೆ ಕಾಳಜಿ ಇದೆ. ಹೀಗಾಗಿ ಅವರ ಪ್ರಯಾಣಕ್ಕೆ ನಿರ್ಬಂಧ ಹೇರಿದ್ದೇವೆ ಎನ್ನುವುದೂ ಸರಿಯಲ್ಲ ಎಂದರು.
ಮೊಬೈಲ್, ಪ್ರಯಾಣದ ಮಾಹಿತಿ
ಬಸ್ ನಿಲ್ದಾಣದಲ್ಲಿ ಆಗಮನ ಮತ್ತು ನಿರ್ಗಮನಕ್ಕೆ ಒಂದೇ ಪ್ರವೇಶ ದ್ವಾರ ಮಾಡಲಾಗಿದೆ. ಸೋಂಕು ನಿವಾರಕ ಸುರಂಗ ಮಾಡಲಾಗಿದ್ದು, ಅದರ ಮೂಲಕವೇ ಪ್ರಯಾಣಿಕರು ಸಂಚರಿಸಬೇಕು. ನಿಲ್ದಾಣದೊಳಗೆ ಬರುತ್ತಲೇ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಮಾಡಿ, ಮೂಲ ವಿಳಾಸ, ಪ್ರಯಾಣಿಸುವ ಸ್ಥಳ ಹಾಗೂ ಮಾಹಿತಿ ದಾಖಲಿಸಿಕೊಳ್ಳಲಾಗುತ್ತದೆ. ಬಸ್ ಹತ್ತುವಾಗ ಪ್ರತಿ ಪ್ರಯಾಣಿಕರ ಹೆಸರು ಸಹ ನೋಂದಾಯಿಸಿಕೊಳ್ಳಲಾಯಿತು.
ರಂಗಪ್ಪ ಗಧಾರ