Advertisement

8ರಂದು ಜಲಜಾಗೃತಿ ಸಮಾವೇಶ: ಕೆ. ನೀಲಾ

03:10 PM Dec 04, 2019 | Naveen |

ಕಲಬುರಗಿ: ಜಲ ಸಂರಕ್ಷಣೆ ಕುರಿತು ನಾಗರಿಕರಲ್ಲಿ ಜಾಗೃತಿ ಮೂಡಿಸಲು ವಿವಿಧ ಸಂಘಟನೆಗಳ ಸಹಯೋಗದಲ್ಲಿ ಡಿ.8ರಂದು ಬೆಳಗ್ಗೆ 11 ಗಂಟೆಗೆ ನಗರದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಶರಣಬಸವ ಶತಮಾನೋತ್ಸವ ಭವನದಲ್ಲಿ ಜಲ ಜಾಗೃತಿ ಸಮಾವೇಶ ಆಯೋಜಿಸಲಾಗಿದೆ ಎಂದು ಕಲಬುರಗಿ ಜಲ ಸಮಿತಿಗಳ ಒಕ್ಕೂಟದ ಸಂಚಾಲಕಿ, ಹೋರಾಟಗಾರ್ತಿ ಕೆ. ನೀಲಾ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಜಲ ಸಮಸ್ಯೆ ಉಲ್ಬಣಗೊಂಡಿದೆ. ಬೇಸಿಗೆಯಲ್ಲಿ ಕುಡಿವ ನೀರಿಗಾಗಿ ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಜಲ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಜಿಲ್ಲೆಯ ಜಲ ಸಮಸ್ಯೆ ಕುರಿತು ಬೆಳಕು ಚೆಲ್ಲಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಮಾವೇಶ ಸಹಕಾರಿಯಾಗಲಿದೆ ಎಂದರು.

ಒಂದು ಜಿಲ್ಲೆಯಲ್ಲಿ ಕನಿಷ್ಠ ಶೇ.33ರಷ್ಟು ಅರಣ್ಯ ಪ್ರದೇಶ ಇರಬೇಕು. ಆದರೆ, ಕಲಬುರಗಿ ಜಿಲ್ಲೆಯಲ್ಲಿ ಶೇ.6ರಷ್ಟು ಮಾತ್ರ ಅರಣ್ಯ ಇದೆ. ಇದರಲ್ಲಿ ಶೇ.5 ರಷ್ಟು ಚಿಂಚೋಳಿ ಅರಣ್ಯ ಪ್ರದೇಶ ಇದೆ. ಇಡೀ ಜಿಲ್ಲೆಗೆ ಉಳಿದಿದ್ದು ಶೇ.1ರಷ್ಟು ಅರಣ್ಯ ಮಾತ್ರ. ಜಲ ಮೂಲಗಳಾದ ಪುರಾತನ ಬಾವಿ, ಕೆರೆಗಳು ಬತ್ತಿ ಹೋಗುತ್ತಿದ್ದು ಆತಂಕದ ವಿಷಯವಾಗಿದೆ. ಜಲ ತಜ್ಞರೊಂದಿಗೆ ಚರ್ಚಿಸಿ ಜಲ ಸಂರಕ್ಷಣೆ ಅರಿವು ಮೂಡಿಸಲಾಗುವುದು ಹಾಗೂ ಜಾಗೃತಿ ಅಭಿಯಾನ ನಡೆಸಲಾಗುವುದು ಎಂದರು.

ಶರಣಬಸವ ವಿಶ್ವವಿದ್ಯಾಲಯ, ಗುವಿವಿಯ ರಾಷ್ಟ್ರೀಯ ಸೇವಾ ಯೋಜನಾ ಕೋಶ, ಕಲಬುರಗಿ ಜಲ ಸಮಿತಿಗಳ ಒಕ್ಕೂಟ, ಆಳಂದದ ಥ್ರಿàಜೆ ಕ್ಲಬ್‌, ಧಾರವಾಡ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಗಳ ಸಹಯೋಗದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಶರಣಬಸವ ವಿವಿಯ ಕುಲಪತಿ ಡಾ| ನಿರಂಜನ ನಿಷ್ಠಿ ಸಮಾವೇಶ ಉದ್ಘಾಟಿಸುವರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಶರಣಬಸವಪ್ಪ ಅಪ್ಪ ಆಶೀರ್ವಚನ ನೀಡಿ, ಜಲ ಪ್ರತಿಜ್ಞೆ ಬೋಧಿಸುವರು ಎಂದರು. ರಾಜಸ್ಥಾನದ ಖ್ಯಾತ ಜಲ ತಜ್ಞ ರಾಜೇಂದ್ರಸಿಂಗ್‌, ತೆಲಂಗಾಣದ ಜಲ ಸಂಪನ್ಮೂಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಪ್ರಕಾಶ ರಾವ್‌, ಧಾರವಾಡದ ಜಲ ಮತ್ತು ನೆಲ ನಿರ್ವಹಣಾ ಸಂಸ್ಥೆ ನಿರ್ದೇಶಕ ರಾಜೇಂದ್ರ ಪೊದ್ದಾರ ಜಲ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವರು.

Advertisement

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಮಾಜಿ ಶಾಸಕ ಬಿ.ಆರ್‌. ಪಾಟೀಲ ಪಾಲ್ಗೊಳ್ಳುವರು ಎಂದರು.

ಸುದ್ದಿಗೋಷ್ಠಿಯಲ್ಲಿ ಶರಣಬಸವ ವಿಶ್ವವಿದ್ಯಾಲಯ ಕುಲಸಚಿವ ಡಾ|ಅನಿಲ ಬಿಡವೆ, ಮೌಲ್ಯಮಾಪನ ಕುಲಸಚಿವ ಡಾ| ಲಿಂಗರಾಜ ಶಾಸ್ತ್ರೀ, ರಮೇಶ ಲಂಡನಕರ್‌, ಡಾ| ಸಂಪತ್‌ ರಾವ್‌ ಹಾಗೂ ಇತರರು ಇದ್ದರು.

ಶರಣಬಸವ ವಿವಿಯಲ್ಲಿ ಈಗಾಗಲೇ ಜಲ ಸಂರಕ್ಷಣೆಗಾಗಿ ಕಾರ್ಯ ಆಗುತ್ತಿದ್ದು, ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ಜತೆಗೆ ಶರಣ ಸಿರಸಗಿ ಗ್ರಾಮವನ್ನು ವಿವಿಯ ದತ್ತು ಪಡೆದು, ಅಲ್ಲಿಯೂ ಜಾಗೃತಿ ಮೂಡಿಸಲಾಗುತ್ತಿದೆ.ಜಲ ಸಂರಕ್ಷಣೆ ಕಾರ್ಯದಲ್ಲಿ ಇಡೀ ಜನ ಸಮುದಾಯ ಪಾಲ್ಗೊಂಡಲ್ಲಿ ಜಲ ಸಂಕಟ ತಪ್ಪಲಿದೆ.
ಡಾ| ಲಿಂಗರಾಜ ಶಾಸ್ತ್ರೀ,
ಮೌಲ್ಯಮಾಪನ ಕುಲಸಚಿವ,
ಶರಣಬಸವ ವಿವಿ

Advertisement

Udayavani is now on Telegram. Click here to join our channel and stay updated with the latest news.

Next