Advertisement

ಮುಂದುವರಿದ ರೌದ್ರಾವತಾರ!

12:52 PM Mar 18, 2020 | Naveen |

ಕಲಬುರಗಿ: ಮಹಾಮಾರಿ ಕೊರೊನಾ ಸೋಂಕಿಗೆ ಕಲ್ಯಾಣ ಕರ್ನಾಟಕ ಭಾಗದ ಕೇಂದ್ರ ಸ್ಥಾನ ಕಲಬುರಗಿ ಅಕ್ಷರಶಃ ನಲುಗಿ ಹೋಗಿದೆ. ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆಯಿಂದ ಜಿಲ್ಲಾದ್ಯಂತ ಅಘೋಷಿತ ಬಂದ್‌ ವಾತಾವರಣ ಮುಂದುವರಿದಿದೆ.

Advertisement

ನಗರದಲ್ಲಿ 76 ವರ್ಷದ ವೃದ್ಧನ ಸಾವಿನ ನಂತರ ಕೊರೊನಾ ತನ್ನ ರೌದ್ರಾವತಾರ ಪ್ರದರ್ಶಿಸುತ್ತಿದೆ. ವೃದ್ಧನ ಕುಟುಂಬಸ್ಥರು ಹಾಗೂ ಆತನೊಂದಿಗೆ ನೇರ ಸಂರ್ಪಕದಲ್ಲಿದ್ದವರಿಗೂ ಸೋಂಕು ಹರಡಿರುವುದು ಖಚಿತವಾಗುತ್ತಿದ್ದಂತೆ, ದಿನದಿಂದ ದಿನಕ್ಕೆ ಆತಂಕ ಹೆಚ್ಚುತ್ತಲೇ ಇದೆ.

ಈಗಾಗಲೇ ವೃದ್ಧನೊಂದಿಗೆ ನೇರ ಸಂಪರ್ಕದಲ್ಲಿದ್ದ 71 ಜನರನ್ನು ಗುರುತಿಸಿದ್ದರೆ, ಎರಡನೇ ಸಂಪರ್ಕದಲ್ಲಿದ್ದ 238ಕ್ಕೂ ಹೆಚ್ಚು ಜನರಿದ್ದು, ಎಲ್ಲರನ್ನೂ ಮನೆಯಲ್ಲಿ ಇರಿಸಿ ನಿಗಾ ವಹಿಸಲಾಗುತ್ತಿದೆ. ಆರು ಜನರನ್ನು ಇಎಸ್‌ಐ ಆಸ್ಪತ್ರೆಯಲ್ಲಿ ಐಸೋಲೇಷನ್‌ ಮಾಡಲಾಗಿದೆ. ವಿದೇಶದಿಂದ ಬಂದ ಬಳಿಕ ವೃದ್ಧ ಅನೇಕ ಕಡೆಗಳಲ್ಲಿ ಸುತ್ತಾಡಿರುವ ಸಂಶಯಗಳು ವ್ಯಕ್ತವಾಗಿವೆ.

ಹೈದ್ರಾಬಾದ್‌ನಿಂದ ಬರುವಾಗ ಕಮಲಾಪುರದ ಬಳಿಯ ಢಾಬಾವೊಂದಲ್ಲಿ ಊಟ ಮಾಡಿದ್ದು, ಆ ಢಾಬಾದ ಮಾಲೀಕ ಸೇರಿ ಏಳು ಜನರ ಮೇಲೂ ನಿಗಾ ವಹಿಸಲಾಗಿದೆ. ಹೀಗೆ ಹಲವು ಕಡೆಗಳಲ್ಲಿ ವೃದ್ಧ ಸುತ್ತಾಡಿರುವ ಅನುಮಾನಗಳು ಇವೆ. ಈ ನಡುವೆ ವೃದ್ಧನೊಂದಿಗೆ ನೇರ ಸಂಪರ್ಕದಲ್ಲಿದ್ದವರ ಬಗ್ಗೆಯೂ ಭೀತಿ ಉಂಟಾಗಿದೆ.

ಎರಡು ದಿನಗಳ ಹಿಂದೆ ವೃದ್ಧನ ಕುಟುಂಬದ ಮಹಿಳೆಗೆ ಸೋಂಕು ಹರಡಿದ್ದು ಖಚಿತವಾಗಿತ್ತು. ಇದರ ಬೆನ್ನಲ್ಲೇ ವೃದ್ಧನಿಗೆ ಮನೆಗೆ ಬಂದು ಚಿಕಿತ್ಸೆ ನೀಡಿದ್ದ ಖಾಸಗಿ ವೈದ್ಯನಿಗೂ ಸೋಂಕು ಹರಡಿದ್ದು, ಸೋಂಕು ನಿಯಂತ್ರಿಸುವಲ್ಲಿ ತೊಡಗಿರುವ ಜಿಲ್ಲಾಡಳಿತದ ಜವಾಬ್ದಾರಿ ಹೆಚ್ಚಿಸುವಂತೆ ಮಾಡಿದೆ. ಗ್ರಾಮೀಣದಲ್ಲೂ ಹೈ ಅಲರ್ಟ್‌: ಕೊರೊನಾ ಪೀಡಿತ ವೃದ್ಧನ ಸಾವು ಹಾಗೂ ಮತ್ತಿಬ್ಬರಿಗೆ ಸೋಂಕು ದೃಢ ಪಟ್ಟಿದ್ದರಿಂದ ಕಲಬುರಗಿ ನಗರಾದ್ಯಂತ ಭಯದ ವಾತಾವರಣ ಇದೆ. ಇತ್ತ, ವಿದೇಶಗಳಿಂದ ಜಿಲ್ಲೆಗೆ ನೂರಕ್ಕೂ ಹೆಚ್ಚು ಜನರು ಬಂದಿದ್ದಾರೆ ಎನ್ನಲಾಗಿದೆ.

Advertisement

61 ಜನರ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ಲಭ್ಯವಾಗಿದ್ದು, ಅವರ ಮೇಲೂ ನಿಗಾ ವಹಿಸಲಾಗಿದೆ. ವಿದೇಶದಿಂದ ಆಗಮಿಸಿದ ಚಿತ್ತಾಪುರ ಮತ್ತು ಚಿಂಚೋಳಿಯ ಇಬ್ಬರಿಗೆ ಶಂಕಿತ ಕೊರೊನಾ ಲಕ್ಷಣಗಳು ಪತ್ತೆಯಾಗಿದ್ದು ಆಘಾತಕಾರಿಯಾಗಿದೆ. ಆದ್ದರಿಂದ ಗ್ರಾಮೀಣ ಪ್ರದೇಶದಲ್ಲಿ ಅಘೋಷಿತ ಬಂದ್‌ ವಾತಾವರಣ ನಿರ್ಮಾಣವಾಗಿದೆ. ಕೆಲ ಹಳ್ಳಿಗಳಲ್ಲಿ ಡಂಗೂರ ಸಾರಿಸುವ ಮೂಲಕ ಜಾಗೃತಿ ಮೂಡಿಸುವ ಕೆಲಸ ಶುರು ಮಾಡಲಾಗಿದೆ.

„ರಂಗಪ್ಪ ಗಧಾರ

Advertisement

Udayavani is now on Telegram. Click here to join our channel and stay updated with the latest news.

Next