ರಬಕವಿ-ಬನಹಟ್ಟಿ: ಕೆಲವು ವರ್ಷಗಳ ಹಿಂದೆ ಪಾರಿಜಾತ, ನಾಟಕ, ಸನ್ನಾಟಗಳಲ್ಲಿ ಬಳಸಲಾಗುತ್ತಿದ್ದ ವಾದ್ಯ ಮೇಳಗಳಲ್ಲಿ ಪ್ರಮುಖವಾಗಿದ್ದ ಕಾಲ ಪೆಟ್ಟಿಗೆ ಹಾರ್ಮೋನಿಯಂಗಳು ಇಂದಿನ ಆಧುನಿಕ ವಾದ್ಯಗಳಿಂದಾಗಿ ಅವು ನಮ್ಮಿಂದ ಕಣ್ಮರೆಯಾಗುತ್ತಿವೆ.
ಮೊದಲು ಪ್ರತಿಯೊಂದು ಗ್ರಾಮದಲ್ಲಿ ಏಳೆಂಟು ಹಾರ್ಮೋನಿಯಂಗಳು ಕಂಡು ಬರುತ್ತಿದ್ದವು. ಆದರೆ ಇಂದು ಕೇವಲ ಒಂದೆರಡು ಹಾರ್ಮೋನಿಯಂಗಳು ನಮಗೆ ನೋಡಲು ದೊರೆಯುತ್ತಿವೆ.
ಈ ಮೊದಲು ಪಾರಿಜಾತ ಮತ್ತು ಸನ್ನಾಟಗಳಲ್ಲಿ ತಾಳ, ದಪ್ಪ ಮತ್ತು ಹಾರ್ಮೋನಿಯಂಗಳನ್ನು ಹಾಗೂ ಕಂಪನಿ ನಾಟಕಗಳಲ್ಲಿ ತಬಲಾ, ತಾಳ ಮತ್ತು ಕಾಲ ಪೆಟ್ಟಿಗೆ ಹಾರ್ಮೋನಿಯಂ ಬಳಸುತ್ತಿದ್ದರು.
ನಾಲ್ಕೈದು ದಶಕಗಳ ಹಿಂದೆ ಯಾವುದೆ ಪಾರಿಜಾತ, ಸನ್ನಾಟ, ನಾಟಕಗಳ ಪ್ರದರ್ಶನ ಸಂದರ್ಭದಲ್ಲಿ ಮೈಕ್‌ಗಳು ಇರುತ್ತಿರಲಿಲ್ಲ. ಅದಕ್ಕಾಗಿ ದೂರ ಕುಳಿತ ಪ್ರೇಕ್ಷಕರಿಗೂ ವಾದ್ಯದಿಂದ ಹೊರಹೊಮ್ಮುವ ಶಬ್ದ ಕೇಳುವ ನಿಟ್ಟಿನಲ್ಲಿ ಕಾಲ ಪೆಟ್ಟಿಗೆ ಹಾರ್ಮೋನಿಯಂ ಬಳಕೆ ಮಾಡಲಾಗುತ್ತಿತ್ತು. ಮೈಕ್‌ಗಳು ಬಂದ ನಂತರ ಕೆಲವರು ಚಿಕ್ಕದಾದ ಹಾರ್ಮೋನಿಯಂಗಳನ್ನು ಬಳಸಲು ಆರಂಭಿಸಿದರು. ನಂತರ ಈಗ ಅತ್ಯಾಧುನಿಕವಾದ ಕ್ಯಾಸಿಯೋ ಬಂದ ನಂತರ ಕಾಲ ಪೆಟ್ಟಿಗೆ ಹಾರ್ಮೋನಿಯಂ ಮೂಲೆಯನ್ನು ಸೇರತ್ತಿವೆ ಎನ್ನುತ್ತಾರೆ ನಾವಲಗಿ ಗ್ರಾಮದ ಸಂಗ್ಯಾ ಬಾಳ್ಯಾ ಖ್ಯಾತಿಯ ಕಲಾವಿದ ಮಲ್ಲಪ್ಪ ಗಣಿ.
ಇವರು ತಮ್ಮ ಶ್ರೀ ಹನುಮಾನ ನಾಟ್ಯ ಸಂಘದಲ್ಲಿ ಬಳಸುತ್ತಿರುವ ಹಾರ್ಮೋನಿಯಂ ಹೆಸರಾಂತ ಪಾರಿಜಾತ ಕಲಾವಿದೆ ಕೌಜಲಗಿ ನಿಂಗಮ್ಮ ತಂಡದ ಹಾರ್ಮೋನಿಯಂ ಆಗಿದೆ. ಅದನ್ನು ಆ ತಂಡದವರು ಕುಳಲಿಯ ತಂಡದವರಿಗೆ ಮಾರಿದ್ದರು. ನಂತರ ಕುಳಲಿ ತಂಡದವರಿಂದ ಮಲ್ಲಪ್ಪ ಗಣಿಯವರು ಏಳೆಂಟು ವರ್ಷಗಳ ಹಿಂದೆ ಖರೀದಿಸಿದ್ದಾರೆ. ಪೂರ್ತಿಯಾಗಿ ಹಾಳಾಗಿದ್ದ ಈ ಹಾರ್ಮೋನಿಯಂನ್ನು 10 ಸಾವಿರಕ್ಕೆ ಖರೀಧಿಸಿ, ಮತ್ತೇ ದುರಸ್ತಿಗಾಗಿ ಗಣಿಯವರು ರೂ. 10 ಸಾವಿರ ಸೇರಿ. ರೂ. 20 ಸಾವಿರ ಖರ್ಚಿನಲ್ಲಿ ಕಾಲಪೆಟ್ಟಿಗೆ ಹಾರ್ಮೋನೊಯಂ ಸಿದ್ಧಪಡಿಸಿಕೊಂಡಿದ್ದಾರೆ.
ಇದು ಅತ್ಯಂತ ವಿಶಿಷ್ಟವಾದ ಹಾರ್ಮೋನಿಯಂಆಗಿದ್ದು, ಇದು ಜರ್ಮನ್ ಸ್ವರಗಳನ್ನು ಹೊಂದಿದೆ. ಈ ಹಾರ್ಮೋನಿಯಂಗಳನ್ನು ಎರಡು ಕೈಗಳಿಂದ ನುಡಿಸಲಾಗುತ್ತದೆ. ಹಾರ್ಮೋನಿಯಂ ಕೆಳಗಡೆ ಪ್ಯಾಡ್ಗಳಿದ್ದು, ಅವುಗಳನ್ನು ಕಾಲಿನಿಂದ ತುಳಿಯುತ್ತಾರೆ. ನಂತರ ಅಲ್ಲಿಂದ ಗಾಳಿ ಬದಿಗಿರುವ ಪೈಪ್‌ಗಳ ಮೂಲಕ ಮೇಲೆ ಬರುತ್ತದೆ. ಮಲ್ಲಪ್ಪ ಗಣಿಯವರ ಹತ್ತಿರ ಇರುವ ಹಾರ್ಮೋನಿಯಂಮೂರು ಲೈನ್‌ಗಳ ಸ್ವರಗಳನ್ನು ಹೊಂದಿದ ಹಾರ್ಮೋನಿಯಂ ಆಗಿದೆ. ಇವುಗಳನ್ನು ಬೆಳಗಾವಿ ಜಿಲ್ಲೆಯ ಸಂಕೇಶ್ವರದಲ್ಲಿ ನಿರ್ಮಾಣ ಮಾಡುತ್ತಾರೆ. ಸದ್ಯ ಉತ್ತಮವಾದ ಹಾರ್ಮೋನಿಯಂ ಬೆಲೆ ರೂ. 1ಲಕ್ಷದವರೆಗೆ ಇದೆ ಎನ್ನುತ್ತಾರೆ ಮಲ್ಲಪ್ಪ ಗಣಿ.
ಈ ಹಾರ್ಮೋನಿಯಂ ಬಹಳಷ್ಟು ಭಾರವಾಗಿದ್ದು, ಇವುಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆಗೆದುಕೊಂಡು ಹೋಗುವುದು ತುಂಬಾ ಕಷ್ಟದಾಯಕ. ಆದರೆ ಇಂದಿನ ಕ್ಯಾಸಿಯೋ ಅತ್ಯಂತ ಹಗುರವಾಗಿದ್ದು ಮತ್ತು ತೆಗೆದುಕೊಂಡು ಹೋಗಲು ಅನುಕೂಲವಾಗಿದೆ. ಅದಕ್ಕಾಗಿ ಬಹಳಷ್ಟು ಜನರು ಕ್ಯಾಸಿಯೋ ಬಳಸುತ್ತಿದ್ದಾರೆ.
ಕಾಲ ಪೆಟ್ಟಿಗೆಹಾರ್ಮೋನಿಯಂ ಮತ್ತು ಕ್ಯಾಸಿಯೋದ ಎರಡು ಸ್ವರಗಳನ್ನು ಕೇಳಿದಾಗ ಕಾಲ ಪೆಟ್ಟಿಗೆ ಹಾರ್ಮೋನಿಯಂ ಸ್ವರಗಳು ಹೆಚ್ಚು ಇಂಪಾಗಿ ಕೇಳಿ ಬರುತ್ತವೆ ಎನ್ನುತ್ತಾರೆ ಮಲ್ಲಪ್ಪ ಗಣಿಯವರು.
ಮುಂದಿನ ಜನಾಂಗಕ್ಕೆ ಇವುಗಳ ಮಹತ್ವ ತಿಳಿಸಿ ಕೊಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇಂಥ ವಾದ್ಯಗಳನ್ನು ಸಂಗ್ರಹಿಸಿ ಇಡಬೇಕಾಗಿದೆ. ಕಾಲ ಪೆಟ್ಟಿಗೆ ಹಾರ್ಮೋನಿಯಂಗಳು ಕಡಿಮೆಯಾದಂತೆ ಅವುಗಳನ್ನು ನುಡಿಸುವ ಕಲಾವಿದರೂ ಇಲ್ಲದಂತಾಗಿದ್ದಾರೆ. ಮಲ್ಲಪ್ಪ ಗಣಿಯವರು ಮೂರು ದಶಕಗಳಿಂದ ಈ ವಾದ್ಯವನ್ನು ನುಡಿಸುತ್ತಿದ್ದಾರೆ. ಕಲಿಯಲು ಯಾರು ಮುಂದೆ ಬರುತ್ತಿಲ್ಲ ಎಂಬ ಕೊರಗು ಅವರಲ್ಲಿದೆ.
ಒಟ್ಟಿನಲ್ಲಿ ಆಧುನಿಕತೆಯ ಭರಾಟೆಯಲ್ಲಿ ನಮ್ಮ ಸಂಪ್ರದಾಯ ಬದ್ಧವಾದ ಅನೇಕ ವಾದ್ಯಗಳು ಇಂದು ಮೂಲೆ ಸೇರುತ್ತಿವೆ. ಕ್ಯಾಸಿಯೋಗಳ ಹಾವಳಿಯಲ್ಲಿ ಸಾಂಪ್ರದಾಯಿ ಹಾರ್ಮೋನಿಯಂಗಳು ತೆರೆ ಮರೆಗೆ ಸರಿಯುತ್ತಿವೆ. ಇವುಗಳ ಮತ್ತು ಕಲಾವಿದರ ಉಳಿವೆಗಾಗಿ ಇಲಾಖೆಗಳು ಹಾಗೂ ಅಭಿಮಾನಿಗಳು ಪ್ರಯತ್ನಿಸಬೇಕಾಗಿದೆ.
-ಕಿರಣ ಶ್ರೀಶೈಲ ಆಳಗಿ