ಕಕ್ಕೇರಾ: ಸಾಮಾಜಿಕ, ರಾಜಕೀಯ, ಆರ್ಥಿಕವಾಗಿ ಮಹಿಳಾ ಸಮಾಜ ಅಭಿವೃದ್ಧಿಯಾಗಲು ಶಿಕ್ಷಣ ಅವಶ್ಯ ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಡಿ.ಎನ್.ಹಳ್ಳಿ ಹೇಳಿದರು.
ತಿಂಥಣಿ ಗ್ರಾಪಂ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರತಿಯೊಂದು ರಂಗದಲ್ಲಿಯೂ ಮಹಿಳೆ ಸಾಧನೆ ಮಾಡಬೇಕಾಗಿದೆ. ಜೀವನದಲ್ಲಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕು. ಮಹಿಳೆಯರಿಗಾಗಿ ಸರಕಾರ ಹಲವಾರು ಯೋಜನೆ ರೂಪಿಸಿದೆ. ಅವುಗಳನ್ನು ಸದುಪಯೋಗಿಸಿಕೊಂಡು ಸಬಲರಾಗಬೇಕು ಎಂದು ಹೇಳಿದರು.
ಮಹಿಳೆಯರಿಗೂ ವಿಶೇಷ ಕಾನೂನು ರೂಪಿಸಲಾಗಿದೆ. ಪುರುಷರಿಗೆ ಇರುವ ಹಕ್ಕುಗಳು ಮಹಿಳೆಯರಿಗೂ ಇವೆ. ಹೀಗಾಗಿ ಅನೇಕ ಮಹಿಳಾ ಮಹನೀಯರು ರಾಜಕೀಯ, ಸಾಮಾಜಿಕ, ಸಾಹಿತ್ಯ ಸೇರಿದಂತೆ ನಿರ್ವಹಿಸದ ಕ್ಷೇತ್ರಗಳೇ ಇಲ್ಲ. ಅಂತಹ ಮಹನೀಯರ ಆದರ್ಶದೊಂದಿಗೆ ಮಹಿಳೆಯರು ಮುಂದೆ ಬರಬೇಕು ಎಂದು ಹೇಳಿದರು.
ಈ ಹಿಂದೆ ಮಹಿಳೆಯರಿಗೆ ಸಮಾಜದ ಪ್ರತಿಯೊಂದು ರಂಗದಲ್ಲಿ ಸಮಾನತೆ ಇರಲಿಲ್ಲ. ರಾಜಕೀಯ, ಆರ್ಥಿಕ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತಾರತಮ್ಯ ಅನುಸರಿಸಲಾಗುತ್ತಿತ್ತು. ಈ ಉದ್ದೇಶದಿಂದ ಅನೇಕ ಕ್ರಾಂತಿಕಾರಕ ಹೋರಾಟ ನಡೆಸಲಾಯಿತು. ವಿವಿಧ ಬೇಡಿಕೆದೊಂದಿಗೆ ಮಹಿಳಾ ಕಾರ್ಮಿಕ ಸಂಘಟನೆ ಹೋರಾಟಕ್ಕೆ ಧುಮುಕಿದ ಪರಿಣಾಮ ಈಗ ಎಲ್ಲದರಲ್ಲಿಯೂ ಮಹಿಳೆಯರು ಮಿಂಚಲು ಕಾರಣವಾಗಿದೆ. ಹೀಗಾಗಿ ಸಂಯುಕ್ತ ರಾಷ್ಟ್ರಗಳು ಮಹಿಳೆಯರಿಗೆ ಸ್ಫೂರ್ತಿದಾಯಕ ಹಾಗೂ ಸಮಾನತೆಗಾಗಿ ಅಂತಾರಾಷ್ಟ್ರೀಯ ಮಹಿಳೆ ದಿನ ಆಚರಿಸಲು ಕರೆ ನೀಡಿದವು ಎಂದು ಹೇಳಿದರು.
ಮತದಾನದ ಹಕ್ಕು ಬೇಡಿಕೆಯಾಗಿ ಇಟ್ಟುಕೊಂಡು 1911ರಲ್ಲಿ ಮೊದಲ ಬಾರಿ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು. 1903ರಲ್ಲಿ ಅಮೆರಿಕದಲ್ಲಿ ಮತದಾನ ಹಕ್ಕಿಗಾಗಿ ಹೋರಾಟ ಪ್ರಾರಂಭಿಸಲಾಯಿತು. ನಂತರ ರಾಜಕೀಯ, ಆರ್ಥಿಕ, ಔದ್ಯೋಗಿಕವಾಗಿ ಮುಂದೆ ಬರಲು ಮಹಿಳೆಯರ ಟ್ರೇಡ್ ಯೂನಿಯನ್ ಲೀಗ್ ಸ್ಥಾಪಿಸಲಾಯಿತು ಎಂದು ವಿವರಿಸಿದರು.
ವಸತಿ ಯೋಜನೆ ನೋಡಲ್ ಅಧಿಕಾರಿ ರವಿಚಂದ್ರರಡ್ಡಿ, ಶಿಕ್ಷಕರಾದ ಕರಿಯಪ್ಪ ಅಜ್ಜಿ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಗ್ರಾಪಂ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿ ಇದ್ದರು.