ಕಕ್ಕೇರಾ: ಪಟ್ಟಣದಲ್ಲಿರುವ ಸುಸಜ್ಜಿತ ಸಾರ್ವಜನಿಕ
ಗ್ರಂಥಾಲಯ ಓದುಗರಿಗೆ ಅತ್ಯುತ್ತಮ ಎನಿಸಿದೆ. ಈ ಹಿಂದೆ ಗ್ರಾಪಂ ಇದ್ದಾಗ ಅದರ ವ್ಯಾಪ್ತಿಗೆ ಒಳ್ಳಪಟ್ಟಿತ್ತು. ಪುರಸಭೆಯಾಗಿ ಎರಡು ವರ್ಷಗಳು ಆಗಿದ್ದರಿಂದ ಸದ್ಯ ಪುರಸಭೆ ವ್ಯಾಪ್ತಿಗೆ ಸೇರಿದೆ.
ಸಾರ್ವಜನಿಕ ಗ್ರಂಥಾಲಯವನ್ನಾಗಿ ನಡೆಸಿಕೊಂಡು ಬರಲಾಗಿದೆ. ಪ್ರತಿ ನಿತ್ಯ ಓದುಗರು ಸೇರಿ ತಿಂಗಳಿಗೆ ಐದುನೂರು ಜನರು ಓದಲು ಸದ್ಬಳಿಕೆ ಮಾಡಿಕೊಳ್ಳುತ್ತಿದ್ದಾರೆ. ಕುಡಿಯುವ ನೀರು ಸೇರಿದಂತೆ ಎಲ್ಲ ಸೌಕರ್ಯ ಹೊಂದಿದೆ.
ಗ್ರಂಥಾಲಯದಲ್ಲಿ 3000 ಸಾವಿರ ಪುಸ್ತಕಗಳ ಸಂಗ್ರಹ ಇದೆ. ಎರಡು ದಿನ ಪತ್ರಿಕೆ ತರಿಸಿಕೊಳ್ಳಲಾಗುತ್ತಿದೆ. ಒಂದು ಮಾಸ ಪತ್ರಿಕೆ ಹಾಕಿಸಲಾಗುತ್ತಿದೆ. ಇದಕ್ಕಾಗಿ ತಿಂಗಳಿಗೆ 400 ರೂ. ವೆಚ್ಚ ಭರಿಸಲಾಗುತ್ತಿದೆ ಎಂದು ಗ್ರಂಥಪಾಲಕರು ಹೇಳುತ್ತಾರೆ.
ಶಾಖಾ ಗ್ರಂಥಾಲಯ ಆಗಲಿ: ಪುರಸಭೆ ಹೊಂದಿದ ಪಟ್ಟಣಕ್ಕೆ ಸಾರ್ವಜನಿಕ ಗ್ರಂಥಾಲಯ ಬದಲಾಗಿ ಶಾಖಾ ಗ್ರಂಥಾಲಯವನ್ನಾಗಿಸಬೇಕು ಎಂದು ಈ ಭಾಗದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಂದ ಒತ್ತಾಯ ಕೇಳಿ ಬರುತ್ತಿದೆ. ಅದಾಗ್ಯೂ ಮೇಲಾಧಿಕಾರಿಗಳು ಕೂಡ ಶಾಖಾ ಗ್ರಂಥಾಲವನ್ನಾಗಿ ಮಾಡಲು ಒಪ್ಪಿಕೊಂಡಿದ್ದು, ಅಲ್ಲದೇ ಈ ಕುರಿತು ನೋಟಿಸ್ ಕೂಡ ನೀಡಲಾಗಿದೆ ಎನ್ನಲಾಗಿದೆ.
ಗ್ರಂಥಾಲಯ ನಿರ್ವಹಣೆಗಾಗಿ ಇಲ್ಲಿಯ ಪುರಸಭೆಯಿಂದ ಒಟ್ಟು 28000 ರೂ.(ಎರಡು ವರ್ಷದ) ಅನುದಾನ ನೀಡಲಾಗಿದೆ. ಗ್ರಂಥಾಲಯದಲ್ಲಿ ಸದಸ್ಯತ್ವ ಪಡೆಯುವ ಪ್ರತಿಯೊಬ್ಬರಿಂದ 100 ರೂ. ಶುಲ್ಕ ಪಡೆಯಲಾಗುತ್ತಿದೆ. ಇವರೆಗೂ 325 ಜನರು ಸದಸ್ಯತ್ವ ಪಡೆದಿದ್ದಾರೆ.
ಒಟ್ಟಾರೆ ಚಿಕ್ಕ ಚೊಕ್ಕದಾಗಿರುವ ಗ್ರಂಥಾಲಯವನ್ನು ಶಾಖಾ ಗ್ರಂಥಾಲಯವನ್ನಾಗಿಸಬೇಕು ಎಂಬುದೇ ಇಲ್ಲಿನ ಬಹುತೇಕ ಓದುಗರ ಅನಿಸಿಕೆಯಾಗಿದೆ.