Advertisement

Kaikamba: ಎಚ್ಚರ,ಕುಸಿಯುತ್ತಿದೆ ಬೆಳ್ಳಿಬೆಟ್ಟು!;ಗುರುಪುರದ ಬಳಿಯ ಮೂಳೂರಿನಲ್ಲಿ ಗುಡ್ಡ ಜರಿತ

04:09 PM Sep 29, 2024 | Team Udayavani |

ಕೈಕಂಬ: ಕೇರಳದ ವಯನಾಡ್‌, ಉತ್ತರ ಕನ್ನಡದ ಶಿರೂರಿನಲ್ಲಿ ಸಂಭವಿಸಿದ ಪ್ರಾಕೃತಿಕ ದುರಂತಗಳು ಕಣ್ಣೆದುರಿಗೇ ಇವೆ. ವಾಮಂಜೂರು ಸಮೀಪದ ಕೆತ್ತಿಕಲ್‌ನಲ್ಲಿ ಕೂಡಾ ಅಪಾಯ ತೆರೆದುಕೊಂಡಿದೆ. ಇದರ ನಡುವೆ ಗುರುಪುರ ಸಮೀಪದ ಬೆಳ್ಳಿಬೆಟ್ಟು ಪ್ರದೇಶದಲ್ಲೂ ದೊಡ್ಡ ಪ್ರಮಾಣದ ಗುಡ್ಡ ಕುಸಿತ ಸಂಭವಿಸಿದ್ದು, ಯಾವುದೇ ಕ್ಷಣ ಅಪಾಯ ಎದುರಾಗುವ ಆತಂಕ ಮೂಡಿದೆ.
ಕೆತ್ತಿ ಕಲ್‌ ಬಳಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಗುಡ್ಡ ಜರಿತ ಸಂಭವಿಸಿದಂತೆ, ಗುರುಪುರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮೂಳೂರು ಗ್ರಾಮದ ಬೆಳ್ಳಿಬೆಟ್ಟು ಪ್ರದೇಶದಲ್ಲೂ ಗುಡ್ಡ ಕುಸಿದಿದೆ. ಗುಡ್ಡದ ಮಣ್ಣು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದಿದ್ದು, ಗುಡ್ಡದಲ್ಲಿನ ಮರಗಳು ಕೂಡ ತಲೆ ಕೆಳಗಾಗಿ ಅದರೊಂದಿಗೇ ಬಂದಿವೆ.

Advertisement

ಎರಡು ಬಾರಿ ಕುಸಿತ
ಈಗಾಗಲೇ ಜು.25 ಮತ್ತು ಜು. 31ರಂದು ಎರಡು ಬಾರಿ ಗುಡ್ಡ ಜರಿತವಾಗಿ ಮಣ್ಣು ಕುಸಿದು ಹೆದ್ದಾರಿಗೆ ಬಂದು ಬಿದ್ದು ಕೆಲಕಾಲ ವಾಹನ ಸಂಚಾರಕ್ಕೆ ತಡೆಯಾಗಿತ್ತು. ಈ ಘಟನೆಯಿಂದ ಯಾವುದೇ ಪ್ರಾಣಾ ಪಾಯವಾಗಿಲ್ಲವಾದರೂ ಎಚ್ಚರಿಕೆ, ಅಪಾಯದ ಮುನ್ಸೂಚನೆಯನ್ನು ನೀಡಿದೆ.

ಕುಸಿತಕ್ಕೆ ಕಾರಣವೇನು?
ಕೆತ್ತಿಕಲ್‌ನಲ್ಲಿ ರಾ. ಹೆದ್ದಾರಿ ಕಾಮಗಾರಿ ಒಂದೇ ಅಲ್ಲ, ಈ ಭಾಗದಿಂದ ಮಣ್ಣನ್ನು ಜೆಸಿಬಿ ಮೂಲಕ ಬೇರೆ ಕಡೆ ಒಯ್ಯುವ ಮಣ್ಣು ಮಾಫಿಯಾದಿಂದ ಅಪಾಯ ಹೆಚ್ಚಾಗಿದೆ ಎಂಬ ದೂರು ಕೇಳಿಬಂದಿತ್ತು. ಇದೇ ರೀತಿಯ ಪರಿಸ್ಥಿತಿ ಬೆಳ್ಳಿಬೆಟ್ಟುವಿನಲ್ಲೂ ಇದೆ. ಗುಡ್ಡದ ಮಣ್ಣನ್ನು ಜೆಸಿಬಿಗಳ ಮೂಲಕ ಅಗೆದು ಟಿಪ್ಪರ್‌ನಲ್ಲಿ ಕೊಂಡೊಯ್ಯು ವುದು ಈ ಗುಡ್ಡ ಕುಸಿತಕ್ಕೆ ಕಾರಣವೆಂದು ಅಲ್ಲಿನ ನಿವಾಸಿಗಳು ಹೇಳುತ್ತಾರೆ.

ಎಲ್ಲಿದೆ ಈ ಪ್ರದೇಶ?
ಮಂಗಳೂರು -ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ 169ರ ಪೊಳಲಿ ದ್ವಾರ ಮತ್ತು ಗುರುಪುರ ಪೇಟೆಯ ಮಧ್ಯೆ ಬೆಳ್ಳಿಬೆಟ್ಟು ಪ್ರದೇಶವಿದೆ. ಕಿರಿದಾದ ಹೆದ್ದಾರಿ ತಿರುವುಗಳಿಂದ ಕೂಡಿದೆ. ಇನ್ನೊಂದೆಡೆ ಹೊಸ ರಾಷ್ಟ್ರೀಯ ಕಾಮಗಾರಿ ನಡೆಯುತ್ತಿದ್ದು, ಅದು ಬೇರೆ ಹಾದಿಯಲ್ಲಿ ಸಾಗುತ್ತಿದೆ.

Advertisement

ತಗ್ಗು ಪ್ರದೇಶದ ಮನೆಗಳಿಗೆ ಅಪಾಯ
ಕಳೆದ ಮಳೆಗಾಲದಲ್ಲಿ ಗುಡ್ಡ ಕುಸಿತದಿಂದ ಎರಡು ಬಾರಿ ರಸ್ತೆ ತಡೆಯಾಗಿದೆ. ಹೀಗೇ ಬಿಟ್ಟರೆ ಮುಂದೆ ಅದು ಇನ್ನಷ್ಟು ಕುಸಿದು ಹೆದ್ದಾರಿ ಮತ್ತು ಅದನ್ನೂ ದಾಟಿ ಕೆಳಗೆ ಉರುಳುವ ಅಪಾಯವಿದೆ. ಕೆಳಗಡೆ ತಗ್ಗು ಪ್ರದೇಶದಲ್ಲಿ ಸಾಕಷ್ಟು ಮನೆಗಳಿದ್ದು, ಅವುಗಳ ಮೇಲೆ ಗುಡ್ಡವೇ ಎರಗುವ ಅಪಾಯವೂ ಇದೆ. ಗುರುಪುರದಲ್ಲಿ ಕೆಲವು ವರ್ಷಗಳ ಹಿಂದೆ ಗುಡ್ಡವೊಂದು ಜಾರಿ ಹಲವು ಮನೆಗಳನ್ನು, ಜೀವಗಳನ್ನು ಆಪೋಷನ ಪಡೆದಿತ್ತು. ಬೆಳ್ಳಿಬೆಟ್ಟು ಭಾಗದ ಸಮೀಪದಲ್ಲಿಯೇ 100 ಮೀ.ದೂರದ ಗುಡ್ಡದಲ್ಲಿ ಕೆಲವು ಮನೆಗಳ ನಿರ್ಮಾಣವೂ ಆಗುತ್ತಿದೆ. ಗುಡ್ಡ ಕುಸಿದರೆ ಈ ಮನೆಗಳಿಗೂ ಅಪಾಯ ತರಲಿದೆ. ಅದಕ್ಕಿಂತ ಮುಂಚೆಯೇ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ.

-ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next