Advertisement
Related Articles
Advertisement
ಈ ದೇವಸ್ಥಾನದ ಪ್ರಮುಖ ಆಕರ್ಷಣೆ ಇಲ್ಲಿರುವ ಚನ್ನಕೇಶವನ ಆಳೆತ್ತರದ ಮೂರ್ತಿ. ಈ ಮೂರ್ತಿಯ ಕೆತ್ತನೆಯ ಹಿಂದೆ ಒಂದು ಸುಂದರ ಕಥೆಯಿದೆ. ಶಿಲ್ಪಗಳನ್ನು ಕೆತ್ತುವುದರಲ್ಲಿ ಹೆಸರುವಾಸಿಯಾಗಿದ್ದ ಜಕಣಾಚಾರಿ ಶಿಲ್ಪಕಲೆಯಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕೆಂಬ ಉದ್ದೇಶದಿಂದ ತನ್ನ ಹೆಂಡತಿ ಮಗುವನ್ನು ಬಿಟ್ಟು ಗುರುವಿನ ಹುಡುಕಾಟದಲ್ಲಿ ಹೊರಟುಬಿಡುತ್ತಾನೆ. ಹೀಗೆ ತಿರುಗುತ್ತಾ ತಿರುಗುತ್ತಾ ಎದುರಾದ ದೇವಸ್ಥಾನಗಳಲ್ಲಿ ಮೂರ್ತಿಗಳನ್ನು ಕೆತ್ತುತ್ತಾನೆ. ಅವುಗಳಲ್ಲಿ ಪ್ರಸಿದ್ಧವಾದುದು ಬೇಲೂರು- ಹಳೇಬೀಡಿನ ಶಿಲ್ಪಗಳು. ಅವನು ತನ್ನ ಕೆಲಸದಲ್ಲಿ ಎಷ್ಟು ತಲ್ಲೀನನಾಗಿಬಿಡುತ್ತಾನೆಂದರೆ ತನ್ನ ಹೆಂಡತಿ ಮಗುವನ್ನು ಮರೆತೇಬಿಡುತ್ತಾನೆ.
ಇತ್ತ ಜಕಣಾಚಾರಿಯ ಮಗ ಡಕಣಾಚಾರಿಯೆಂಬ ಹೆಸರಿನಿಂದ ದೊಡ್ಡವನಾಗುತ್ತಾನಲ್ಲದೆ, ತನ್ನ ತಂದೆಯ ಶಿಲ್ಪಕಲೆಯನ್ನು ತಾನೂ ಮೈಗೂಡಿಸಿಕೊಂಡಿರುತ್ತಾನೆ. ತನ್ನ ತಂದೆಯನ್ನು ಹುಡುಕುತ್ತಾ ಬೇಲೂರಿಗೆ ಬರುತ್ತಾನೆ. ಆ ಸಮಯದಲ್ಲಿ ಚನ್ನಕೇಶವ ದೇವಸ್ಥಾನದ ನಿರ್ಮಾಣ ಕಾರ್ಯ ನಡೆಯುತ್ತಿರುತ್ತದೆ. ಅವನು ಜಕಣಾಚಾರಿಯ ಬಳಿ ತಾನು ಅವರ ಮಗನೆಂದು ಹೇಳುವುದಿಲ್ಲ.
ಮೌನವಾಗಿ ತಂದೆಯ ಕೆಲಸವನ್ನು ಗಮನಿಸುತ್ತಾನೆ. ಆಗ ಅವನಿಗೆ ಜಕಣಾಚಾರಿ ಕೆತ್ತಿದ್ದ ಚನ್ನಕೇಶವನ ಮೂರ್ತಿಯಲ್ಲಿ ದೋಷವಿರುವುದು ಕಂಡು ಬರುತ್ತದೆ. ಅದನ್ನು ಹೇಳುತ್ತಾನೆ. ಆಗ ಜಕಣಾಚಾರಿ “ಹಾಗೇನಾದರೂ ದೋಷವಿದ್ದರೆ ತನ್ನ ಬಲಗೈಯನ್ನು ಕತ್ತರಿಸಿಕೊಳ್ಳುತ್ತೇನೆ’ ಎಂದು ಹೇಳುತ್ತಾನೆ. ಮೂರ್ತಿಯ ಪರೀಕ್ಷೆ ನಡೆಯುತ್ತದೆ. ಅದರ ಸಲುವಾಗಿ ಮೂರ್ತಿಯ ತುಂಬಾ ಗಂಧವನ್ನು ತೇಯ್ದು ಹಚ್ಚಲಾಗಿರುತ್ತದೆ. ಹೊಟ್ಟೆಯ ಭಾಗವನ್ನು ಬಿಟ್ಟು ಮೂರ್ತಿಯ ಉಳಿದೆಲ್ಲಾ ಭಾಗ ಒಣಗುತ್ತದೆ. ಹೊಟ್ಟೆಯ ಭಾಗದಲ್ಲಿ ನೋಡಿದಾಗ ಅಲ್ಲಿ ಮರಳು, ಕಪ್ಪೆ, ನೀರು ಸಿಗುತ್ತದೆ. ತಪ್ಪನ್ನು ಅರಿತ ಜಕಣಾಚಾರಿ ಮಾತು ಕೊಟ್ಟಂತೆ ತನ್ನ ಬಲಗೈಯನ್ನು ಕತ್ತರಿಸಿಕೊಳ್ಳುತ್ತಾನೆ. ನಂತರ ಅವನಿಗೆ ಡಕಣಾಚಾರಿ ತನ್ನ ಸ್ವಂತ ಮಗನೆಂದು ಗೊತ್ತಾಗುತ್ತದೆ.
ತನ್ನ ಸ್ವಂತ ಊರಾದ ಕ್ರೀಡಾಪುರದಲ್ಲೂ ಚನ್ನಕೇಶವಸ್ವಾಮಿಯ ದೇವಸ್ಥಾನವನ್ನು ನಿರ್ಮಿಸಬೇಕೆಂದು ಜಕಣಾಚಾರಿಗೆ ಮನಸ್ಸಾಗುತ್ತದೆ. ಅಂತೆಯೇ ತನ್ನ ಊರಿಗೆ ಬಂದ ಜಕಣಾಚಾರಿ ಬರಿ ಎಡಗೈಯಲ್ಲೇ ಮಗನ ಸಹಾಯದಿಂದ ದೇವಸ್ಥಾನ ಹಾಗೂ ಸುಂದರ ಚನ್ನಕೇಶವನ ಮೂರ್ತಿಯನ್ನು ನಿರ್ಮಿಸುತ್ತಾನೆ. ದೇವಸ್ಥಾನ ಕಾರ್ಯ ಮುಗಿಯುವಷ್ಟರಲ್ಲಿ ಚನ್ನಕೇಶವನ ಕೃಪೆಯಿಂದ ಜಕಣಾಚಾರಿಗೆ ಬಲಗೈ ಬರುತ್ತದೆ. ಆದಕ್ಕೇ ಊರಿಗೆ “ಕೈದಳ’ ಎಂಬ ಹೆಸರು ಬಂದಿತೆಂದು ಪ್ರತೀತಿ.
ತನ್ನ 86ನೇ ವಯಸ್ಸಿನಲ್ಲಿ ಅಮರಶಿಲ್ಪಿ ಜಕಣಾಚಾರಿ ಎಡಗೈಯಲ್ಲಿ ಕೆತ್ತಿರುವ ಈ ಮೂರ್ತಿ ಅತಿ ಸುಂದರ. ಕೃಷ್ಣಶಿಲೆಯಲ್ಲಿ ಕೆತ್ತಲಾಗಿರುವ ಆಳೆತ್ತರದ ಮೂರ್ತಿ ಎಂಥವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ. ಜಕಣಾಚಾರಿಯ ಶಿಲ್ಪಕಲಾ ಚಾತುರ್ಯಕ್ಕೆ ಹಿಡಿದ ಕೈಗನ್ನಡಿ ಈ ಮೂರ್ತಿ. ಮೂರ್ತಿಯ ಮುಂಭಾಗದಲ್ಲಿರುವ ಪ್ರಭಾವಳಿಯಲ್ಲಿ ದಶಾವತಾರದ ಸುಂದರ ಚಿತ್ರಗಳನ್ನು ಅತ್ಯಾಕರ್ಷಕವಾಗಿ ಕೆತ್ತಲಾಗಿದೆ.
ಚನ್ನಕೇಶವಸ್ವಾಮಿಯ ಕೈಬೆರಳಿನಲ್ಲಿರುವ ಉಂಗುರದಲ್ಲಿ ಕಡ್ಡಿಯನ್ನು ತೂರಿಸಬಹುದಾಗಿದ್ದು ಈಗಿನ “ಗ್ರಿಲ್ ವರ್ಕ್’ ಕೆಲಸದ ತಂತ್ರಜ್ಞಾನ ಅಗಲೇ ಬಳಕೆಯಲ್ಲಿತ್ತು ಎಂಬುದಕ್ಕೆ ಸಾಕ್ಷಿ. ಸ್ವಾಮಿಯು ಹಿಡಿದಿರುವ ಶಂಖ, ಚಕ್ರ, ಗದೆಯನ್ನು ಅತ್ಯಂತ ಸೂಕ್ಷವಾಗಿ ಕೆತ್ತಲಾಗಿದ್ದು ಉಡುಗೆ ಆಭರಣಗಳು ಸಹ ಅತ್ಯಂತ ಸೂಕ್ಷ¾ವಾಗಿ ಕೆತ್ತಲ್ಪಟ್ಟಿವೆ. ಪ್ರಭಾವಳಿಯಲ್ಲಿರುವ ಸೂಕ್ಷ್ಮ ಕೆತ್ತನೆಯ ರಂಧ್ರಗಳನ್ನು ಬೆಳಕಿನ ಹಿನ್ನೆಲೆಯಲ್ಲಿ ನೋಡಬಹುದು. ದೇವಾಲಯದ ಒಳಾಂಗಣ ಕೆತ್ತನೆ ಸಹ ಮನಸೂರೆಗೊಳ್ಳುತ್ತದೆ.
ಪ್ರಕಾಶ್ ಕೆ.ನಾಡಿಗ್, ತುಮಕೂರು