ಸಾಗರ: ಪಟ್ಟಣದಲ್ಲಿ ಕೆಲವು ಗ್ರಾಮ ಲೆಕ್ಕಾಧಿಕಾರಿಗಳು ಕಚೇರಿ ಮಾಡಿಕೊಂಡಿದ್ದಾರೆ. ರೈತರು ಗ್ರಾಮ ಲೆಕ್ಕಾಧಿಕಾರಿಗಳನ್ನು ಹುಡುಕಿಕೊಂಡು ಪಟ್ಟಣಕ್ಕೆ ಬರುವ ದುಃಸ್ಥಿತಿ ನಿರ್ಮಾಣವಾಗಿದ್ದು, ತಕ್ಷಣ ತಹಶೀಲ್ದಾರ್ ಅಂತಹ ಗ್ರಾಮ ಲೆಕ್ಕಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲೇ ಕೆಲಸ ಮಾಡುವಂತೆ ಸೂಚನೆ ನೀಡಬೇಕು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.
ಇಲ್ಲಿನ ತಾಲೂಕು ಕಚೇರಿಗೆ ಸೋಮವಾರ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ದಿಢೀರ್ ಭೇಟಿ ನೀಡಿ ತಹಶೀಲ್ದಾರ್ ಜೊತೆ ಚರ್ಚೆ ನಡೆಸಿದ ಅವರು, ಜನರನ್ನು ಕಚೇರಿಗೆ ಓಡಾಡಿಸಬೇಡಿ. ಅದರಲ್ಲಿಯೂ ಹಳ್ಳಿಗಳಿಂದ ಬಂದವರು ತಮ್ಮ ಕೆಲಸ ಮಾಡಿಸಿಕೊಳ್ಳಲು ದಿನಗಟ್ಟಲೆ ಕಾಯುವ ದುಸ್ಥಿತಿ ನಿರ್ಮಾಣವಾಗಿದೆ ಎಂದರು.
ತಾಲೂಕಿನಲ್ಲಿ 94 ಸಿ, 94ಸಿಸಿ ಅಡಿಯಲ್ಲಿ ಬಾಕಿ ಇರುವ ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡಿ ಹಕ್ಕುಪತ್ರ ಕೊಡುವತ್ತ ಗಮನ ಹರಿಸಬೇಕು. ಶಾಸಕರು ಉತ್ಸುಕರಾಗಿದ್ದು ಅಧಿಕಾರಿಗಳು ಸಭೆ ಕರೆಯುವತ್ತ ಗಮನ ಹರಿಸಬೇಕು. ಮಳೆ ಪ್ರಾರಂಭವಾಗಿರುವುದರಿಂದ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡಿ ಸಮಸ್ಯೆ ಪರಿಹಾರಕ್ಕೆ ಗಮನ ಹರಿಸುವಂತೆ ಸೂಚನೆ ನೀಡಿ ಎಂದು ತಹಶೀಲ್ದಾರ್‌ಗೆ ತಿಳಿಸಿದರು.
ಕಚೇರಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಕೆಲವು ಅಧಿಕಾರಿಗಳು ಮಾಡುವ ತಪ್ಪಿನಿಂದ ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತದೆ. ಬಗರ್‌ಹುಕುಂ ಅಡಿ ಸಾಕಷ್ಟು ಜನರು ಅರ್ಜಿ ಸಲ್ಲಿಸಿದ್ದಾರೆ. ತಕ್ಷಣ ಅರ್ಜಿಯನ್ನು ವಿಲೇವಾರಿ ಮಾಡಿ ಹಕ್ಕುಪತ್ರ ಕೊಡುವ ಕೆಲಸ ಮಾಡಲು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತಾರಾಮೂರ್ತಿ, ಗಿರೀಶ್ ಕೋವಿ, ಎಸ್.ಲಿಂಗರಾಜ್, ಸಂದೇಶ್ ಇನ್ನಿತರರು ಹಾಜರಿದ್ದರು.
ಇದನ್ನು ಓದಿ: India:ಭಾರತದಲ್ಲಿ ವಿದ್ಯುತ್ ಬಳಕೆ ಪ್ರಮಾಣ ಶೇ.9ರಷ್ಟು ಹೆಚ್ಚಳ;ಜೂನ್ ನಲ್ಲಿ 152 BU ಬಳಕೆ